ದೇವರಹಿಪ್ಪರಗಿ 04: ಮತಕ್ಷೇತ್ರದ ಅಭಿವೃದ್ಧಿಗಾಗಿ ವಿವಿಧ ಇಲಾಖೆಯಿಂದ ಸುಮಾರು 8.46ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಹೇಳಿದರು.
ತಾಲೂಕಿನ ಅಂಬಳೂರ ಗ್ರಾಮದಲ್ಲಿ ಮಂಗಳವಾರದಂದು ಬಾರಖೇಡ-ಬೀಳಗಿ ರಾ.ಹೇ124 ಪಿಡ್ಲೂಡಿ ರಸ್ತೆ ಸುಧಾರಣೆಯ ಕಾಮಗಾರಿಯ ಸುಮಾರು 4.90ಕೋಟಿ ರೂ ವೆಚ್ಚದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಯಾವುದೇ ಒಂದು ಕ್ಷೇತ್ರ ಅಭಿವೃದ್ದಿ ಪಥದತ್ತ ಸಾಗಬೇಕಾದರೆ ಕ್ಷೇತ್ರದ ಜನತೆ ಹಾಗೂ ಸಾರ್ವಜನಿಕರ ಸಹಕಾರ ಮತ್ತು ಜನಪ್ರತಿನಿಧಿಗಳ ನಡುವೆ ಸಾಮರಸ್ಯ ಬೇಕು ಅಂದಾಗ ಮಾತ್ರ ಕ್ಷೇತ್ರ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯವಾಗುತ್ತದೆ. ಒಂದು ವೇಳೆ ಸಾಮರಸ್ಯ ಕೊರತೆ ಉಂಟಾದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಮಾರಕವಾಗುತ್ತದೆ.ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ಅಲ್ಪಸಂಖ್ಯಾತರ ಇಲಾಖೆ ವತಿಯಿಂದ ಬಿ.ಬಿ. ಇಂಗಳಗಿ ಹಾಗೂ ಮಣೂರ ಗ್ರಾಮದ ಅಲ್ಪಸಂಖ್ಯಾತರ ಕಾಲೋನಿಯಲ್ಲಿ ತಲಾ 50 ಲಕ್ಷ ರೂ ವೆಚ್ಚದ ಸಿ.ಸಿ. ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು. ಗಂಗನಹಳ್ಳಿ ಗ್ರಾಮದಲ್ಲಿ ನಾಲಾಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಾಣ ಕಾಮಗಾರಿಯ ಸುಮಾರು 2 ಕೋಟಿ ಹಾಗೂ ತಾಂಬಾ ಗ್ರಾಮಕ್ಕೆ ಹೋಗುವ ಡಾಂಬರ್ ರಸ್ತೆ ನಿರ್ವಹಣೆ ಕಾಮಗಾರಿ ಸುಮಾರು 45 ಲಕ್ಷ ಹಾಗೂ ಹರನಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹೊಸ ಕೊಠಡಿ ನಿರ್ಮಾಣಕ್ಕೆ ಸುಮಾರು 11.04 ಲಕ್ಷ ರೂ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡವ ಮೂಲಕ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ,ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಬೇಕು, ಗುಣಮಟ್ಟದ ಕಾಮಗಾರಿಯಿಂದ ಮಾತ್ರ ಸಾರ್ವಜನಿಕರ ಸಮಸ್ಯೆಗೆ ಮುಕ್ತಿ ಸಾದ್ಯ ಎಂದು ಹೇಳಿದರು.ತಾಲೂಕು ಜೆಡಿಎಸ್ ಅಧ್ಯಕ್ಷರಾದ ಸಾಯಿಬಣ್ಣ ಬಾಗೇವಾಡಿ ಅವರು ಮಾತನಾಡಿ, ಶಾಸಕರಾದ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಅವರು, ಕ್ಷೇತ್ರದ ಪ್ರತಿ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಆದ್ಯತೆ ನೀಡುತ್ತಿದ್ದಾರೆ. ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರದಿಂದ ಅನುದಾನದ ಕೊರತೆ ಇದ್ದು, ಹಂತ ಹಂತವಾಗಿ ಮೂಲಭೂತ ಸೌಕರ್ಯಗಳಿಗೆ ಅನುದಾನ ತರುವ ಮೂಲಕ ಕ್ಷೇತ್ರವನ್ನು ಅಭಿವೃದ್ಧಿಪಥದತ್ತ ಮುನ್ನಡೆಸುತ್ತಿದ್ದಾರೆ ಅವರಿಗೆ ನಾವೆಲ್ಲರೂ ಸಹಕಾರ ನೀಡೋಣ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಎಇಇ ಅರುಣಕುಮಾರ ವಡಿಗೇರಿ, ಲ್ಯಾಂಡ್ ಆರ್ಮಿ ಇಲಾಖೆಯ ಎಇಇ ರಾಜಶೇಖರ ರೆಡ್ಡಿ,ಕಿರಿಯ ಅಭಿ ಯಂತ್ರರುಗಳಾದ ಎಂ.ಎಸ್. ಹೊಸಮನಿ, ಪ್ರಫುಲಕುಮಾರ, ಶರಣುಬಸು ಇಟಗಿ ಸೇರಿದಂತೆ ವಿವಿಧ ಗ್ರಾಮಗಳ ಪ್ರಮುಖರು, ಗಣ್ಯರು, ಇಲಾಖೆಯ ಅಧಿಕಾರಿಗಳು ಹಾಗೂ ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.