ಭಟ್ಕಳ: ಕೇಂದ್ರ ಸರಕಾರ ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಅಡುಗೆ ಅನಿಲ ಸಂಪರ್ಕವನ್ನು ಪ್ರತಿ ಮನೆಗೂ ನೀಡುವ ಯೋಜನೆಯನ್ನು ಹಾಕಿಕೊಂಡಿದ್ದು ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಸುನಿಲ್ ನಾಯ್ಕ ಹೇಳಿದರು.
ಅವರು ಇಲ್ಲಿನ ಪ್ರವಾಸಿ ಬಂಗಲೆಯ ಆವರಣದಲ್ಲಿ ರಂಜನ್ ಇಂಡೇನ್ ಗ್ಯಾಸ್ ಎಜೆನ್ಸಿ ಹಾಗೂ ರಫಾತ್ ಎಜೆನ್ಸಿ ಇವರ ಸಹಯೋಗದಲ್ಲಿ ಎಸ್.ಸಿ./ಎಸ್.ಟಿ. ಮತ್ತು ಅಂತ್ಯೋದಯ ಕಾರ್ಡ ಹೊಂದಿದವರಿಗೆ ಕೇಂದ್ರ ಸರಕಾರದ ಉಜ್ವಲ ಯೋಜನೆಯಡಿಯಲ್ಲಿ ಉಚಿತ ಗ್ಯಾಸ್ ಸಂಪರ್ಕವನ್ನು ನೀಡಿ ಮಾತನಾಡುತ್ತಿದ್ದರು.
ಕೇಂದ್ರ ಸರಕಾರ ಮಹಿಳೆಯರ ಆರೋಗ್ಯದ ಮೇಲೆ ಒಲೆಯಲ್ಲಿನ ಹೊಗೆಯಿಂದ ದುಷ್ಪರಿಣಾಮ ಬೀರುವುದನ್ನು ಮನಗಂಡು ಪ್ರತಿಯೋರ್ವರಿಗೂ ಕೂಡಾ ಗ್ಯಾಸ್ ಸಂಪರ್ಕ ನೀಡಲು ಮುಂದಾಗಿದೆ. ಈ ಮೊದಲು ಗ್ಯಾಸ್ ಸಂಪರ್ಕಕ್ಕೆ ಭಾರೀ ಕಷ್ಟಪಡಬೇಕಾಗಿದ್ದ ಕಾಲ ಒಂದಿತ್ತು. ಆದರೆ ಇಂದು ಉಚಿತ ಗ್ಯಾಸ್ ವಿತರಿಸುತ್ತಿರುವುದು ಕೇಂದ್ರದ ಮೋದಿಜಿ ಸರಕಾರದ ಹೆಮ್ಮೆ ಎಂದರು.
ಪ್ರತಿಯೋರ್ವರೂ ಕೂಡಾ ಗ್ಯಾಸ್ ಸಂಪರ್ಕವನ್ನು ಹೊಂದಿ ಆರೋಗ್ಯವಂತ ಕುಟುಂಬ ಹೊಂದುವಂತೆಯೂ ಅವರು ಕರೆ ನೀಡಿದರು.
ಕಾರ್ಯಕ್ರಮಕ್ಕೂ ಪೂರ್ವ ಇಲ್ಲಿನ ಅಗ್ನಿಶಾಮಕ ಠಾಣೆಯ ಅಧಿಕಾರಿ ರಮೇಶ ಶೆಟ್ಟಿ ಅವರ ನೇತೃತ್ವದಲ್ಲಿ ನೆರೆದ ಮಹಿಳೆಯರಿಗೆ ಅಡುಗೆ ಅನಿಲ ಬಳಕೆಯ ಕುರಿತು ಮಾಹಿತಿ ನೀಡಲಾಯಿತು. ಅಡುಗೆ ಅನಿಲ ಸಂಪರ್ಕದಲ್ಲಿ ಅಕಸ್ಮಾತ್ ಬೆಂಕಿ ಕಾಣಿಸಿಕೊಂಡಾಗ ಎನು ಮಾಡಬೇಕು ಎನ್ನುವ ಕುರಿತು ಮಾಹಿತಿ ನೀಡಿದ ಅಗ್ನಿಶಾಮಕ ಸಿಬ್ಬಂದಿ ನಜೀರ್ ಅಹಮ್ಮದ್ ಅಕಸ್ಮಿಕ ಬೆಂಕಿ ಸಂಭಸಿದಲ್ಲಿ ಬಟ್ಟೆ ಯಾ ದಪ್ಪವಾದ ಚಾದರ ಇತ್ಯಾದಿಗಳನ್ನು ಅಗ್ನಿ ಸಂಭವಿಸಿದ ಸಿಲಿಂಡರ್ ಭಾಗಕ್ಕೆ ಸರಿಯಾಗಿ ಮುಚ್ಚಿ ಗಾಳಿ ಸಂಪರ್ಕ ದೊರೆಯದಂತೆ ಮಾಡಿ ಎಂದು ತಿಳಿಸಿದರು.
ರಂಜನ್ ಇಂಡೇನ ಗ್ಯಾಸ್ ಎಜೆನ್ಸಿ ಮಾಲಕಿ ಶಿವಾನಿ ಶಾಂತಾರಾಮ ಭಟ್ಕಳ ಅವರು ಮಾತನಾಡಿ ಮಹಿಳೆಯರು ಗ್ಯಾಸ್ ಬಳಕೆಯನ್ನು ಯಾವ ರೀತಿಯಲ್ಲಿ ಮಾಡಬೇಕು. ಗ್ಯಾಸ್ ಖಾಲಿಯಾದಾಗ ಹೊಸ ಸಿಲಿಂಡರ್ ಅಳವಡಿಕೆಯ ಸಂದರ್ಭದಲ್ಲಿ ಯಾವ ರೀತಿಯಲ್ಲಿ ರೆಗ್ಯುಲೇಟರ್ ಬಳಸಬೇಕು ಎನ್ನುವ ಕುರಿತು ವಿವರವಾದ ಮಾಹಿತಿಯನ್ನು ನೀಡಿದರು.
ಪರಿಶಿಷ್ಟವರ್ಗ, ಪರಿಶಿಷ್ಟ ಪಂಗಡಗಳು ಹಾಗೂ ಅಂತ್ಯೋದಯ ಪಡಿತರ ಪೈಕಿ ರಂಜನ್ ಇಂಡೇನ್ ಏಜನ್ಸಿಯಿಂದ 118 ಫಲಾನುಭವಿಗಳಿಗೆ ಮತ್ತು ರಫಾತ್ ಏಜನ್ಸಿ ಭಟ್ಕಳ ಇವರು 25 ಫಲಾನುಭವಿಗಳಿಗೆ ಗ್ಯಾಸ ಸಂಪರ್ಕ ನೀಡಲಾಯಿತು.
ಕಾರ್ಯಕ್ರಮದಲ್ಲಿ ರಫಾತ್ ಎಜೆನ್ಸಿಯ ನಬೀದ್, ತಾ.ಪಂ. ಸದಸ್ಯರುಗಳಾದ ಮಾಲತಿ ಮೋಹನ ದೇವಡಿಗ, ಪಾಶ್ರ್ವನಾಥ ಜೈನ್, ಹನುಮಂತ ನಾಯ್ಕ ಹಾಗೂ ಕೃಷ್ಣಾ ನಾಯ್ಕ ಆಸರಕೇರಿ, ಅಗ್ನಿಶಾಮಕ ಅಧಿಕಾರಿ ರಮೇಶ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.