ನವದೆಹಲಿ ಆಗಸ್ಟ್ 27 ಆರ್ಬಿಐನಿಂದ ಕೇಂದ್ರ ಸರ್ಕಾರ 1.76 ಲಕ್ಷ ಕೋಟಿ ರೂ. ಹೆಚ್ಚುವರಿ ಹಣವನ್ನು ಪಡೆದುಕೊಂಡಿರುವ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ. ಆರ್ಬಿಐನಿಂದ ಹೆಚ್ಚುವರಿ ಹಣವನ್ನು ಸರ್ಕಾರ ಲೂಟಿ ಮಾಡಿದೆ ಎಂದು ಅವರು ಸರ್ಕಾರ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಸಂಕಷ್ಟದಲ್ಲಿರುವ ಆರ್ಥಿಕತೆಯನ್ನು ಸರಿದಾರಿಗೆ ತರುವಲ್ಲಿ ದಿಕ್ಕತೋಚದೆ ಆರ್ ಬಿಐ ನ ಮೀಸಲು ಹಣವನ್ನು ಲೂಟಿ ಮಾಡಿದೆ ಎಂದು ದೂರಿದ್ದಾರೆ. ಸರ್ಕಾರದ ಕ್ರಮ ಹೇಗಿದೆ ಎಂದರೆ ಆಸ್ಪತ್ರೆಯಿಂದ ಬ್ಯಾಂಡ್-ಏಡ್ ಕಳವು ಮಾಢಿ ಗುಂಡೇಟಿನಿಂದ ಆದ ಗಾಯಕ್ಕೆ ಕಟ್ಟಿದಂತಾಗಿದೆ ಎಂದು ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ. ವಸತಿ ಯಿಂದ ಉತ್ಪಾದನೆಯವರೆಗೆ ದೇಶದ ಎಲ್ಲಾ ವಲಯಗಳಲ್ಲಿ ಆರ್ಥಿಕ ಕುಸಿತದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಆರ್ಬಿಐನಿಂದ ಭಾರಿ ದೊಡ್ಡ ಮೊತ್ತದ ಹಣವನ್ನು ಪಡೆದಿದೆ. ಆರ್ಬಿಐನ ಈ ರೀತಿಯ ಶೋಷಣೆ ದೇಶದ ಆರ್ಥಿಕತೆಯ ಮತ್ತಷ್ಟು ಕ್ಷೀಣಿಸಲು ದಾರಿ ಮಾಡಿಕೊಡಲಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.