ಕಾರಾಗೃಹದ ನಿವಾಸಿಗಳಿಗಾಗಿ ಸಾಕ್ಷರತಾ ಕಾರ್ಯಕ್ರಮ

ಲೋಕದರ್ಶನ ವರದಿ

ಬೆಳಗಾವಿ 14: ಇತ್ತೀಚಿಗೆ ಕೇಂದ್ರ ಕಾರಾಗೃಹ ಬೆಳಗಾವಿಯಲ್ಲಿ ಅನಕ್ಷರಸ್ಥ ನಿವಾಸಿಗಳಿಗಾಗಿ ಮೂಲ ಸಾಕ್ಷರತಾ ಕಾರ್ಯಕ್ರಮದ ಪ್ರಾರಂಭೋತ್ಸವ ಜರುಗಿತು.  ಸದರಿ ಕಾರ್ಯಕ್ರಮವು ಲೋಕ ಶಿಕ್ಷಣ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತ ಬೆಳಗಾವಿ ಹಾಗೂ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿತ್ತು,  ಮುಖ್ಯ ಅತಿಥಿಗಳಾಗಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳಾದ ಆರ್.ಪಿ ಜುಟ್ಟನವರ, ಕಾರ್ಯಕ್ರಮ ಸಹಾಯಕರಾದ ಬಿ.ಎಸ್.ಪಾಟೀಲ ಆಗಮಿಸಿದ್ದರು.  ಅಧ್ಯಕ್ಷತೆಯನ್ನು ಕಾರಾಗೃಹದ ಮುಖ್ಯ ಅಧೀಕ್ಷಕರಾದ ಕೃಷ್ಣಕುಮಾರ ವಹಿಸಿದ್ದರು.  

ಕಾರ್ಯಕ್ರಮ ಉದ್ದೇಶಿಸಿ ಕೃಷ್ಣಕುಮಾರ ಮಾತನಾಡಿ, ವಿದ್ಯೆಗೆ ಯಾವುದೇ ವಯಸ್ಸಿನ ಇತಿಮಿತಿ ಇರುವುದಿಲ್ಲ. ವಿದ್ಯೆಯು ಒಬ್ಬ ವ್ಯಕ್ತಿಯ ಸರ್ವಾಗೀನ ಪ್ರಗತಿಗೆ ಅತಿ ಅವಶ್ಯಕವಾದದ್ದು.  ಶಿಕ್ಷಣ ಕೇವಲ ಒಬ್ಬ ವ್ಯಕ್ತಿ ಕುಟುಂಬದ ಪ್ರಗತಿಗೆ ಅಲ್ಲದೆ ಇಡೀ ದೇಶದ ಪ್ರಗತಿಗೆ ಅತೀ ಅವಶ್ಯಕ.  ದೇಶದ ಪ್ರಥಮ ಶಿಕ್ಷಕಿ ಸಾವಿತ್ರಿಬಾಯಿ ಫುಲೆಯವರು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಹೋರಾಡಿದ ಮಹಿಳೆಯರು ಅಕ್ಷರಸ್ಥರಾಗಲು ಶ್ರಮಿಸಿದರು.  

ಅಲ್ಲದೆ ಡಾ|| ಬಿ.ಆರ್ ಅಂಬೇಡ್ಕರರು, ಗಾಂಧೀಜಿ ಇನ್ನೂ ಅನೇಕ ಮಹನಿಯರು ಶಿಕ್ಷಣದ ಮಹತ್ವವನ್ನು ತಿಳಿಸಿದ್ದಾರೆ.  ಆದ್ದರಿಂದ ನಿವಾಸಿಗಳು ಕಾರಾಗೃಹದ ಸಮಯವನ್ನು ಸದುಪಯೋಗ ಪಡಿಸಿಕೊಂಡು ಅಕ್ಷರ ಜ್ಞಾನ ಪಡೆದು ವಿದ್ಯಾವಂತರಾಗಿ ಬಿಡುಗಡೆ ಹೊಂದಬೇಕು ಎಂದು ಹೇಳಿದರು. ಹಾಗೂ ತಾವು ಕಲಿತ ವಿದ್ಯೆಯನ್ನು ತಮ್ಮ ಕುಟುಂಬದವರಿಗೆ ಹಾಗೂ ಇತರರಿಗೆ ಹೇಳಿಕೊಡಬೇಕು. ಮೂಲ ಸಾಕ್ಷರತಾ ಕಾರ್ಯಕ್ರಮಕ್ಕೆ ಸಂಸ್ಥೆ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ವಿದ್ಯಾವಂತ ನಿವಾಸಿಗಳು, ಅನಕ್ಷರಸ್ಥ ಸಹಬಂದಿಗಳಿಗೆ ಓದು ಬರಹ ಕಲಿಸಬೇಕು ಎಂದು ಹೇಳಿದರು.  

ಮುಖ್ಯ ಅತಿಥಿಗಳಾದ ಆರ್.ಪಿ ಜುಟ್ಟನವರ ಮಾತನಾಡಿ ಸದರಿ ಕಾರ್ಯಕ್ರಮವನ್ನು ನಗರ ಪ್ರದೇಶಗಳಲ್ಲಿನ ಅನಕ್ಷರಸ್ಥರ ಮೂಲ ಸಾಕ್ಷರತಾ ಕಾರ್ಯಕ್ರಮದಡಿ ಕಾರಾಗೃಹದ ಅನಕ್ಷರಸ್ಥ ನಿವಾಸಿಗಳಿಗೆ ಸಾಕ್ಷರತಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.  ಇಲಾಖೆಯ ವತಿಯಿಂದ ಕಲಿಕಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನು ಉಚಿತವಾಗಿ ನೀಡಿ ಕಾರಾಗೃಹದ ಅಧಿಕಾರಿಗಳು ಹಾಗೂ ಶಿಕ್ಷಕಕರ ಮಾರ್ಗದರ್ಶನದಲ್ಲಿ ವಿದ್ಯಾವಂತ ಬಂದಿ ನಿವಾಸಿಗಳನ್ನು ಸ್ವಯಂ ಸೇವಕರನ್ನಾಗಿ ಮಾಡಿ ಅವರಿಗೆ ತರಬೇತಿ ನೀಡಿ ಅವರ ಮೂಲಕ ಸಾಕ್ಷರತಾ ಕಲಾರ್ಯಕ್ರಮ ಯಶಸ್ವಿಗೊಳಿಸಲಾಗುವುದು ಎಂದು ಹೇಳಿದರು.  ಈ ವರ್ಷ 10 ಸ್ವಯಂ ಸೇವಕರ ಮೂಲಕ ಅಕ್ಷರ ಜ್ಞಾನದ ಪ್ರಕ್ರಿಯೆ ಜರುಗುವುದು ಎಂದು ಹೇಳಿದರು.   ಕಾರ್ಯಕ್ರಮದಲ್ಲಿ ನಿವಾಸಿಗಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು. ಬಿ.ಎಸ್. ಪಾಟೀಲ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಸಾಕ್ಷರತೆಯ ಪ್ರಮಾಣ ವಚನ ಬೋಧಿಸಿದರು. ವೇದಿಕೆಯಲ್ಲಿ ಸಹಾಯಕ ಅದೀಕ್ಷಕರಾದ ಬಿ.ಎಸ್.ಹೊಸಮನಿ ಉಪಸ್ಥಿತಿರಿದ್ದರು. ಶಂಕರ ತಿಗಡಿ ಪ್ರಾಥರ್ಿಸಿದರು.  

ಜೈಲರ್ ಲೋಕೇಶ ಸ್ವಾಗತಿಸಿದರು. ಶಿಕ್ಷಕ ಎಸ್.ಎಸ್ ಯಾದಗುಡೆ ಕಾರ್ಯಕ್ರಮ ನಿರೂಪಿಸಿದರು.  ತಾಲೂಕಾ ಸಂಯೋಜಕರಾದ ಆರ್. ಎಮ್. ಡುಕರಿ ವಂದಿಸಿದರು.