ಲೋಕದರ್ಶನ ವರದಿ
ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಡಿ.ಎಮ್. ಐಹೊಳೆ ಚಾಲನೆ
ರಾಯಬಾಗ, 22: ರೈತರು ತಾವು ಬೆಳೆದ ಬೆಳೆಗಳನ್ನು ಮಾರುಕಟ್ಟೆಗಳಿಗೆ, ಕಾರ್ಖಾನೆಗಳಿಗೆ ಸಾಗಿಸಲು ಅನುಕೂಲವಾಗಲು ರಸ್ತೆಗಳನ್ನು ಸುಧಾರಿಸಲಾಗುತ್ತಿದೆ ಎಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು.
ಮಂಗಳವಾರ ತಾಲೂಕಿನ ಯಡ್ರಾಂವ ಗ್ರಾಮದ ಹತ್ತಿರ ಲೋಕೋಪಯೋಗಿ ಇಲಾಖೆಯಡಿ ಮಂಜೂರಾದ 5 ಕೋಟಿ ರೂ. ಅನುದಾನದಲ್ಲಿ ಅಂಕಲಿ-ರಾಯಬಾಗ ಮುಖ್ಯ ರಸ್ತೆಯಿಂದ ಸೌಂದತ್ತಿವಾಡಿ ವರೆಗೆ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಗುತ್ತಿಗೆದಾರರು ಗುಣಮಟ್ಟದಿಂದ ರಸ್ತೆಗಳನ್ನು ನಿರ್ಮಿಸಬೇಕೆಂದರು. ರಾಯಬಾಗ ಮತಕ್ಷೇತ್ರದ ಎಲ್ಲ ಗ್ರಾಮಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ, ಸಮಗ್ರ ಅಭಿವೃದ್ಧಿ ಮಾಡಲಾಗುತ್ತಿದೆ ಎಂದರು. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅಭಿವೃದ್ಧಿ ಕೆಲಸಗಳಿಗೆ ಸರಿಯಾದ ಅನುದಾನದ ನೀಡದೇ ಇರುವುದರಿಂದ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಳ್ಳುತ್ತಿವೆ ಎಂದು ಆರೋಪಿಸಿದರು.
ಸಿಬಿಕೆಎಸ್‌ಎಸ್‌ಕೆ ನಿರ್ದೇಶಕರಾದ ಭರತೇಶ ಬನವಣೆ, ಮಲ್ಲಪ್ಪ ಮೈಶಾಳೆ, ರಾಮಚಂದ್ರ ಕಾಟೆ, ಕಲ್ಲಪ್ಪ ನಿಂಗನೂರೆ, ಅನೀಲ ಹಂಜೆ, ಅಜೀತ ಖೆಮಲಾಪೂರೆ, ಸತ್ಯಪ್ಪ ಬಿಷ್ಠೆ, ಅಜೀತ ಸಂಗಮೇಶ್ವರ, ಸುರೇಶ ಐಹೊಳೆ, ರಾಜು ಹಕಾರೆ, ಸುರೇಶ ಘರಬುಡೆ, ಚಿದಾನಂದ ಮಂಗಸೂಳೆ, ಭೀಮು ಮುಧೂಳೆ, ಎಇಇ ಆರ್.ಬಿ.ಮನವಡ್ಡರ ಸೇರಿ ಅನೇಕರು ಇದ್ದರು.