ಸಂಗೀತ ಕೇಳುವುದರಿಂದ ನಮ್ಮ ಮನಸ್ಸು ನವಚೈತನ್ನ ಹೊಂದುತ್ತದೆ : ಪೂರ್ಣಿಮಾ ಬಾಗೇವಾಡಿ

Listening to music rejuvenates our mind: Poornima Bagevadi

ಲೋಕದರ್ಶನ ವರದಿ 

ಸಂಗೀತ ಕೇಳುವುದರಿಂದ ನಮ್ಮ ಮನಸ್ಸು ನವಚೈತನ್ನ ಹೊಂದುತ್ತದೆ : ಪೂರ್ಣಿಮಾ ಬಾಗೇವಾಡಿ 

ಧಾರವಾಡ, 27: ಸಂಗೀತವು ಲಯಬದ್ದ ಶಬ್ದಗಳ ಜೋಡಣೆಯಿಂದ ಉತ್ಪತ್ತಿಯಾಗುವ ಜಾಗತಿಕ ಜಾಗತಿಕ ಭಾಷೆಯಾಗಿದ್ದು, ಇದಕ್ಕೆ ಯಾವುದೇ ಭೌಗೋಳಿಕ ಗಡಿಯಿರುವುದಿಲ್ಲ.  ದಿನಕ್ಕೆ ಮೂವತ್ತು ನಿಮಿಷ ಸಂಗೀತ ಕೇಳುವುದರಿಂದ ನಮ್ಮ ಮನಸ್ಸು ನವಚೈತನ್ನ ಹೊಂದುತ್ತದೆ ಎನ್ನುವುದು ವೈಜ್ಞಾನಿಕ ವರದಿಗಳಿಂದ ದೃಢಪಟ್ಟಿದೆ ಎಂದು ಕಲಾಪೋಷಕಿ ಪೂರ್ಣಿಮಾ ಬಾಗೇವಾಡಿ ಅಭಿಪ್ರಾಯಪಟ್ಟರು.   

ದಿನಾಂಕ: 27.04.2025ರಂದು ನಗರದ ಬೇಂದ್ರೆ ಭವನದಲ್ಲಿ ಸ್ವರ ಸಂವಾದಿನಿ ಸಂಗೀತ ಶಾಲೆಯು ಏರಿ​‍್ಡಸಿದ್ದ ಬೇಸಿಗೆ ಸಂಗೀತ ಶಿಬಿರದ ಸಮಾರೋಪ ಹಾಗೂ ಸಂಗೀತ ಕಾರ್ಯಕ್ರಮ ಉದ್ಘಾಟಿಸಿದ ಪೂರ್ಣಿಮಾ ಬಾಗೇವಾಡಿಯವರು ಮುಂದುವರೆದು ಮಾತನಾಡುತ್ತ ಪಂ.ಪಂಚಾಕ್ಷರ ಗವಾಯಿಗಳು, ಭಾರತರತ್ನ ಪಂ.ಭೀಮಸೇನ ಜೋಶಿ, ಸವಾಯಿ ಗಂಧರ್ವ, ಡಾ.ಮಲ್ಲಿಕಾರ್ಜುನ ಮನಸೂರ, ಡಾ.ಗಂಗೂಬಾಯಿ ಹಾನಗಲ್, ಡಾ.ಬಸವರಾಜ ರಾಜಗುರು ಅವರು ನಮ್ಮ ದೇಶದ ಹಿರಿಮೆಯನ್ನು ಹೆಚ್ಚಿಸಿದ ಸಂಗೀತದ ಮೇರು ಶಿಖರಗಳಾಗಿದ್ದಾರೆ ಎಂದರು.   

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಿಕ್ಷಣ ಇಲಾಖೆಯ ಸಿದ್ದು ವಾರದ ಅವರು ಮಾತನಾಡುತ್ತ ಮಕ್ಕಳನ್ನು ನಾವಿಂದು ಉತ್ತಮ ಕೇಳುಗರನ್ನಾಗಿಸಬೇಕಿದೆ.  ಅದು ಸಂಗೀತವೇ ಆಗಿರಬಹುದು, ಶಾಲೆಯ ಪಠ್ಯವೇ ಆಗಿರಬಹುದು ಅವರು ಮುಂದೆ ಉತ್ತಮ ವ್ಯಕ್ತಿಯಾಗುತ್ತಾನೆ.  ಸಂಗೀತಕ್ಕೆ ಬಹುದೊಡ್ಡ ಶಕ್ತಿಯಿದೆ.  ಸಂತ ಕನಕ ದಾಸರು ತಮ್ಮ ದಾಸವಾಣಿಯಿಂದ ಕೃಷ್ಣನನ್ನೇ ಸಾಕ್ಷಾತ್ಕರಿಸಿಕೊಂಡರು, ಅಂತಹ ಶಕ್ತಿ ಸಂಗೀತಕ್ಕಿದೆ ಎಂದರು.     

ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಸಂಯೋಜಕರಾದ ಪ್ರಕಾಶ ಬಾಳಿಕಾಯಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತ ಡಾ.ಪರಶುರಾಮ ಕಟ್ಟಿಸಂಗಾವಿ ಅವರು ಜೈಪೂರ ಅತ್ರೋಲಿ ಘರಣೆಯ ಪರಂಪರೆಯನ್ನು ಅತ್ಯುತ್ತಮ ರೀತಿಯಲ್ಲಿ ಮುಂದುವರೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯವಾದುದು ಎಂದರು.   

ಅತಿಥಿಗಳಾಗಿದ್ದ ಹುಬ್ಬಳ್ಳಿಯ ಗಾಯಕ ಮಂಜುನಾಥ ಖೋತ್ ಅವರು ಮಾತನಾಡುತ್ತ ಎಲ್ಲ ದೇಶಗಳು ತನ್ನದೇ ಆದ ವೈಶಿಷ್ಟ್ಯತೆಗಳನ್ನು ಹೊಂದಿವೆ.  ಸಂಸ್ಕೃತಿ, ಕಲೆ, ಸಂಗೀತ, ನೃತ್ಯ, ಹಾಗೂ ಲಲಿತಕಲೆಗಳನ್ನು ಸಂಪನ್ಮೂಲ ಮತ್ತು ಅದನ್ನು ಸಂಪತ್ತಾಗಿ ಉಳಿಸಿಕೊಂಡಿದೆ ಎಂದರೆ ಅದು ಕೇವಲ ಭಾರತ ದೇಶ ಮಾತ್ರ.  ಇಂತಹ ಶಿಬಿರಗಳು ನಮ್ಮ ಭಾರತೀಯ ಕಲೆ-ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಪೂರಕವಾಗಿವೆ ಎಂದರು.   

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಡಾ.ಬಸವರಾಜ ಎಸ್‌. ಕಲೆಗಾರ ಮಾತನಾಡುತ್ತ ಬೇಂದ್ರೆಯವರ ನೆಲದಲ್ಲಿ ಈ ಬೇಸಿಗೆ ಶಿಬಿರವು ಸಮಾರೋಪಗೊಳ್ಳುತ್ತಿರುವುದು ಒಂದು ಸಾರ್ಥಕವಾದುದು.  ಶಿಬಿರದಲ್ಲಿ ಸಿದ್ಧಗೊಂಡ ಕಲಾವಿದರುಗಳಿಗೆ ವೇದಿಕೆ ಕಲ್ಪಿಸಿ, ಅವರಲ್ಲಿರುವ ಸಂಗೀತ ಕಲೆಯನ್ನು ಗಟ್ಟಿಗೊಳಿಸಿರುವುದು ಅವರ ಜೀವನದ ಬಹುದೊಡ್ಡ ಘಟ್ಟವಾಗಿದೆ. ಇಂದು ಪಾಲ್ಗೊಂಡ ಮಕ್ಕಳಲ್ಲಿ ಭವಿಷ್ಯದಲ್ಲಿ ಒಬ್ಬ ಮನ್ಸೂರರನ್ನು, ಒಬ್ಬ ಗಂಗೂಬಾಯಿ ಹಾನಗಲ್‌ರನ್ನು ಕಾಣಬಹುದಾಗಿದೆ ಎಂದರು.   

ಪ್ರೇಮಾ ಬಡಿಗೇರ ನಿರೂಪಿಸಿದರು. ಶಿಬಿರಾರ್ಥಿಗಳು ಪ್ರಾರ್ಥಿಸಿದರು. ಸಂಯೋಜಕ ಜೆ.ಕೆ.ಸೋಮಲಿಂಗ ಸ್ವಾಗತಿಸಿದರು.  ಡಾ.ಪರಶುರಾಮ ಕಟ್ಟಿಸಂಗಾವಿ ವಂದಿಸಿದರು.   

ನಂತರ ಜರುಗಿದ ಕಾರ್ಯಕ್ರಮದಲ್ಲಿ ಲೋಹಿತ ಅಸ್ನೋಟಿಕರ ಸಿತಾರ ವಾದನ, ಪ್ರಶಾಂತ ಭಂಡಿವಾಡ ಇವರ ಹಾರ್ಮೊನಿಯಂ ವಾದನ, ಪುಷ್ಪಾ ಬಡಿಗೇರ, ಪ್ರೇಮಾ ಬಡಿಗೇರ ಹಾಗೂ ಸೌಂದರ್ಯ ಕಾಂಬಳೆ ಅವರ ಶಾಸ್ತ್ರೀಯ ಸಂಗೀತ, ಮುರುಗೇಶ ಶೆಟ್ಟಿ, ಪ್ರದೀಪ ಹಿರೇಮಠ ಹಾಗೂ ಮುತ್ತು ಗರನರ ಅವರ ಸುಗಮ ಸಂಗೀತ ಹಾಗೂ ಅಖಿಲಾ ಹಿಟ್ನಳ್ಳಿ ಮತ್ತು ತಂಡ ವಚನ ಸಂಗೀತ, ಚೈತ್ರಾ ಕಟ್ಟಿಸಂಗಾವಿ ಅವರು ಜಾನಪದ ಗಾಯನ, ಶರ್ಮಿಳಾ ಹಿರೇಮಠ ಅವರು ಸುಗಮ ಸಂಗೀತ, ಬೇಂದ್ರೆ ಅಕಾಡೆಮಿ ವಿದ್ಯಾರ್ಥಿಗಳು ವಚನ ಗಾಯನ, ವಿಜಯಲಕ್ಷ್ಮೀ ಗುಂಡಪ್ಪ ಅವರು ಸಿತಾರ ವಾದನ ಪ್ರಸ್ತುತ ಪಡಿಸಿದರು.   

ತಬಲಾದಲ್ಲಿ ಡಾ.ಶಿವರಾಜ ಈರಾಪೂರ, ವಿಠ್ಠಲ ಭಜಂತ್ರಿ, ಮಂಜುನಾಥ ಕಟ್ಟಿಸಂಗಾವಿ, ರಿದಂ ಪ್ಯಾಡ್‌ನಲ್ಲಿ ರುಸ್ತುಮ್‌ಸಾಬ್ ಉಕ್ಕುಂದ, ಕೀ ಬೋರ್ಡನಲ್ಲಿ ಪ್ರಶಾಂತ ಸಾಥ್ ಸಂಗತ ನೀಡಿದರು.