ತಾಳಿಕೋಟಿ 10: ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ವೇಗವಾಗಿ ಮಾಡಲು ಅನುದಾನದ ತುಂಬಾ ತೊಂದರೆ ಇದೆ ಇದರ ಮಧ್ಯೆಯೂ ಶಕ್ತಿಮೀರಿ ಪ್ರಯತ್ನಿಸಿ ಅನುದಾನ ತಂದು ಕೆಲಸ ಮಾಡುತ್ತಿದ್ದೇನೆ, ಇದರಲ್ಲಿ ಕ್ಷೇತ್ರದ ಎಲ್ಲಾ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಉತ್ತಮ ರಸ್ತೆ, ಸಮರ್ಕ ವಿದ್ಯುತ್, ಶಿಕ್ಷಣ ಹಾಗೂ ಆರೋಗ್ಯಕ್ಕೆ ಆದ್ಯತೆ ನೀಡಿ ಕೆಲಸ ಮಾಡಲಾಗುತ್ತಿದೆ ಇದಕ್ಕೆ ನಿಮ್ಮೆಲ್ಲರ ಸಹಕಾರ ಇರಲಿ ಎಂದು ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ( ಕು.ಸಾಲವಾಡಗಿ) ಹೇಳಿದರು.
ಗುರುವಾರ ತಾಲೂಕಿನ ಪೀರಾಪೂರ ಗ್ರಾಮದಲ್ಲಿ 2022- 23ನೇ ಸಾಲಿನ ಜಿಲ್ಲಾ ಪಂಚಾಯತ್ ನ 3054 ಲಮಸಮ್ ಯೋಜನೆ ಅಡಿಯಲ್ಲಿ, ಕೆ.ಆರ್.ಐ.ಡಿ.ಎಲ್. ಇಲಾಖೆ ವ್ಯಾಪ್ತಿಯ ರೂ.2 ಕೋಟಿ ಮೊತ್ತದ ಪೀರಾಪೂರ- ಅಮಲ್ಯಾಳ ಸಂಪರ್ಕ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಈ ರಸ್ತೆ ಅಭಿವೃದ್ಧಿಪಡಿಸುವಂತೆ ಈ ಭಾಗದ ಜನರು ಬಹುದಿನಗಳ ಬೇಡಿಕೆಯಾಗಿತ್ತು, ಇಲ್ಲಿಂದ ಅಮಲ್ಯಾಳ ಗ್ರಾಮದಲ್ಲಿರುವ ತಾಳಿಕೋಟಿ ಖಾಸ್ಗತೇಶರ ಮಠದ ಶಾಖಾ ಮಠಕ್ಕೆ ಭಕ್ತರಿಗೆ ಹೋಗಲು ಅದರಲ್ಲೂ ಶಾಲಾ ಮಕ್ಕಳಿಗೆ ಇಲ್ಲಿಂದ ಹೋಗಲು ತುಂಬಾ ತೊಂದರೆಯಾಗುತ್ತಿತ್ತು, ಸಿದ್ದಲಿಂಗ ಶ್ರೀಗಳು ಇದರ ಕುರಿತು ತಿಳಿಸಿದ್ದರು ಇದೀಗ ಅವರ ಅಮೃತ ಹಸ್ತದಿಂದಲೇ ಈ ಕಾಮಗಾರಿಯ ಭೂಮಿ ಪೂಜೆ ನೆರವೇರಿದೆ ಇದು ನನ್ನ ಸೌಭಾಗ್ಯ ಎಂದು ಭಾವಿಸುತ್ತೇನೆ, ನನಗೆ ಅಧಿಕಾರ ಮುಖ್ಯವಲ್ಲ ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಮುಖ್ಯ, ಕೆಲವರು ನನ್ನ ಕಾರ್ಯ ಕುರಿತು ಟೀಕಿಸುತ್ತಾರೆ ಅದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ನನಗೆ ನಿಮ್ಮ ವಿಶ್ವಾಸ ಮುಖ್ಯ. ಸದರಿ ರಸ್ತೆಯ ಕಾಮಗಾರಿ ಗುಣಮಟ್ಟದಾಗಿರುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು. ಜೆಡಿಎಸ್ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ, ಜಿಪಂ ಮಾಜಿ ಸದಸ್ಯ ಬಸನಗೌಡ ವಣಕಿಹಾಳ ಮಾತನಾಡಿ ಈ ಭಾಗದ ಜನರ ಬಹು ದಿನಗಳ ಬೇಡಿಕೆ ಇಂದು ಈಡೇರಿದೆ, ಇದಕ್ಕೆ ನಾವು ಗ್ರಾಮಸ್ಥರು ಪರವಾಗಿ ಶಾಸಕ ರಾಜುಗೌಡರಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ಅವರೊಬ್ಬ ನುಡಿದಂತೆ ನಡೆಯುವ ವ್ಯಕ್ತಿ ಅನುದಾನದ ತೊಂದರೆಯ ಮಧ್ಯೆಯೂ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ ಇದಕ್ಕೆ ನಮ್ಮೆಲ್ಲರ ಸಹಕಾರ ಅವರಿಗೆ ಬೇಕು ಎಂದರು.
ಸಾನಿಧ್ಯವಯಿಸಿ ತಮ್ಮ ಆಶೀರ್ವಚನದಲ್ಲಿ ಪೂಜ್ಯ ಸಿದ್ದಲಿಂಗ ದೇವರು ಶಾಸಕ ರಾಜುಗೌಡರು ನಾನು ಕಂಡ ಜನ ಪ್ರತಿನಿಧಿಗಳಲ್ಲಿಯೇ ಅತ್ಯಂತ ಸರಳ ಸಜ್ಜನ ವ್ಯಕ್ತಿ, ಅವರಿಗೆ ಅಧಿಕಾರದ ಯಾವುದೇ ಅಹಂ ಇಲ್ಲ, ಅಧಿಕಾರ ಇಲ್ಲದಾಗ ಹೇಗಿದ್ದರೋ ಈಗಲೂ ಹಾಗೆಯೇ ಇದ್ದಾರೆ ಇಂಥ ವ್ಯಕ್ತಿಗಳು ರಾಜಕಾರಣದಲ್ಲಿ ಸಿಗುವುದು ಅಪರೂಪ. ನಾನು ಈ ರಸ್ತೆ ಕುರಿತು ಕೇವಲ ಒಂದು ಬಾರಿ ಅವರಿಗೆ ವಿನಂತಿ ಮಾಡಿಕೊಂಡಿದ್ದೆ ನನ್ನ ಮಾತನ್ನು ಸಿರಸಾ ವಹಿಸಿ ಅನುಷ್ಠಾನ ಗೊಳಸಿದ್ದಾರೆ ಅದಕ್ಕೆ ಗ್ರಾಮಸ್ಥರ ಪರವಾಗಿ ಧನ್ಯವಾದಗಳನ್ನು ಹೇಳುತ್ತೇನೆ. ಅಧಿಕಾರ ಸಂಪತ್ತು ಯಾವುದು ಶಾಶ್ವತವಲ್ಲ ಎಲ್ಲವನ್ನು ಬಿಟ್ಟು ಒಂದು ದಿನ ನಮಗೆ ಈ ಜಗತ್ತನ್ನು ತೊರೆಯಬೇಕಾಗಿದೆ, ಭೂಮಿಯ ಮೇಲೆ ಇರುವಷ್ಟು ದಿನ ಸತ್ಕರ್ಮಗಳನ್ನು ಮಾಡಿ ಹೋಗಬೇಕಾಗಿದೆ, ಯಾರೊಂದಿಗೂ ದ್ವೇಷ,ಹಗೆತನ ಇಟ್ಟುಕೊಳ್ಳದೆ ಪ್ರೀತಿಯಿಂದ ಬದುಕಲು ಪ್ರಯತ್ನಿಸಿ ಎಂದು ಅವರು ಎರಡು ಕೋಟಿ ಮೊತ್ತದಲ್ಲಿ ಈ ರಸ್ತೆ ನಿರ್ಮಾಣವಾಗಲಿದೆ ಕಾಮಗಾರಿ ನಡೆಯುವಾಗ ಗ್ರಾಮಸ್ಥರು ಸಹಕರಿಸಿ,ರಸ್ತೆ ಆದ ನಂತರ ಕೆಡದಂತೆ ನೋಡಿಕೊಳ್ಳಬೇಕು ಎಂದರು.
ತಾಪಂ ಮಾಜಿ ಅಧ್ಯಕ್ಷ ರಾಜುಗೌಡ ಕೋಳೂರು, ಗ್ರಾಪಂ ಮಾಜಿ ಅಧ್ಯಕ್ಷ ಮಲ್ಲನಗೌಡ ಪೊಲೀಸ ಪಾಟೀಲ, ಸಿದ್ದನಗೌಡ ಅಮಲ್ಯಾಳ, ವಿಶ್ವನಾಥರೆಡ್ಡಿ ನಾಡಗೌಡ( ಶಳ್ಳಗಿ), ಜೆಡಿಎಸ್ ಅಧ್ಯಕ್ಷ ಮಡುಸಾಹುಕಾರ ಬಿರಾದಾರ, ಪ್ರಭುಗೌಡ ಪಾಟೀಲ (ಲಕ್ಕುಂಡಿ), ರಸೂಲ್ ಸಾಬ ನೀರಲಗಿ,ಮೂಸಾ ಕು.ಸಾಲವಾಡಗಿ, ಅರವಿಂದ ಹಾಲಣ್ಣವರ, ಮಾಳಿಂಗರಾಯಾ ಹಾಲಣ್ಣವರ, ಸಿದ್ದನಗೌಡ ಪಾಟೀಲ ಲಕ್ಕುಂಡಿ, ಶಾಸಕರ ಆಪ್ತ ಸಹಾಯಕ ರಾಜಶೇಖರ ಪಾಟೀಲ ಹಾಗೂ ಪೀರಾಪೂರ ಅಮಲ್ಯಾಳ ಗ್ರಾಮದ ಗಣ್ಯರು ಹಿರಿಯರು ಇದ್ದರು.