ಪಂಜಾಬ್‌ನಲ್ಲಿ ವಾರಾಂತ್ಯ, ರಜಾ ದಿನಗಳಲ್ಲಿ ಲಾಕ್‌ಡೌನ್‌, ಸಂಚಾರ ನಿರ್ಬಂಧ

ಚಂಡೀಗಡ, ಜೂ.12,ವಾರಾಂತ್ಯ ಮತ್ತು ಸಾರ್ವಜನಿಕ ರಜಾದಿನಗಳಲ್ಲಿ ಲಾಕ್‌ಡೌನ್‌ ಘೋಷಿಸಿರುವ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್, ಈ ಅವಧಿಯಲ್ಲಿ ಇ-ಪಾಸ್ ಹೊಂದಿರುವವರನ್ನು ಹೊರತುಪಡಿಸಿ ಉಳಿದೆಲ್ಲಾ ಸಾರ್ವಜನಿಕರ ಸಂಚಾರವನ್ನು ನಿಷೇಧಿಸಿದ್ದಾರೆ.ವೈದ್ಯಕೀಯ ಸಿಬ್ಬಂದಿ ಮತ್ತು ಅಗತ್ಯ ಸೇವಾ ಪೂರೈಕೆದಾರರನ್ನು ಹೊರತುಪಡಿಸಿ ಎಲ್ಲಾ ನಾಗರಿಕರು ಕೋವಾ ಅಪ್ಲಿಕೇಶನ್‌ನಿಂದ ಇ-ಪಾಸ್‌ಗಳನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ.

ಸಾಂಕ್ರಾಮಿಕ ಪರಿಸ್ಥಿತಿ ಮತ್ತು ಮತ್ತಷ್ಟು ಹರಡುವಿಕೆಯನ್ನು ನಿಭಾಯಿಸಲು ರಾಜ್ಯದ ಸಿದ್ಧತೆಯನ್ನು ಪರಿಶೀಲಿಸಲು ಏರ್ಪಡಿಸಿದ್ದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಮುಖ್ಯಮಂತ್ರಿ ಈ ನಿರ್ದೇಶನಗಳನ್ನು ನೀಡಿದರು.ಆದಾಗ್ಯೂ, ಉದ್ಯಮ ಮತ್ತು ಕೈಗಾರಿಕೆಗಳು ಎಲ್ಲಾ ದಿನಗಳಲ್ಲಿ ಸಾಮಾನ್ಯವಾಗಿ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಹೆಚ್ಚಿನ ಜನಸಂದಣಿಯನ್ನು ತಡೆಗಟ್ಟಲು ಈ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ನೋಡಿಕೊಳ್ಳಬೇಕೆಂದು ಮುಖ್ಯಮಂತ್ರಿ ಅವರು ಡಿಜಿಪಿ ದಿನಕರ್ ಗುಪ್ತಾ ಅವರಿಗೆ ಸೂಚಿಸಿದ್ದಾರೆ.ಕೊರೋನಾ ಪ್ರಕರಣಗಳು ತೀವ್ರಗತಿಯಲ್ಲಿ ಏರುತ್ತಿರುವ ದೆಹಲಿಯಿಂದ ಪಂಜಾಬ್‌ಗೆ ಬರುವವರನ್ನು  ಕಡ್ಡಾಯವಾಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವುದು ಸೇರಿದಂತೆ ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸುವಂತೆ ಮುಖ್ಯಮಂತ್ರಿ ವೈದ್ಯಕೀಯ ಮತ್ತು ಆರೋಗ್ಯ ತಜ್ಞರಿಗೆ ಸೂಚಿಸಿದರು. ರಾಷ್ಟ್ರ ರಾಜಧಾನಿಯಿಂದ ಪ್ರತಿದಿನ ಸರಾಸರಿ 500-800 ವಾಹನಗಳು ಪಂಜಾಬ್‌ಗೆ ಬರುತ್ತಿರುವ ಹಿನ್ನೆಲೆಯಲ್ಲಿ ಈ ಸೂಚನೆ ನೀಡಿದ್ದಾರೆ.