ಅನಕ್ಷರಸ್ಥ ಖೈದಿಗಳಿಗೆ ಸಾಕ್ಷರತಾ ಕಾರ್ಯಕ್ರಮ

ಕೊಪ್ಪಳ 06: ಕೊಪ್ಪಳ ಜಿಲ್ಲಾ ಕಾರಾಗೃಹದಲ್ಲಿ ಅನಕ್ಷರಸ್ಥ ಖೈದಿಗಳಿಗೆ ಸಾಕ್ಷರತಾ ಕಾರ್ಯಕ್ರಮ ಇಂದು (ಸೆ.06) ನಡೆಯಿತು.  

ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಕಾರಾಗೃಹದಲ್ಲಿ ಅನಕ್ಷರಸ್ಥ ಖೈದಿಗಳಿಗೆ ಸಾಕ್ಷರತಾ ಕಾರ್ಯಕ್ರಮ ಹಮ್ಮಿಕೊಳ್ಳಲು ಜಿಲ್ಲಾಧಿಕಾರಿಗಳು ಹಾಗೂ ಜೈಲು ಸುಧಾರಣಾ ಸಮಿತಿಯ ಪರವಾಗಿ ಇಲಾಖಾ ಆದೇಶದ ಮೇರೆಗೆ ಆದೇಶಿಸಿದ್ದು, ಕಾರಾಗೃಹದಲ್ಲಿ ಅನಕ್ಷರಸ್ಥ ಖೈದಿಗಳಿಗೆ ಸಾಕ್ಷರತಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳಾ ಉಮೇಶ ಎಂ. ಪೂಜಾರ ತಿಳಿಸಿದ್ದಾರೆ.

ಜಿಲ್ಲಾ ಕಾರಾಗೃಹದಲ್ಲಿ ಕಲಿತಿರುವ ಖೈದಿಗಳಿಂದ ಅನಕ್ಷರಸ್ಥ ಖೈದಿಗಳಿಗೆ ಅಕ್ಷರ ಕಲಿಸುವ ಕಾರ್ಯವನ್ನು ಪ್ರಾರಂಭಿಸಲಾಯಿತು. ಬೋಧಕರಿಗೆ ಕಾರ್ಯಕ್ರಮ ಸಹಾಯಕರಾದ ಸೋಮಶೇಖರ ತುಪ್ಪದ ರವರು  ಪಠ್ಯಾಧಾರಿತ ತರಬೇತಿ ನೀಡಿದರು.  ಪ್ರತಿ ಒಬ್ಬ ಬೋಧಕರು 10 ಜನ ಅನಕ್ಷರಸ್ಥ ಖೈದಿಗಳಿಗೆ 6 ತಿಂಗಳೊಳಗಾಗಿ ಅಕ್ಷರ ಕಲಿಸಬೇಕಾಗಿದ್ದು, ಪ್ರತಿವಾರ ಕಲಿಕೆಯ ಗುಣಮಟ್ಟವನ್ನು ಪರಿಶೀಲಿಸಲಾಗುವುದು.  ಒಟ್ಟು 90 ಜನ ಅನಕ್ಷರಸ್ಥ ಖೈದಿಗಳು ಕಾರಾಗೃಹದಲ್ಲಿದ್ದು, ಇವರನ್ನು 6 ತಿಂಗಳೊಳಗಾಗಿ ಅಕ್ಷರಸ್ಥರನ್ನಾಗಿ ಮಾಡುವ ಗುರಿ ಹೊಂದಲಾಗಿದೆ.  

ಈ ಸಂದರ್ಭದಲ್ಲಿ ಜಿಲ್ಲಾ ಕಾರಾಗೃಹ ಅಧಿಕಾರಿ ಜಿ.ಎಂ. ಕೋಟ್ರೇಶ ರವರು ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯಿಂದ ನೀಡಿದ ಕಲಿಕಾ ಬೋಧನಾ ಸಾಮಗ್ರಿಗಳನ್ನು ವಿತರಿಸಿದರು.  ತಾಲ್ಲೂಕು ಸಂಯೋಜಕ ಸಂಗಪ್ಪ ಕೊಪ್ಪದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.