ಲೋಕದರ್ಶನ ವರದಿ
ನಿಯಮ ಪಾಲನೆಯಿಂದ ಜೀವ ರಕ್ಷಣೆ: ಚಂದ್ರಶೇಖರ ಡಿ.ಪಿ
ಬಾಗಲಕೋಟೆ 22: ವಾಹನ ದಟ್ಟಣೆಯಿಂದ ಸಂಚಾರಿ ವ್ಯವಸ್ಥೆಯನ್ನು ಸುಧಾರಿಸಲು ಮೋಟಾರು ವಾಹನ ಕಾಯಿದೆಯನ್ನು ಜಾರಿಗೆ ತರಲಾಗಿದೆ. ಈ ಕಾಯಿದೆ ಅಡಿಯಲ್ಲಿ ನಿಯಮ ಪಾಲನೆ ಅವಶ್ಯವಾಗಿದ್ದು ವಾಹನ ಚಲಾಯಿಸಲು ಚಾಲನೆ ಪರವಾಣಿಗೆ ಮತ್ತು ಇನ್ಶುರೆನ್ಸ್ ಪಾಲಸಿ ಪಡೆದುಕೊಳ್ಳಬೇಕು ಮತ್ತು ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಜಿಲ್ಲಾ ಹಿರಿಯ ದಿವಾನಿ ನ್ಯಾಯಾಧೀಶ ಚಂದ್ರಶೇಖರ ಡಿ.ಪಿ ಹೇಳಿದರು.
ನಗರದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಎಸ್.ಸಿ ನಂದಿಮಠ ಕಾನೂನು ಮಹಾವಿದ್ಯಾಲಯ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ನವನಗರದ ಸಂಚಾರಿ ಪೊಲೀಸ್ ಠಾಣೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಾಹನ ಕಾಯ್ದೆ ಮತ್ತು ಸಂಚಾರಿ ನಿಯಮಗಳ ಕುರಿತು ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಚಾಲನೆ ಮಾಡುವುದು ಅಪರಾಧವಾಗಿದೆ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ವಾಹನ ಚಾಲನಾ ಪರವಾನಿಗೆ ಪತ್ರ ಪಡೆದುಕೊಳ್ಳಬೇಕು. ಆಧಾರ ಕಾರ್ಡ ಬರುವ ಪೂರ್ವದಲ್ಲಿ ಲೈಸೆನ್ಸ್ ಕಾರ್ಡನ್ನು ಪ್ರತಿಯೊಂದು ಕೆಲಸಕ್ಕೂ ಅಧಿಕೃತ ದಾಖಲಾತಿಯಾಗಿ ಬಳಸಲಾಗುತ್ತಿತ್ತು. ಲೈಸೆನ್ಸ್ ಗಳಲ್ಲಿ ಬೇರೆ ಬೇರೆ ವಿಧಗಳಿದ್ದು ವಾಹನದ ಗಾತ್ರ ಮತ್ತು ಅದರ ಸೇವೆ ಆಧಾರದ ಮೇಲೆ ವಿಂಗಡನೆ ಮಾಡಲಾಗುತ್ತದೆ. ಭ್ರಷ್ಟಾಚಾರವನ್ನು ತಡೆಯಲು ಆನ್ಲೈನ್ ಮೂಲಕ ಲೈಸೆನ್ಸ್ ಪಡೆಯಲು ಅವಕಾಶವಿದ್ದು ಪ್ರತಿಯೊಬ್ಬರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಸಂಚಾರಿ ಭದ್ರತೆಗೆ ವಾಹನವಿರುವ ಪ್ರತಿಯೊಬ್ಬರೂ ಇನ್ಶುರೆನ್ಸ್ ಮಾಡಿಸುವುದು ಅವಶ್ಯವಾಗಿದೆ. ಇದರಿಂದ ವಾಹನ ಅವಗಡಗಳಿಂದಾಗುವ ಆರ್ಥಿಕ ಸಂಕಷ್ಟದದಿಂದ ಹೊರಬರಲು ಸಹಾಯಕ. ಸಾರ್ವಜನಿಕ ಮತ್ತು ಖಾಸಗಿ ಎಂದು ಎರಡು ಮಾದರಿ ಇನ್ಶುರೆನ್ಸ್ ಗಳಿದ್ದು ಪ್ಯಾಕೇಜ್ ಮತ್ತು ಆ್ಯಕ್ಟ್ ಪಾಲಿಸಿಗಳನ್ನು ಇದರಲ್ಲಿ ಕಾಣುತ್ತೇವೆ. ಪ್ಯಾಕೇಜ್ ಪಾಲಸಿಯಲ್ಲಿ ಚಾಲಕ ಮತ್ತು ಸಂಚಾಲಕರಿಗೂ ಪರಿಹಾರ ನೀಡಿದರೆ, ಆ್ಯಕ್ಟ್ ಪಾಲಸಿಯಲ್ಲಿ ಕೇವಲ ಚಾಲಕರಿಗೆ ಮಾತ್ರ ಪರಿಹಾರ ನೀಡಲಾಗುತ್ತದೆ ಇವುಗಳ ಬಗ್ಗೆ ಅರಿತುಕೊಳ್ಳುವುದು ಅವಶ್ಯಕ ಎಂದರು.
ಸಂಚಾರಿ ಪೊಲೀಸ್ ಪೆದೆ ಆನಂದ ಹಿರೇಗೌಡರ ಮಾತನಾಡಿ ಸಂಚಾರದಲ್ಲಿ ರಸ್ತೆ ಸುರಕ್ಷಾ ನಿಯಮ ಪಾಲನೆ ಅತ್ಯವಶ್ಯಕ. ಕೇವಲ ವಾಹನ ಚಾಲಕರು ಮಾತ್ರವಲ್ಲದೆ ಪಾದಚಾರಿಗಳು ಕೂಡ ನಿಯಮಗಳನ್ನು ಪಾಲಿಸಬೇಕು. ರಾಜ್ಯದಲ್ಲಿ ಅಪಘಾತದಿಂದ ಪ್ರತಿದಿನ 40ರಿಂದ 50ಜನ ಮರಣಹೊಂದುತ್ತಿದ್ದು ಇದಕ್ಕೆ ಬೇಜವಾಬ್ದಾರಿ ಕಾರಣವಾಗಿದೆ. ಕುಡಿದು ವಾಹನ ಚಾಲನೆ, ಮೊಬೈಲ್ ಅಲ್ಲಿ ಮಾತನಾಡುತ್ತ ವಾಹನ ಚಲಾಯಿಸುವುದನ್ನು ಬಿಡಬೇಕು. ಅಪಘಾತದಲ್ಲಿ ದ್ವಿಚಕ್ರ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು ಹೆಲ್ಮೆಟ್ ಧಾರಣೆ ರೂಡಿಸಿಕೊಳ್ಳಬೇಕು. ಹೆಚ್ಚುತ್ತಿರುವ ವಾಹನ ದಟ್ಟಣೆಯಲ್ಲಿ ಅಪಘಾತ ನಿಯಂತ್ರಣ ಸಾಧ್ಯವಿಲ್ಲ ಆದರೆ ಜೀವಹಾನಿಯನ್ನು ತಡೆಯಲು ಸಾಧ್ಯ. ನಿಯಮ ಪಾಲನೆ ಜೀವಗಳ ರಕ್ಷಣೆಗೆ ಹೊರತು ಅದೊಂದು ಶಿಕ್ಷೆಯಲ್ಲ ಎಂದರು.
ಪ್ರಾಚಾರ್ಯ ಎಸ್.ಆರ್ ಮುಗನೂರಮಠ ಅವರು ಮಾತನಾಡಿ ರಸ್ತೆಗಳಿಲ್ಲದೇ ಜೀವನವಿಲ್ಲ ಆದರೆ ರಸ್ತೆಗಳು ಸಾವನ್ನು ಹೊತ್ತುತರುವ ಏಜೆಂಟ್ ಗಳಾಗಿವೆ. ಸಂಚಾರಿ ನಿಯಮಗಳ ಅರಿವು ಇಲ್ಲದಿರುವುದು ಇದಕ್ಕೆ ಕಾರಣ. ವಾಹನ ಚಾಲಕನಿಗೆ ಮಾನಸಿಕ ಮತ್ತು ದೈಹಿಕ ಸಂಯಮತೆ ಅವಶ್ಯಕ. ದುಃಖ, ಸಂತೋಷ, ಭಾವೋದ್ರೇಕತೆ, ಅವಸರಗಳನ್ನು ಹತೋಟಿಯಲ್ಲಿಟ್ಟುಕೊಂಡು ಚಾಲನೆ ಮಾಡಬೇಕು. ಅಜ್ಞಾನಕ್ಕೆ ಕ್ಷಮೆಯಿಲ್ಲ ಜ್ಞಾನದಿಂದ ಜೀವ ರಕ್ಷಣೆ ಸಾಧ್ಯ. ಪೊಲೀಸರ ಕೈಯಿಂದ ಪಾರಾಗಲು ನಿಯಮಗಳನ್ನು ಪಾಲಿಸದೇ ಜೀವ ರಕ್ಷಣೆಗಾಗಿ ರೂಡಿಸಿಕೊಳ್ಳಿ. ರಸ್ತೆ ಅಗಲಿಕರಣದಿಂದ ಅಪಘಾತ ತಡೆಯಲು ಸಾಧ್ಯವಿಲ್ಲ. ರಸ್ತೆ ಉತ್ತಮವಿದ್ದಷ್ಟು ವೇಗದ ಚಾಲನೆ ಮಾಡಬೇಕೆಂಬ ಮನಸ್ಥಿತಿಗೆ ಒಳಗಾಗದೆ ವೇಗದ ಮಿತಿಯಲ್ಲಿರಬೇಕು ಎಂದರು.
ಕಾನೂನು ಮಹಾವಿದ್ಯಾಲಯ ಸಹ ಪ್ರಾದ್ಯಾಪಕ ಎಸ್, ಆರ್ ಕುಂಬಾರ, ಎನ್‌ಎಸ್‌ಎಸ್ ಘಟಕಾಧಿಕಾರಿ ಡಾ. ಎಂ.ಎಚ್ ವಡ್ಡರ ಸೇರಿದಂತೆ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.