ಚಂದ್ರನ ಕಕ್ಷೆ ಸೇರಿದ ಚಂದ್ರಯಾನ -2 ; ಸೆ 7ರ ಮುಂಜಾನೆ 1:55ಕ್ಕೆ ಮೇಲ್ಮೈ ಸ್ಪಷರ್ಿಸಲಿರುವ ಲ್ಯಾಂಡರ್ 'ವಿಕ್ರಂ'

ಬೆಂಗಳೂರು, ಆ 20       ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ- ಇಸ್ರೋ  ಮಹತ್ವಾಕಾಂಕ್ಷೆಯ ಚಂದ್ರಯಾನ -2 ಉಪಗ್ರಹವನ್ನು ಮಂಗಳವಾರ ಚಂದ್ರನ ಕಕ್ಷೆಗೆ ಯಶಸ್ವಿಯಾಗಿ ಸೇರಿಸುವ ಮೂಲಕ  ಮತ್ತೊಂದು ಮಹತ್ವದ  ಮೈಲಿಗಲ್ಲು ಸಾಧಿಸಿದೆ  

  ಇಂದು ಬೆಳಗ್ಗೆ 9 ಗಂಟೆಗೆ ಉಪಗ್ರಹವನ್ನು ಚಂದ್ರನ ಕಕ್ಷೆಗೆ ಸೇರಿಸುವ ಚಟುವಟಿಕೆ ಆರಂಭಗೊಂಡು, 30  ನಿಮಿಷದ ನಂತರ ಚಂದ್ರಯಾನ -2 ಅನ್ನು ಕಕ್ಷೆಗೆ ಯಶಸ್ವಿಯಾಗಿ ಸೇರಿಸಲಾಯಿತು. ಸದ್ಯ ಅದು 114*18,000 ಕಿಮೀ ವೇಗದಲ್ಲಿ ಚಲಿಸುತ್ತಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಸಿವನ್ ತಿಳಿಸಿದ್ದಾರೆ.  

  ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇದು ಈ ಯೋಜನೆಯ ಮಹತ್ವದ ಹೆಜ್ಜೆಯಾಗಿತ್ತು. ಆ ಮೂವತ್ತು ನಿಮಿಷಗಳ ಕಾಲ ನಮ್ಮ ಹೃದಯ ಸ್ತಬ್ಧವಾಗಿತ್ತು. ಚಂದ್ರಯಾನ-2 ಉಪಗ್ರಹ ಯೋಜನೆಯಂತೆ ಕಕ್ಷೆ ಸೇರುತ್ತಿದ್ದಂತೆಯೇ ಹೃದಯ ಬಡಿತ ಹೆಚ್ಚಾಯಿತು ಎಂದು ತಮ್ಮ ಅನುಭವ ಹಂಚಿಕೊಂಡರು.  

  ಸದ್ಯ ಉಡಾವಣಾ ನೌಕೆ ಗಂಟೆಗೆ 10.9 ಕಿಮೀ ವೇಗದಲ್ಲಿ ಚಲಿಸುತ್ತಿದ್ದು, ಅದಕ್ಕಿಂತ 10 ಸೆಕೆಂಡ್ ವೇಗ ಜಾಸ್ತಿಯಾದರೂ, ನೌಕೆ ಕೈಗೆ ಸಿಗದಂತೆ ನಾಪತ್ತೆಯಾಗುವ ಅಪಾಯವಿದೆ. ನಿಗದಿತ ವೇಗದಲ್ಲಿ ಸ್ಪಲ್ಪ ಬದಲಾವಣೆಯಾದರೂ, ಅದು ನಿರ್ದಿಷ್ಟ ಮಾರ್ಗದಿಂದ ಏಳು ಡಿಗ್ರಿಯಷ್ಟು ಪಕ್ಕಕ್ಕೆ ಸರಿಯಲಿದೆ.  ಚಂದ್ರನ ಕಕ್ಷೆಗೆ ಸೇರಿ, ಅಲ್ಲಿನ ಗುರುತ್ವಾಕರ್ಷಣೆಯ ಪ್ರಭಾವಕ್ಕೊಳಗಾದ ನೌಕೆಯ ವೇಗ ಇನ್ನಷ್ಟು ತೀವ್ರವಾಗುವುದರಿಂದ ಅದರ ವೇಗವನ್ನು 2.04 ಕಿಮೀ ಯಿಂದ 2.01 ಕಿಮೀಗೆ ಇಳಿಸಲಾಗಿತ್ತು ಎಂದು ಮಾಹಿತಿ ನಿಡಿದರು.  

  ಜುಲೈ 22ರಂದು ಶ್ರೀಹರಿಕೋಟಾದಿಂದ ಉಡವಾಣೆಗೊಂಡ  ಚಂದ್ರಯಾನ -2 ಭೂಮಿಯನ್ನು ಐದು ಬಾರಿ ಸುತ್ತುವರಿದಿದೆ. ಆಗಸ್ಟ್ 19ರಂದು ಚಂದ್ರನೇ ಉಪಗ್ರಹದ ಸಮೀಪ ಬಂದ ನಂತರ ಅದನ್ನು ಕಕ್ಷೆಗೆ ಸೇರಿಸಲಾಯಿತು ಎಂದರು. 

  ಮುಂದಿನ ದಿನಗಳಲ್ಲಿ ಚಂದ್ರಯಾನದ ಪಯಣ ಇನ್ನಷ್ಟು ಸವಾಲಿನ್ನದ್ದಾಗಿರಲಿದೆ.  ಆ. 28, 30 ಹಾಗೂ ಸೆಪ್ಟೆಂಬರ್ 1ರಂದು ಮತ್ತೊಂದು ಸುತ್ತಿನ ಚಟುವಟಿಕೆ ನಡೆಯಲಿದ್ದು, ಪ್ರತಿ ಬಾರಿಯೂ ಚಂದ್ರನ ಮೇಲ್ಮೈ ಹಾಗೂ ಉಪಗ್ರಹದ ನಡುವಿನ ಅಂತರ ಕಡಿಮೆಯಾಗಲಿದೆ ಎಂದರು.  

  ಸೆ. 2 ರ ಚಟುವಟಿಕೆ ಯೋಜನೆಯ ಮತ್ತೊಂದು ಮಹತ್ವದ ಘಟ್ಟವಾಗಿದ್ದು, ತವರಿನಿಂದ ಬೇರ್ಪಡುವ ಮಗಳಂತೆ, ಲ್ಯಾಂಡರ್ ವಿಕ್ರಂ ಉಪಗ್ರಹದಿಂದ ಹೊರಬರಲಿದೆ. ಆಗ ಅದರ ವೇಗವನ್ನು 100*100 ಕಿಮೀಗೆ ಇಳಿಸಲಾಗುವುದು. ನಂತರ ಆ ಉಪಗ್ರಹ ಒಂದು ವರ್ಷದ ಕಾಲ ಚಂದ್ರನನ್ನು ಸುತ್ತುತ್ತಿರುತ್ತದೆ.  

  ಸೆ. 3ರಂದು ಲ್ಯಾಂಡರ್ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಖಚಿತಪಡಿಸಲು 3 ಸೆಕೆಂಡ್ ಗಳ ಚಟುವಟಿಕೆ ನಡೆಸಲಾಗುವುದು. ಸೆ.4ರಂದು 6.5 ಸೆಕೆಂಡ್ ಅವಧಿಯ ಚಟುವಟಿಕೆ ನಡೆಸಲಾಗುವುದು. ನಂತರ, ಸೆ. 7ರಂದು ಮುಂಜಾನೆ 1.40ಕ್ಕೆ ಲ್ಯಾಂಡರ್ ಅನ್ನು ಚಂದ್ರನ ಮೇಲ್ಮೈ ಮೇಲೆ ಸುರಕ್ಷಿತವಾಗಿ ಇಳಿಸುವ ಪ್ರಕ್ರಿಯೆ ಆರಂಭಗೊಳ್ಳಲಿದೆ. ಸರಿಯಾಗಿ 15 ನಿಮಿಷಗಳ ಅವಧಿಯಲ್ಲಿ ಅಂದರೆ 1.55ಕ್ಕೆ ಲ್ಯಾಂಡರ್ ಚಂದ್ರನ ಮೇಲೆ ಇಳಿಯಲಿದೆ. ಈ ಅವಧಿಯಲ್ಲಿ ಅದರ ವೇಗವನ್ನು 1.6 ಕಿಮೀ ಯಿಂದ ಶೂನ್ಯಕ್ಕೆ ಇಳಿಸಲಾಗುವುದು ಎಂದರು.  

  ಚಂದ್ರನ ಅಂಗಳದಲ್ಲಿ ಲ್ಯಾಂಡರ್ ಇಳಿದ 2 ಗಂಟೆಯ ನಂತರ ಲ್ಯಾಂಡರ್ ನಿಂದ ರ್ಯಾಂಪ್ ತೆರೆದುಕೊಳ್ಳಲಿದೆ. 3.10 ಗಂಟೆಗೆ ಸೋಲಾರ್ ಚಾಲಿತ ರೋವರ್ ಹೊರಬರಲಿದೆ. 3.15ಕ್ಕೆ ರೋವರ್ ರ್ಯಾಂಪ್ ನಿಂದ ಕೆಳಗಿಳಿಯಲಾರಂಭಿಸುತ್ತದೆ. ಸರಿಯಾಗಿ 4 ಗಂಟೆಗೆ ಅದು ಚಂದ್ರನ ಮೇಲ್ಮೈ ಸ್ಪರ್ಷಿಸಲಿದೆ. ಒಟ್ಟಾರೆ ಸೆ.7ರಂದು ಬೆಳಗ್ಗೆ 6.55ಕ್ಕೆ ಸರಿಯಾಗಿ ರೋವರ್ ಚಂದ್ರನ ಅಂಗಳದಲ್ಲಿ ಇಳಿಯಲಿದೆ. ಅದಾಗಿ 5.30 ಗಂಟೆಗಳಲ್ಲಿ ಚಂದ್ರನ ಮೇಲ್ಮೈ ಮೇಲಿನ ಮೊದಲ ಚಿತ್ರ ಹೊರಬೀಳಲಿದೆ. ಈ ಲ್ಯಾಂಡರ್ ಹಾಗೂ ರೋವರ್ ಒಂದು ಲೂನಾರ್ ದಿನ ಅಂದರೆ ಭೂಮಿಯ 14 ದಿನಗಳ ಕಾಲ ಕ್ರಿಯಾಶೀಲವಾಗಿರಲಿವೆ ಎಂದರು.  

  ಚಂದ್ರನ ಮೇಲ್ಮೈ ನಲ್ಲಿ ಇಳಿಯುವ ಸವಾಲುಗಳನ್ನು ವಿವರಿಸಿದ ಅವರು, ಲ್ಯಾಂಡರ್ ಅನ್ನು ಕೆಳಗಿಳಿಸುವ ಮೊದಲು ಅದು 90 ಡಿಗ್ರಿ ಕೋನದಲ್ಲಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಜೊತೆಗೆ, ಮೈಲ್ಮೈ ಮೇಲೆ 12 ಡಿಗ್ರಿಗಿಂತ ಕಡಿಮೆ ಮಾತ್ರ ಇಳಿಜಾರಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಇಲ್ಲದ್ದಿದ್ದರೆ, ಲ್ಯಾಂಡರ್ ನ ಆರು ಕಾಲುಗಳ ಪೈಕಿ ಒಂದಕ್ಕೆ ಕಲ್ಲುಗಳು ತಾಗಿದರೂ, ಲ್ಯಾಂಡರ್ ಕೆಳಗುರುಳಲಿದೆ ಎಂದರು. 

  ವಿಕ್ರಂ ಗೆ ಸ್ವಾಯತ್ತತೆ 

  ಲ್ಯಾಂಡರ್ ಚಂದ್ರನ ಅಂಗಳಕ್ಕೆ ಇಳಿಯುವ ಪ್ರಕ್ರಿಯೆ ಆರಂಭವಾದ ನಂತರ ತಮಗೆ ಅದರ ಮೇಲೆ ಯಾವುದೇ ನಿಯಂತ್ರಣವಿರುವುದಿಲ್ಲ. ತಾನು ಕೆಳಗಿಳಿಯಬೇಕಾದ ಜಾಗವನ್ನು ನಿರ್ಧರಿಸುವಂತೆ  ವಿಕ್ರಂ ಗೆ ಸ್ವಾಯತ್ತತೆ ನೀಡಲಾಗಿದೆ. ಈಗಾಗಲೇ ಅದು ಇಳಿಯಬೇಕಾದ ಜಾಗವನ್ನು ನಿರ್ಧರಿಸಿದ್ದು ಅದರ ಭಾವಚಿತ್ರಗಳನ್ನು ಲ್ಯಾಂಡರ್ ಗೆ ಅಪ್ ಲೋಡ್ ಮಾಡಲಾಗಿದೆ. ಅದು ಅಲ್ಲಿ ತಲುಪಿದ ನಂತರದ ಚಿತ್ರಗಳನ್ನು ತೆರೆದು ಎರಡರ ನಡುವೆ ತುಲನೆ ಮಾಡಿ ನಿಧರ್ಾರ ಕೈಗೊಳ್ಳುತ್ತವೆ ಎಂದರು. 

  ಈ ಹಿಂದೆ ಅನೇಕ ದೇಶಗಳು ಉಪಗ್ರಹಗಳ ಕೊನೆಯ ಕ್ಷಣದ ಸಾಹಸವನ್ನು ಕೂಡ ಭೂಮಿಯಿಂದಲೇ ನಿಯಂತ್ರಿಸಲು ಯತ್ನಿಸಿದ್ದರಿಂದ ಅವು ವಿಫಲಗೊಂಡಿದೆ. ಭೂಮಿಯಲ್ಲಿ ಕುಳಿತು ಅಲ್ಲಿನ ಹವಾಮಾನದ ಕುರಿತು ನಿರ್ಧರಿಸಲಾಗದು. ಆದ್ದರಿಂದ ಅದಕ್ಕೆ ಸ್ವಾಯತ್ತತೆ ನೀಡಲಾಗಿದೆ. ಜಗತ್ತಿನಲ್ಲಿ ಉಪಗ್ರಹಗಳು ಇತರ ಗ್ರಹಗಳ ಮೇಲೆ ಸುರಕ್ಷಿತವಾಗಿ ಇಳಿದಿರುವ ಸಂಖ್ಯೆ ಶೇ. 37ರಷ್ಟು ಮಾತ್ರ ಎಂದರು.  

  ಧೂಳು ತಡೆಯಲು ಕ್ರಮ 

  ಲ್ಯಾಂಡರ್ ಚಂದ್ರನ ಮೇಲೆ ಇಳಿಯುತ್ತಿದ್ದಂತೆ ಅದರಿಂದ ಮೇಲೇಳುವ ಧೂಳಿನಿಂದ ಚಿತ್ರಗಳು ಸ್ಪಷ್ಟವಾಗಿ ಕಾಣಿಸದಿರುವ ಸಂಭವವಿರುವುದರಿಂದ ಮೇಲ್ಮೈನಿಂದ 13 ಮೀಟರ್ ದೂರವಿರುವಾಗಲೇ ಅದರ 5 ಇಂಜಿನ್ ಗಳ ಪೈಕಿ 4 ಇಂಜಿನ್ ಗಳನ್ನು ಸ್ಥಗಿತಗೊಳಿಸಿ, ಮಧ್ಯದ ಒಂದು ಇಂಜಿನ್ ಮಾತ್ರ ಚಾಲ್ತಿಯಲ್ಲಿಡಲಾಗುವುದು. ಇದರಿಂದ ಧೂಳಿನ ಕಣಗಳು ಅದರಲ್ಲಿನ ಕ್ಯಾಮೆರಾಗಳಿಗೆ ಹಾನಿಮಾಡದಂತೆ ತಡೆಯಬಹುದು ಎಂದರು.  

  ನಾಸಾಗೆ ದತ್ತಾಂಶಗಳ ನೆರವು 

  ಈಗಾಗಲೇ ನಾಸಾ ಕೂಡ ಚಂದ್ರನ ದಕ್ಷಿಣ ಧ್ರುವಕ್ಕೆ ಮನುಷ್ಯರನ್ನು ಕಳುಹಿಸುವ ಯೋಜನೆ ತಯಾರಿಸಿರುವ ಹಿನ್ನೆಲೆಯಲ್ಲಿ ಈ ಯೋಜನೆಯ ದತ್ತಾಂಶಗಳು ಅವರಿಗೆ ಸಹಕಾರಿಯಾಗಲಿದೆ. ಈಗಾಗಲೇ ನಾಸಾ ವಿಜ್ಞಾನಿಗಳು ಚಂದ್ರನ ದಕ್ಷಿಣ ಭಾಗದಲ್ಲಿ ನೀರಿನ ಅಂಶಗಳಿವೆ ಎಂದು ಪತ್ತೆಹಚ್ಚಿದ್ದಾರೆ ಎಂದರು. 

  ಸಾಕಷ್ಟು ಆತಂಕವಿದೆ 

  ಚಂದ್ರಯಾನ -2 ಇದುವರೆಗೆ ಜಗತ್ತಿನಲ್ಲಿ ಯಾರೂ ನಡೆಸದ ಸಾಹಸವಾಗಿದ್ದು, ಸಾಕಷ್ಟು ಆತಂಕವಿದೆ. ಉಪಗ್ರಹ ನಿರೀಕ್ಷೆಗಿಂತ ಹೆಚ್ಚು ವೇಗವಾಗಿ ಹೋದರೆ ಬಾಹ್ಯಾಕಾಶದಲ್ಲಿ ಕಳೆದು ಹೋಗುವ ಆತಂಕವಿದೆ. ಕಡಿಮೆ ವೇಗದಲ್ಲಿ ಚಲಿಸಿದರೆ, ಚಂದ್ರನ ಮೇಲ್ಮೈಗೆ ತಾಕಿ ಪತನಗೊಳ್ಳುವ ಸಾಧ್ಯತೆಯಿದೆ. ಆದ್ದರಿಂದ ನಿರ್ದಿಷ್ಟ ವೇಗದಲ್ಲೇ ಅದನ್ನು ಮುನ್ನೆಡೆಸಬೇಕಿದೆ ಎಂದರು.