ಲೋಕದರ್ಶನ ವರದಿ
ಸಂಬರಗಿ 11: ಗಡಿ ಗ್ರಾಮದ ಮೇವು ಸಂಗ್ರಹ ಕೇಂದ್ರದಿಂದ ಮಹಾರಾಷ್ಟ್ರದ ಜತ್ತ-ಕವಟೆಮಹಾಂಕಾಳ ತಾಲೂಕಿನ ಕೆಲವು ಗ್ರಾಮಕ್ಕೆ ಮೇವು ಹೋಗುವುದು ಕಂಡು ಬರುತ್ತಿದೆ, ಅಂತಹ ಅಧಿಕಾರಿಗಳನ್ನು ಅಮಾನತುಗೊಳಿಸಲಾಗುವದೆಂದು ಕಾಗವಾಡ ಶಾಸಕರಾದ ಶ್ರೀಮಂತ ಪಾಟೀಲ ಬಿರುಸಿನ ಎಚ್ಚರಿಕೆ ನೀಡಿದರು.
ಖಿಳೇಗಾಂವ ಗ್ರಾಮದಲ್ಲಿ ಮೇವು ಸಂಗ್ರಹ ಕೇಂದ್ರ(ಮೇವುಬ್ಯಾಂಕ್)ದ ಕುರಿತು ಗ್ರಾಮಸ್ಥರು ದೂರು ನೀಡಿದ ನಂತರ ಸೋಮವಾರ ಸಾಯಂಕಾಲ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗಡಿ ಗ್ರಾಮಗಳಲ್ಲಿ ನೀರು ಹಾಗೂ ಮೇವಿನ ಸಮಸ್ಯೆ ಇದ್ದ ನಂತರ ತಮ್ಮ ಗಮನಕ್ಕೆ ಬಂದಾಗ ಶೀಘ್ರದಲ್ಲಿ ಅಧಿಕಾರಿಗಳು ಪರಿಹಾರಗೊಳಿಸಬೇಕು. ಮೇವನ್ನು ಕಳ್ಳತನದಿಂದ ಇಲ್ಲಿಯ ರೈತರ ಹೆಸರಿನ ಮೇಲೆ ಮಹಾರಾಷ್ಟ್ರದ ಕವಟೆಮಹಾಂಕಾಳ ಹಾಗೂ ಜತ್ತ ತಾಲೂಕಿನ ಗ್ರಾಮದ ಕೆಲ ರೈತರು ಅಥಣಿ ತಾಲೂಕಿನ ಕೆಲ ಗ್ರಾಮಗಳ ರೈತರ ಹೆಸರಿನ ಮೇಲೆ ಮೇವು ಸಾಗಾಣಿಕೆ ಮಾಡುತ್ತಿದ್ದಾರೆ. ಅದನ್ನು ತಡೆಗಟ್ಟಲು ಗ್ರಾ ಪಂ ಅಧಿಕಾರಿ, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಇವರು ಮುಂದಾಗಿ ಅದನ್ನು ತಡೆಗಟ್ಟಬೇಕು. ಇಲ್ಲವಾದರೆ ಅಂತಹ ಅಧಿಕಾರಿಗಳನ್ನು ಅಮಾನತುಗೊಳಿಸಲಾಗುವುದು.
ಪಾಂಡೇಗಾಂವ, ಆಜೂರ, ಅನಂತಪೂರ, ಬಳ್ಳಿಗೇರಿ ಸೇರಿದಂತೆ ಹಲವಾರು ಗ್ರಾಮಗಳ ತೋಟದ ವಸತಿಗಳ ರೈತರಿಗೆ ನೀರಿನ ಅನಾನುಕೂಲತೆ ಆಗಬಾರದು. ದಿನನಿತ್ಯ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕೆಂದು ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿ ಸ್ಥಾನಿಕ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಮಾದೇವ ಕೋರೆ, ಆರ್.ಎಮ್.ಪಾಟೀಲ. ಮುರಿಗೆಪ್ಪಾ ಮಗದುಮ, ಅಣ್ಣಪ್ಪಾ ನಿಂಬಾಳ, ಕಂದಾಯ ನಿರೀಕ್ಷಕರು ಮುಬಾರಕ ಮುಜಾವರ, ಗ್ರಾಮ ಲೆಕ್ಕಾಧಿಕಾರಿ ಪ್ರಭಾಕರ ರೆಡ್ಡಿ, ರಾಜು ಮಾನೆ ಸೇರಿದಂತೆ ಗ್ರಾಮದ ಗಣ್ಯರು ಹಾಜರಿದ್ದರು.