ನವದೆಹಲಿ,ಮಾ ೧೩,ದೇಶದಲ್ಲಿ ಸಾಮಾನ್ಯ ಮುಖಗವುಸುಗಳ ಬೆಲೆಗಳು ಹಲವು ಪಟ್ಟು ಹೆಚ್ಚಿದ್ದು, ಬಡವರು, ದುರ್ಬಲವರ್ಗಗಳಿಗೆ ಅವುಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ದೇಶಾದ್ಯಂತ ಕೊರೊನೊ ವೈರಸ್ ಭೀತಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಮುಖಗವುಸುಗಳನ್ನು ಉಚಿತವಾಗಿ ಪೂರೈಸಬೇಕು ಎಂದು ರಾಜ್ಯಸಭೆಯಲ್ಲಿ ಸದಸ್ಯರು ಶುಕ್ರವಾರ ಆಗ್ರಹಿಸಿದ್ದಾರೆ.ವಿಷಯ ಪ್ರಸ್ತಾಪಿಸಿದ ಸಿಪಿಎಂ ಸದಸ್ಯ ಬಿನೊಯ್ ವಿಶ್ವಂ, ದೇಶದಲ್ಲಿ ಸಾಮಾನ್ಯ ಮುಖಗವುಸುಗಳ ಬೆಲೆಗಳು ದುಬಾಯಾಗಿವೆ. ಹಾಗಾಗಿ ಮುಖಗವುಸುಗಳು ಕೇವಲ ಶ್ರೀಮಂತರಿಗೆ ಮಾತ್ರ ಕೈಗೆಟಕುತ್ತಿವೆ. ಬಡವರು ಹಾಗೂ ಅಂಚಿನಲ್ಲಿರುವ ದುರ್ಬಲ ವರ್ಗಗಳಿಗೆ ಲಭ್ಯವಾಗುತ್ತಿಲ್ಲ. ಶ್ರೀಮಂತರಿಗಿಂತ ದಿನಗೂಲಿ ಕಾರ್ಮಿಕರಿಗೆ ಕೊರೊನಾ ಸೋಂಕು ತಗುಲುವ ಸಾಧ್ಯತೆಗಳು ಹೆಚ್ಚು, ಆದರೆ ಆತ ತನಗಾಗಲಿ ಅಥವಾ ತನ್ನ ಕುಟುಂಬದ ಸದಸ್ಯರಿಗಾಗಲಿ ಮಾಸ್ಕ್ ಖರೀದಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.ಹಾಗಾಗಿ ದೇಶದ ಜನರಿಗೆ ಮುಖಗವುಸು, ಕೈ ಸ್ವಚ್ಛಗೊಳಿಸುವ ಸ್ಯಾನಿಟೈಸರ್ ಸೇರಿದಂತೆ ಅತ್ಯಗತ್ಯ ಔಷಧಿಗಳನ್ನು ಕೇಂದ್ರ ಸರ್ಕಾರ ಉಚಿತವಾಗಿ ಪೂರೈಸಬೇಕು ಎಂದು ಮನವಿ ಮಾಡಿದರು.ಸಭಾಪತಿ ಎಂ. ವೆಂಕಯ್ಯನಾಯ್ಡು ಮಾತನಾಡಿ, ನಾವೆಲ್ಲ ಬಹಳ ಎಚ್ಚರಿಕೆವಹಿಸಬೇಕು. ಸೂಕ್ತ ಮುನ್ನೆಚ್ಚರಿಕೆ ಕೈಗೊಂಡರೆ ಯಾವುದೇ ರೀತಿಯ ಸೋಂಕು ತಗುಲದಂತೆ ತಡೆಗಟ್ಟಬಹುದು ಎಂದರು.ನಮ್ಮ ದೇಶದ ಹವಾಮಾನ ಪರಿಸ್ಥಿತಿಯಿಂದಾಗಿ ಉಳಿದ ದೇಶಗಳಿಗೆ ಹೋಲಿಸಿದರೆ ನಾವು ಸುಸ್ಥಿತಿಯಲ್ಲಿದ್ದೇವೆ ಎಂದರು. ಸಾರ್ವಜನಿಕರಿಗೆ ಉಚಿತವಾಗಿ ಮುಖಗವುಸು ಒದಗಿಸಬೇಕು ಎಂಬ ಸಿಪಿಎಂ ಸದಸ್ಯ ವಿಶ್ವಂ ಅವರ ಸಲಹೆಗೆ ಹಲವು ಸದಸ್ಯರು ಸಹಮತ ವ್ಯಕ್ತಪಡಿಸಿದರು.