ಸಾಹಿತ್ಯ ಸೂರ್ಯ ಡಾ. ಜಚನಿಗೆ ಮರಣೋತ್ತರ ಕರ್ನಾಟಕ ರತ್ನ ಸಿಗಲಿ

ಲೋಕದರ್ಶನ ವರದಿ


ಗದಗ 19: ಸಹಸ್ರ ಕೃತಿಗಳನ್ನು ರಚಿಸುವ ಮುಖಾಂತರ ಕನ್ನಡ ಸಾಹಿತ್ಯ ಹಾಗೂ ಆಧ್ಯಾತ್ಮ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಸಾಹಿತ್ಯ ಸೂರ್ಯ ಡಾ. ಜಚನಿ ಅವರಿಗೆ ರಾಜ್ಯ ಸರಕಾರ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಿ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಒತ್ತಾಯಿಸಿದರು. 

ಅವರು ಹುಬ್ಬಳ್ಳಿ ರಸ್ತೆಯಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜಗದ್ಗುರು ಪಂಚಾಚಾರ್ಯ ಶಿಕ್ಷಣ ಮಹಾವಿದ್ಯಾಲಯ ಸಹಯೋಗದಲ್ಲಿ ಗುರುವಾರ ಸಂಘಟಿಸಿದ ಸಾಹಿತ್ಯ ಸೂರ್ಯ ಡಾ. ಜಚನಿ ಸಾಹಿತ್ಯಾವಲೋಕನ ರಾಜ್ಯಮಟ್ಟದ ವಿಚಾರ ಸಂಕೀರಣ ಉದ್ಘಾಟಿಸಿ ಅವರು ಮಾತನಾಡಿದರು. 

ಶ್ರೇಷ್ಠ ಸಾಹಿತಿ ಡಾ. ಜಚನಿ ಅವರು ಸಾಹಿತ್ಯ ಹಾಗೂ ಆಧ್ಯಾತ್ಮ ಕ್ಷೇತ್ರಕ್ಕೆ ನೀಡಿದ ಕೊಡುಗೆ ಮತ್ತಾವ ಸಾಹಿತಿ ಕೊಟ್ಟಿಲ್ಲಾ, ಸಾಹಿತ್ಯ ಬದುಕಿನೊಂದಿಗೆ ಜೀವನ ಕಳೆದು ಸಾಹಿತ್ಯ ಕ್ಷೇತ್ವವನ್ನು ಬೆಳೆಸಿದ ಡಾ. ಜಚನಿಯವರ ಸೇವೆಯನ್ನು  ರಾಜ್ಯ ಸರಕಾರ ಗುರುತಿಸಬೇಕಾಗಿದೆ. ಪ್ರಯಾಣದ ವೇಳೆ ವೇಗವಾಗಿ ಹೋಗುವ ವಾಹನದಲ್ಲಿ ಸಾಹಿತ್ಯ ರಚಿಸುವ ವಿಶೇಷ ಕೌಶಲ್ಯ ಹೊಂದಿದ ಏಕೈಕ ನಾಡಿನ ಹೆಮ್ಮೆಯ ಸಾಹಿತಿಗಳಾಗಿದ್ದರು ಎಂದು ಸ್ಮರಿಸಿದರು. 

ಸಾಹಿತಿ ಡಾ. ಜಚನಿ ಅವರು ಗುರುಗಳಲ್ಲಿ ಕವಿಯಾಗಿ, ಕವಿಗಳಲ್ಲಿ ಗುರುವಾಗಿ ಸಾಹಿತ್ಯ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ರಾಜ್ಯದಲ್ಲಿ ಮಾತೃಬಾಷೆ ಆತಂಕದಲ್ಲಿರುವದು ಬಹಳ ನೋವಿನ ಸಂಗತಿಯಾಗಿದೆ. ಕನ್ನಡ ಭಾಷೆಯನ್ನು ಬೆಳೆಸಿ, ಉಳಿಸುವ ಹಿನ್ನಲೆಯಲ್ಲಿ ನಾವೆಲ್ಲರೂ ಸತ್ಯದ ಸಂಕಲ್ಪ ಮಾಡಿ ಡಾ. ಜಚನಿ ಅವರ ಮಾರ್ಗದರ್ಶನದಲ್ಲಿ ನಡೆದಾಗ ಮಾತ್ರ ಮಾತೃಭಾಷೆಯನ್ನು ಉಳಿಸಲು ಸಾದ್ಯವಾಗಲಿದೆ. ಗಡಿ ಪ್ರದೇಶಗಳಲ್ಲಿರುವ ಕನ್ನಡ ಶಾಲೆಗಳು ಮುಚ್ಚುವ ಹಂತದಲ್ಲಿವೆ. ಕನ್ನಡ ಬಾಷೆಯನ್ನು ಉಳಿಸಿ, ಬೆಳೆಸುವಲ್ಲಿ ಪ್ರತಿಯೊಬ್ಬ ಕನ್ನಡಿಗನ ಪಾತ್ರ ಪ್ರಮುಖವಾಗಿದೆ ಎಂದು ಹೇಳಿದರು. 

ನೇತೃತ್ವವಹಿಸಿದ ಸೂಡಿ ಜುಕ್ತಿ ಹಿರೇಮಠ ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಮಾತನಾಡಿ, ಆದ್ಯಾತ್ಮ ಸಾಹಿತಿ, ಶ್ರೇಷ್ಠ ಸಂಶೋಧಕ, ಮೇರು ವ್ಯಕ್ತಿತ್ವವುಳ್ಳ ಡಾ. ಜಚನಿ ಅವರ ಸಾಹಿತ್ಯ ಚಿಂತನೆಗಳ ಅಧ್ಯನ ಮತ್ತು ವಿಚಾರ ಸಂಕಿರಣಗಳು ನಾಡಿನಲ್ಲಿ ನಿರಂತರವಾಗಿ ನಡೆಯಬೇಕಾಗಿದೆ. ವೀರಶೈವ ಧರ್ಮ ಸಂಸ್ಕೃತಿ ರಚಿಸಿದ ಡಾ. ಜಚನಿ ಅವರು ವೀರಾಗಾಮ, ಜಗದ್ಗುರು ಆದಿ ರೇಣುಕರು ಸೇರಿದಂತೆ ಹಲವಾರು ಕೃತಿಯನ್ನು ರಚಿಸಿ, ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದವರಾಗಿದ್ದರು. ಅವರು ರಚಿಸಿದ ಆದಿ ರೇಣುಕರು ಕೃತಿಯ  ಆನೆಯ ಮೇಲೆ ಅದ್ದೂರಿ  ಮೆರವಣಿಗೆ ನಡೆಸಿ ಗದಗ ನಗರದ ಗುರುಭವನದಲ್ಲಿ ಲೋಕಾರ್ಪಣೆ ಮಾಡಿದ ಕ್ಷಣವನ್ನು ಸ್ಮರಿಸಿದರು. ಸಾಹಿತ್ಯ ಕ್ಷೇತ್ರದಲ್ಲಿ ಸಾಹಿತ್ಯ ಶಿವಯೋಗಿಯಾಗಿ, ಸಾಹಿತ್ಯ ಋಷಿಯಾಗಿ ತಪಸ್ಸು ಮಾಡಿದ ಸಾಹಿತಿ ಡಾ. ಜಚನಿ ಅವರ ಪರಿಚಯ ಇಂದಿನ ಯುವಪಿಳಿಗೆಗೆ ಮಾಡಿಸುವದು ಬಹಳ ಅನಿವಾರ್ಯವಾಗಿದೆ ಎಂದರು. 

ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಶರಣು ಗೋಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಂಚಾಚಾರ್ಯ ಶಿಕ್ಷಣ ಮಹಾವಿದ್ಯಾಲಯ ಸ್ಥಾನಿಕ ಸಮಿತಿ ಚೇರಮನ್ನ ಚಂದ್ರಣ್ಣ ಬಾಳಿಹಳ್ಳಿಮಠ ಆಶಯ ನುಡಿ ನುಡಿದರು. 

ಗದಗ ಜಿಲ್ಲಾ ಪಂಚಾಯತ್ ಅದ್ಯಕ್ಷರಾದ ಸಿದ್ದಲಿಂಗೇಶ್ವರ ಪಾಟೀಲ ಹಾಗೂ ಉಪಾದ್ಯಕ್ಷರಾದ ಶ್ರೀಮತಿ ಮಲ್ಲಮ್ಮ ಬಿಚ್ಚೂರ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.  ವೇದಿಕೆಯ ಮೇಲೆ ಗದಗ ಜಿಲ್ಲಾ ಸರಕಾರಿ ನೌಕರ ಸಂಘದ ಜಿಲ್ಲಾದ್ಯಕ್ಷ ರವಿ ಗುಂಜೀಕರ, ಕಾರ್ಯದಶರ್ಿ ರೇವಣಸಿದ್ದೇಶ್ವರಸ್ವಾಮಿ ಹಿರೇಮಠ, ಗಂಗಾಧರ ಕೋಟಿ ಹಾಜರಿದ್ದರು. 500 ಕ್ಕೂ ಹೆಚ್ಚು ಗದಗ ಜಿಲ್ಲೆಯ ಸಾಹಿತಿಗಳು ಹಾಗೂ ಸಾಹಿತಿ ಅಭಿಮಾನಿಗಳು ಸಮಾರಂಭದಲ್ಲಿ ಹಾಜರಿದ್ದರು. ಪ್ರಾಚಾರ್ಯ ಬಿ.ಸಿ.ಉಪ್ಪಿನ ಸ್ವಾಗತಿಸಿದರು, ಬಾಹುಬಲಿ ಜೈನರ್ ನಿರೂಪಿಸಿದರು. ಪ್ರಕಾಶ ಮಂಗಳೂರ ವಂದಿಸಿದರು. ಈ ವಿಚಾರ ಸಂಕಿರಣದಲ್ಲಿ ಅಪಾರ ಸಂಖ್ಯೆಯ ಸಾಹಿತಿಗಳು ಉಪಸ್ಥಿತರಿದದರು.