ಲೋಕದರ್ಶನ ವರದಿ
ಚಿಕ್ಕೋಡಿ 13: ಬರುವ ಬಜೆಟ್ ಅಧಿವೇಶನದಲ್ಲಿ ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳಿಗೆ ಅನುಮೋದನೆ ನೀಡಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಳಿ ಪ್ರಸ್ತಾವಣೆ ಸಲ್ಲಿಸಲಾಗಿದೆ. ರಾಜ್ಯದಲ್ಲಿ ನಮ್ಮ ಬಿಜೆಪಿ ಸರ್ಕಾರ ಇರುವುದರಿಂದ ನೀರಾವರಿ ಯೋಜನೆಗಳಿಗೆ ಹಸಿರು ನಿಶಾನೆ ಸಿಗುವ ವಿಶ್ವಾಸ ಇದೆ ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದರು.
ಗುರುವಾರ ತಾಲೂಕಿನ ಮಜಲಟ್ಟಿ, ಹತ್ತರವಾಟ, ತೋರಣಹಳ್ಳಿ ಗ್ರಾಮದಲ್ಲಿ ವಿವಿಧ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿ ಅವರು ಮಾತನಾಡಿದರು. ರಾಯಬಾಗ ಮತಕ್ಷೇತ್ರದಲ್ಲಿ ಬರುವ ಚಿಕ್ಕೋಡಿ ತಾಲೂಕಿನ ಬರಪೀಡಿತ ಹಳ್ಳಿಗಳಿಗೆ ಶಾಶ್ವತ ನೀರಾವರಿ ಯೋಜನೆ ರೂಪಿಸಬೇಕೆಂದು ಹಲವು ವರ್ಷಗಳ ಬೇಡಿಕೆ ಇದೆ. ಈ ನೀರಾವರಿ ಯೋಜನೆ ಮಂಜೂರಾತಿಗೆ ನಾನು ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದರು. ನಾಗರ ಮುನ್ನೋಳ್ಳಿ ಜಿಪಂ ಮತ್ತು ಕರೋಶಿ ಜಿಪಂ ಕ್ಷೇತ್ರ ಹಳ್ಳಿಗಳ ರೈತರಿಗೆ ಅನುಕೂಲವಾಗಲು ರೂಪಿತವಾದ ಕರಗಾಂವ ಏತ ನೀರಾವರಿ ಯೋಜನೆ ಮತ್ತು ರಾಯಬಾಗ ತಾಲೂಕಿನ ಬೆಂಡವಾಡ ಹಾಗೂ ಮೇಖಳಿ ಗ್ರಾಮಗಳಿಗೆ ನೀರಾವರಿ ಸೌಲಭ್ಯ ಒದಗಿಸಲು ಈ ಬಜೆಟ್ದಲ್ಲಿ ಮಂಜೂರಾತಿ ನೀಡುವ ವಿಶ್ವಾಸ ಇದೆ. ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳಿಗೆ ಮಂಜೂರಾತಿ ಕೊಡುತ್ತೇನೆಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಬಜೆಟ್ ಅಧಿವೇಶನದೊಳಗಾಗಿ ಮತ್ತೊಮ್ಮೆ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿ ನೀರಾವರಿ ಸೌಲಭ್ಯ ಒದಗಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕೆಂದು ಮನವಿ ಮಾಡುತ್ತೇನೆ ಎಂದರು.
ಚಿಕ್ಕೋಡಿ ಜಿಲ್ಲೆ ಘೋಷನೆಗೆ ಪ್ರಾಮಾಣಿಕ ಪ್ರಯತ್ನ: ಬೆಳಗಾವಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಸಕರ್ಾರ ಬದ್ಧವಿದೆ. ಅದರಲ್ಲಿ ಶೈಕ್ಷಣಿಕ ಜಿಲ್ಲೆ ಎಂದೇ ಕರೆಯಿಸಿಕೊಳ್ಳುವ ನಿಯೋಜಿತ ಚಿಕ್ಕೋಡಿ ಜಿಲ್ಲೆಯನ್ನು ಅಧಿಕೃತವಾಗಿ ಘೋಷನೆ ಮಾಡಬೇಕೆಂದು ಬಜೆಟ್ ಅಧಿವೇಶನದಲ್ಲಿ ಸರ್ಕಾರಕ್ಕೆ ಮನವಿ ಮಾಡಲಾಗುತ್ತದೆ. ಚಿಕ್ಕೋಡಿ ಜಿಲ್ಲೆಯಾದರೇ ಪ್ರತ್ಯೇಕ ಅನುದಾನ ಬರುವುದರಿಂದ ಸಮಗ್ರವಾಗಿ ಜಿಲ್ಲೆ ಅಭಿವೃದ್ಧಿ ಕಾಣುತ್ತದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದರೆ ಜಿಲ್ಲೆ ಘೋಷನೆಗೆ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆಂದು ಭರವಸೆ ನೀಡಿದ ಪ್ರಕಾರ ನಾನು ಚಿಕ್ಕೋಡಿ ಜಿಲ್ಲೆ ಘೋಷನೆ ಮಾಡಬೇಕೆಂದು ಮುಖ್ಯಮಂತ್ರಿಗೆ ಒತ್ತಾಯಿಸುತ್ತೇನೆ ಎಂದರು.
ದಲಿತ ಕಾಲೋನಿಗಳಿಗೆ ಅಭಿವೃದ್ಧಿಗೆ ಬದ್ಧ: ಕ್ಷೇತ್ರದ ತಾಲೂಕಿನ ಹತ್ತರವಾಟ, ಮಜಲಟ್ಟಿ ಮತ್ತು ತೋರಣಹಳ್ಳಿ ಗ್ರಾಮದ ದಲಿತ ಕಾಲೋನಿಗಳಲ್ಲಿ ವಿವಿಧ ಅಭಿವೃದ್ಧಿಗೆ ರಾಜ್ಯ ಸರ್ಕಾರ 2 ಕೋಟಿ ರೂ ಅನುದಾನ ಮಂಜೂರು ಮಾಡಿದೆ. ಹೀಗಾಗಿ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಕೈಗೊಂಡು ಸರ್ಕಾರದ ಅನುದಾನ ಪೊಲಾಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಬಿಜೆಪಿ ದುರೀಣ ನಿಂಗಪ್ಪ ಕುರುಬರ, ಬಿ.ಆರ್.ಸಂಗಪ್ಪಗೋಳ, ತಾಪಂ ಸದಸ್ಯ ಕಲ್ಮೇಶ ರಾಚನ್ನವರ, ಮಲ್ಲಿಕಾರ್ಜುನ ಕಮತೆ, ರವಿಂದ್ರ ಹಿರೇಕೊಡಿ, ವಿಜಯ ಕೊಠಿವಾಲೆ, ಸುರೇಶ ತಳವಾರ, ಶಂಕರ ಯಾದಗೂಡೆ ಮುಂತಾದವರು ಇದ್ದರು.