ಭಾಷಾಶಾಸ್ತ್ರಜ್ಞ ಡಾ. ಎಸ್‌. ಎಸ್‌. ಅಂಗಡಿ

ಹಸ್ತ ಪ್ರತಿಗಳ ಸಂಶೋಧನೆ ತುಂಬಾ ಕ್ಲಿಷ್ಟಕರವಾದುದು. ಜ್ಞಾನ ಭಂಡಾರದ ಸಂಪತ್ತು  ಹಸ್ತ ಪ್ರತಿಗಳಲ್ಲಿದೆ. ಸಂಶೋಧನೆಯನ್ನೇ ತಮ್ಮ ಬದುಕಿನ ಬಹುಮುಖ್ಯ ಭಾಗವನ್ನಾಗಿಸಿಕೊಂಡು ಪ್ರಾಮಾಣಿಕವಾಗಿ ಸಂಶೋಧನಾ ಕ್ಷೇತ್ರಕ್ಕೆ ಕೊಡುಗೆಯನ್ನು ನೀಡಿದವರು ಡಾ.ಎಸ್‌.ಎಸ್‌.ಅಂಗಡಿಯವರು. ಅವರು ಹಸ್ತಪ್ರತಿಶಾಸ್ತ್ರ, ಶಾಸನಶಾಸ್ತ್ರ, ಭಾಷಾಶಾಸ್ತ್ರ, ಹಳಗನ್ನಡ, ಜಾನಪದ ಹಲವು ಕ್ಷೇತ್ರಗಳಲ್ಲಿ ಸಂಶೋಧನೆ ಮಾಡಿ ಪ್ರಸಿದ್ಧಿ ಪಡೆದಿರುವರು. ಹಸ್ತ ಪ್ರತಿಶಾಸ್ತ್ರ ಅಧ್ಯಯನ ವಿಭಾಗಕ್ಕೆ ಅವರು ಸಲ್ಲಿಸಿರುವ ಸೇವೆ ಅನುಪಮವಾದುದು. 

ಎಸ್‌.ಎಸ್‌.ಅಂಗಡಿಯವರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯರಝರವಿ ಗ್ರಾಮದಲ್ಲಿ 1966ರ ಜೂನ್ 10ರಂದು ಜನಿಸಿದರು. ತಂದೆ ಶಂಕ್ರೆಪ್ಪ, ತಾಯಿ ಕಾಶಮ್ಮ. ಕೃಷಿಕ ಕುಟುಂಬದಲ್ಲಿ ಬೆಳೆದ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಗೋಕಾಕ ತಾಲೂಕಿನ ಮಮದಾಪುರದಲ್ಲಿ ಮುಗಿಸಿದರು. ಅವರು 1987ರಲ್ಲಿ ಬಿ.ಎ. ಪದವಿಯನ್ನು ವಿಜಯಪುರದ ನೂತನ ಕಲಾ ಮಹಾವಿದ್ಯಾಲಯದಲ್ಲಿ ಪ್ರಥಮ ಶ್ರೇಣಿಯೊಂದಿಗೆ ತೇರ್ಗಡೆಯಾದರು. ಬಿ.ಎಲ್‌.ಡಿ.ಇ. ಸಂಸ್ಥೆಯ ಬಿ.ಎಡ್‌. ಕಾಲೇಜಿನಲ್ಲಿ ಬಿ.ಎಡ್ ಪದವಿಯನ್ನು ಪೂರೈಸಿದ ಎಸ್‌.ಎಸ್‌.ಅಂಗಡಿಯವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಭಾಷಾಶಾಸ್ತ್ರದಲ್ಲಿ ಎಂ.ಎ. ಪದವಿಯನ್ನು ಚಿನ್ನದ ಪದಕದೊಂದಿಗೆ ಪಡೆದರು. ನಂತರ ಎಂ.ಈಡಿ ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಪೂರೈಸಿದರು. 

ಬೆಳಗಾವಿಯ ಸಂಗೊಳ್ಳಿರಾಯಣ್ಣ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಧ್ಯಾಪಕ ವೃತ್ತಿಯನ್ನು ಆರಂಭಿಸಿದ ಎಸ್‌.ಎಸ್‌.ಅಂಗಡಿಯವರು 1993ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾ ಸಹಾಯಕರಾಗಿ ನೇಮಕಗೊಂಡರು. 1996ರಲ್ಲಿ ಎಂ.ಫಿಲ್‌. ಪದವಿಯನ್ನು ಪೂರೈಸಿದ ಅಂಗಡಿಯವರು 1999ರಲ್ಲಿ ಡಾ.ಕೆ.ವಿ.ನಾರಾಯಣ ಅವರ ಮಾರ್ಗದರ್ಶನದಲ್ಲಿ ‘ಮಿಷನರಿಗಳ ದ್ವಿ-ಭಾಷಿಕ ನಿಘಂಟುಗಳು : ತೌಲನಿಕ ಅಧ್ಯಯನ’ ಎಂಬ ಪ್ರೌಢ ಪ್ರಬಂಧವನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ ಪಿಎಚ್‌.ಡಿ. ಪದವಿ ಪಡೆದರು. ಅದೇ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಅಂಗಡಿಯವರು ಸಧ್ಯ ಬೆಳಗಾವಿಯ ಡಾ.ಅ.ನೇ ಉಪಾಧ್ಯೆ ವಿಸ್ತರಣಾ ಕೇಂದ್ರದಲ್ಲಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತ ಪ್ರತಿಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ, ಕೂಡಲಸಂಗಮದ ಅಂತರಾಷ್ಟ್ರೀಯ ವಚನ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿಯೂ ಅವರು ಅನುಪಮ ಸೇವೆ ಸಲ್ಲಿಸಿದ್ದಾರೆ. ಡಾ.ಎಸ್‌.ಎಸ್‌.ಅಂಗಡಿಯವರು 1998ರಲ್ಲಿ ವೀಣಾ ಅವರನ್ನು ಮದುವೆಯಾದರು. ಅವರಿಗೆ ಇಬ್ಬರೂ ಹೆಣ್ಣುಮಕ್ಕಳು, ಮೇಘನಾ ಮತ್ತು ವಿಶಾಲಾಕ್ಷಿ. 

ಸಾಹಿತ್ಯ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಗಣನೀಯ ಸೇವೆಸಲ್ಲಿಸಿದ ಡಾ.ಎಸ್‌.ಎಸ್‌.ಅಂಗಡಿಯವರು ಹಲವು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಸಮರ​‍್ಿಸಿದ್ದಾರೆ. ಭಾಷಾ ಕ್ಷೇತ್ರಕಾರ್ಯ, ಶೋಧನ, ಕುಂಬಾರ ವೃತ್ತಿ ಪದಕೋಶ, ಬಡಿಗ ವೃತ್ತಿಪರ ಮಂಜರಿ, ಕನ್ನಡ ಕ್ರಿಯಾರೂಪಗಳು, ಸಂಬಂಧವಾಚಕಗಳು ಮತ್ತು ಸಂಬೋಧನೆಗಳು, ಕನ್ನಡ ನಿಘಂಟು ರಚನೆ, ದಾಸ ಸಾಹಿತ್ಯ ಶಬ್ಧ ಶಿಲ್ಪ, ಕನ್ನಡ ವ್ಯಾಕರಣ ಪರಿಭಾಷೆ, ವಚನ ಸಾಹಿತ್ಯ ಭಾಷೆ, ಚಂಪಾ ನಾಟಕ ಭಾಷೆ, ಕುರುಬ ಸಮುದಾಯ ಭಾಷೆ, ಕರ್ನಾಟಕದ ಬುಡಕಟ್ಟು ಭಾಷೆ, ಜನಪದ ಸಾಹಿತ್ಯ ಭಾಷೆ, ದಾಸ ಸಾಹಿತ್ಯ ಭಾಷೆ, ಶಂಬಾಜೋಶಿ ಭಾಷಿಕ ವಿವೇಚನೆ, ಮನೋಭಾಷಾ ವಿಜ್ಞಾನ, ಚಂದ್ರಶೇಖರ ಕಂಬಾರ ಕಾವ್ಯ  ಭಾಷೆ, ಕ್ಷೇತ್ರ ಕಾಯಕ, ಕನ್ನಡ ಭಾಷಾಧ್ಯಯನ, ಕನ್ನಡ ನಿಘಂಟುಶಾಸ್ತ್ರ ಇವುಗಳೆಲ್ಲ ಡಾ.ಅಂಗಡಿಯವರ ಭಾಷಾಶಾಸ್ತ್ರಕ್ಕೆ ಸಂಬಂಧಿಸಿದ ಕೃತಿಗಳಾಗಿವೆ. ಎಂ.ಚಿದಾನಂದಮೂರ್ತಿ, ಕನ್ನಡ ಸಂಶೋಧನೆ ಮತ್ತು ಎಂ.ಚಿದಾನಂದ ಮೂರ್ತಿ, ಕಾಡುದನಿ, ಕೃತಿ ಪ್ರವೇಶ, ಟಿ.ವಿ. ವೆಂಕಟಾಚಲಶಾಸ್ತ್ರಿ ಬದುಕು-ಬರೆಹ, ಕನ್ನಡ ಜಾನಪದ ಶಾಸ್ತ್ರಕ್ಕೆ ಎಂ.ಚಿದಾನಂದಮೂರ್ತಿ ಅವರ ಕೊಡುಗೆ, ಕನ್ನಡ ವಚನ ಅಧ್ಯಯನ, ಆಧುನಿಕ ಕನ್ನಡ ಸಂಶೋಧನೆ ಮುಂತಾದ ಕೃತಿಗಳು ವಿಮರ್ಶಾಕೃತಿಗಳಾಗಿವೆ. 

ಸಂಗ್ಯಾ-ಬಾಳ್ಯಾ ಗೀತರೂಪಕ ಅಧ್ಯಯನ, ಹಂಪಿ-ಪಂತಿ ಪದಗಳು, ಕನ್ನಡ ಶಿಶುಪದಗಳು, ಬಲವಂತ-ಬಸವಂತ, ಕನ್ನಡ ಜನದ ಸಾಹಿತ್ಯ, ಯರಝರವಿ ಹಾಡು ಮುಂತಾದವುಗಳು ಜಾನಪದಕ್ಕೆ ಸಂಬಂಧಿಸಿದ ಕೃತಿಗಳಾಗಿವೆ. ಅಲ್ಲದೇ ಸರಳ ಶಬ್ದಮಣಿ ದರ​‍್ಣ, ಕನ್ನಡ ಹಸ್ತ ಪ್ರತಿ ರಚನೆ: ಭಾಷಿಕ ವಿವೇಚನೆ ಕರ್ನಾಟಕ ಭಾಷಾಭೂಷಣ, ಸರಳ ಯಶೋಧರ ಚರಿತೆ, ಸರಳ ವಡ್ಡಾರಾಧನೆ, ಸರಳ ಹದಿಬದಿಯ ಧರ್ಮ, ಸರಳ ಪ್ರಾಚೀನ ಗದ್ಯ ಸಾಹಿತ್ಯ, ಛಂದಸ್ಸಿನ ಅಧ್ಯಯನ ನೆಲೆಗಳು, ಕನ್ನಡ ಭಾಷಾಲೋಕ, ಬೆಟಗೇರಿ ಕೃಷ್ಣಶರ್ಮರ ಆಯ್ದ ಬರಹಗಳು ಮುಂತಾದವುಗಳು ಅವರ ಸಂಪಾದನಾ ಕೃತಿಗಳಾಗಿವೆ. ಇವುಗಳಲ್ಲದೆ ಕನ್ನಡ ಪ್ರಭ ದಿನಪತ್ರಿಕೆಯ ಸಾಪ್ತಾಹಿಕ ಪ್ರಭದಲ್ಲಿ ನುಡಿಕನ್ನಡ, ವಿಜಯವಾಣಿ ದಿನಪತ್ರಿಕೆಯ ವಿಜಯವಿಹಾರದಲ್ಲಿ ಸಾಂಸ್ಕೃತಿಕ ಪದಗಳ ಸ್ವರೂಪ ಕುರಿತು ಚರ್ಚಿಸಿದ್ದಾರೆ. ಅವರು ಹಸ್ತಪ್ರತಿಶಾಸ್ತ್ರ ವಿಭಾಗದ ಸಹೋದ್ಯೋಗಿಗಳೊಂದಿಗೆ ನಾಡಿನಾದ್ಯಂತ ಸಂಚರಿಸಿ ಹಸ್ತಪ್ರತಿಗಳ ಸಂಗ್ರಹ ಕಾರ್ಯದಲ್ಲಿ ತೊಡಗಿ, ಅವುಗಳನ್ನು ಒಂದೆಡೆ ಸಂಗ್ರಹಿಸಿದರು. ಹೀಗೆ ಸಂಗ್ರಹಿಸಿದುದರ ಫಲವಾಗಿ ಇಂದು ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸುಸಜ್ಜಿತವಾದ ಹಸ್ತ ಪ್ರತಿಭಂಡಾರ ಸ್ಥಾಪಿತವಾಗಿದೆ. ಕನ್ನಡ ಭಾಷೆಯ ರಚನೆ ಬಳಕೆ ಕಾವ್ಯ ಭಾಷೆಯ ಅರ್ಥದ ನೆಲೆಗಳನ್ನು ಸಮಾಜೋಭಾಷಿಕ ಕಡೆಗೆ ಅಧ್ಯಯನ ಮಾಡಲು ಅವರ ಭಾಷಿಕ ಬರಹಗಳು ಬೆಳಕು ತೋರಿಸಿವೆ. ಈ ನಿಟ್ಟಿನಲ್ಲಿ ಕನ್ನಡ ಭಾಷಾ ವಿಜ್ಞಾನ ಮಹತ್ವದ ಕೃತಿಯಾಗಿದೆ. ಡಾ.ಅಂಗಡಿ ಅವರು ಛಂದಸ್ಸನ್ನು ಕಾವ್ಯ ಭಾಷೆಯ ಭಾವ-ಬಂದ-ನಾದದ ನೆಲೆಯಲ್ಲಿ ವಿಶ್ಲೇಷಿಸುತ್ತಾರೆ. ಅದು ಕನ್ನಡದಲ್ಲಿ ಹೊಸ ಪ್ರಯೋಗ ಕನ್ನಡ ಛಂದಃಶಾಸ್ತ್ರ ಕೃತಿಯಲ್ಲಿ ಆ ಪ್ರಯೋಗ ಮಾಡಿದ್ದಾರೆ. ಕನ್ನಡ ನಿಘಂಟು ರಚನೆಯ ಚರಿತ್ರೆಯನ್ನು ಕ್ರಮಬದ್ಧವಾಗಿ ಸಮೀಕ್ಷೆ ಮತ್ತು ವಿಶ್ಲೇಷನೆ ಮಾಡಿದ ಕೃತಿ ಕನ್ನಡ ನಿಘಂಟು ಶಾಸ್ತ್ರ ಇಂದಿಗೂ ನಿಘಂಟು ಶಾಸ್ತ್ರದ ಬಗ್ಗೆ ಅಧ್ಯಯನ ಮಾಡುವವರು ಆ ಕೃತಿಯನ್ನು ಗಮನಿಸಬೇಕಾಗಿದೆ. ಹಸ್ತಪ್ರತಿ ಮತ್ತು ಗ್ರಂಥಸಂಪಾದನೆಯ ಸಾತತ್ಯವನ್ನು ಅವರು ಗುರುತಿಸಿದ್ದಾರೆ. ಗ್ರಂಥ ಸಂಪಾದನೆಯ ತಾತ್ವಿಕತೆ, ಪಾಠ ಪರಿಷ್ಕರಣ, ಗ್ರಂಥ ಸಂಪಾದನೆಗೆ ವಿದ್ವಾಂಸರ ಕೊಡುಗೆ, ಜಾಪನದ ಸಾಹಿತ್ಯ ಸಂಪಾದನೆ ಮುಂತಾದ ಅಂಶಗಳನ್ನು ಸಂಶೋಧನಾತ್ಮಕವಾಗಿ ವಿವರಿಸಿದ್ದಾರೆ. ಈ ನಿಟ್ಟಿನಲ್ಲಿ ಅವರ ಕನ್ನಡ ಗ್ರಂಥಸಂಪಾದನೆ ಚರಿತೆ ಮಹತ್ವದ ಕೃತಿಯಾಗಿದೆ. ಜಾನಪದ ಸಾಹಿತ್ಯದಲ್ಲಿ ಹುದುಗಿರುವ ದೇಶಿ ಬಂದಗಳ ಭಾಷಾ ಬಳಕೆಯ ಸಾಮಾಜಿಕ ಆಯಾಮದ ಶೋಧ ಅಂಗಡಿ ಅವರಿಗೆ ಮುಖ್ಯವಾಗಿದೆ. ಜನಪದ ಮಹಾಕಾವ್ಯಗಳು, ಸಣ್ಣಾಟ-ದೊಡ್ಡಾಟಗಳು, ಕೋಲು-ದೊಡ್ಡಳು ಮುಂತಾದ ಗೀತಾ ಪ್ರಕಾರಗಳ ಭಾಷೆಯ ಅರ್ಥದ ನೆಲೆಗಳನ್ನು ಕ್ರಮಬದ್ಧವಾಗಿ ವಿವರಿಸಿದ್ದಾರೆ. ಈ ನಿಟ್ಟಿನಲ್ಲಿ ಅವರ ಕನ್ನಡ ಜನಪದ ಸಾಹಿತ್ಯ ಮಹತ್ವದ ಕೃತಿಯಾಗಿದೆ. ಅದರಂತೆ ವಚನ ಸಾಹಿತ್ಯವನ್ನು ವೈಚಾರಿಕವಾಗಿ ವಿಶ್ಲೇಷಣೆ ಮಾಡಿದ ವಿದ್ವಾಂಸರಲ್ಲಿ ಡಾ.ಅಂಗಡಿ ಅವರು ಪ್ರಮುಖರು. ವಿಶೇಷವಾಗಿ ವಚನ ಸಾಹಿತ್ಯದ ಭಾಷೆ, ಛಂದಸ್ಸು, ಶೈಲಿ, ಅಲಂಕಾರ ಈ ಎಲ್ಲಾ ಅಂಶಗಳನ್ನು ಮೊಟ್ಟಮೊದಲ ಬಾರಿಗೆ ಅಭ್ಯಾಸ ಮಾಡಿದ ಕೀರ್ತಿ ಅಂಗಡಿ ಅವರಿಗೆ ಸಲ್ಲಬೇಕು. ಈ ನಿಟ್ಟಿನಲ್ಲಿ ಅವರ ಕನ್ನಡ ವಚನ ಅಧ್ಯಯನ ಎಂಬ ಕೃತಿಯನ್ನು ಗಮನಿಸಬೇಕಾಗಿದೆ. ಕನ್ನಡದ ಶ್ರೇಷ್ಠ ವಿದ್ವಾಂಸರಾದ ಡಾ.ಎಂ.ಚಿದಾನಂದ ಮೂರ್ತಿ ಅವರ ಕೃತಿಗಳನ್ನು ಸಮೀಕ್ಷೆ ಮಾಡಿದ ಎಂ.ಚಿದಾನಂದ ಮೂರ್ತಿ : ಕೃತಿ ಸಮೀಕ್ಷೆ ಮಹತ್ವದ ಕೃತಿಯಾಗಿದೆ. ಅದರಂತೆ ಶ್ರೇಷ್ಠ ವಿದ್ವಾಂಸರಾದ ಎಂ.ಚಿದಾನಂದ ಮೂರ್ತಿ, ಟಿ.ವಿ.ವೆಂಕಟಾಚಲಶಾಸ್ತ್ರೀ, ಎಂ.ಎಂ.ಕಲಬುರ್ಗಿ ಈ ಮೂರು ಜನ ವಿದ್ವಾಂಸರ ಸಾಹಿತ್ಯವನ್ನು ಆಧುನಿಕ ಕನ್ನಡ ಸಂಶೋಧನೆ ಎಂಬ ಕೃತಿಯಲ್ಲಿ ಅಭ್ಯಾಸ ಪೂರ್ಣವಾಗಿ ಚರ್ಚಿಸಿದ್ದಾರೆ. ಅದರಂತೆ ಕನ್ನಡ ನಾಡು, ನುಡಿ, ಸಂಸ್ಕೃತಿ ವಿಕಾಸ ಕ್ರಮವನ್ನು ಕುರಿತಂತೆ ಅವರ ಕರ್ನಾಟಕ ಶಾಸ್ತ್ರ ಮಹತ್ವದ ಕೃತಿಯಾಗಿದೆ.  

ಪ್ರಾಚೀನ ಕನ್ನಡ ಸಾಹಿತ್ಯದ ಕಡೆಗೆ ಓದುಗರನ್ನು ಸಜ್ಜುಗೊಳಿಸಬೇಕಾದರೆ ಹಾಗೂ ಅವರ ಅರಿವಿನ ಎಲ್ಲೆಯನ್ನು ವಿಸ್ತರಿಸಬೇಕಾದರೆ ಮುದ್ರಿತ ಪಾಠಗಳಲ್ಲಿರುವ ಕೊರತೆಗಳನ್ನು ಸರಿಪಡಿಸಿ ಮೂಲ ಲಯಕ್ಕೆ ದಕ್ಕೆಯಾಗದಂತೆ ಪದ್ಯಗಳನ್ನು ಅರ್ಥನುಗತವಾಗಿ ವಿಂಗಡಿಸಿ ಉಚಿತಕ್ಕೆ ತಕ್ಕಂತೆ ಟಿಪ್ಪಣಿಗಳನ್ನು ಸಿದ್ದಪಡಿಸಿದ ಸರಳ ಆವೃತಿಗಳು ತುಂಬಾ ಅಗತ್ಯವಾಗಿವೆ. ಅಷ್ಟೇ ಅಲ್ಲದೇ ಮೂಲ ಪಾಠಗಳ ಅಧ್ಯಯನಕ್ಕೆ ಸರಳ ಆವೃತಿಗಳು ಪ್ರೇರಣೆಕೊಡುತ್ತವೆ. ಇದರಿಂದ ಕನ್ನಡ ಸಾಹಿತ್ಯ ಪರಂಪರೆಯನ್ನು ಬಿಡದೆ ಗೌರವಿಸುತ್ತಾ, ವಿಮರ್ಶಿಸುತ್ತಾ, ಹೊಸತನವನ್ನು ಅಳವಡಿಸಿ ಹಳಗನ್ನಡ ಪಠ್ಯಗಳು ಪುರ್ನ ಸೃಷ್ಟಿಯಾಗಬೇಕಾಗಿವೆ. ಇದರಿಂದ ಗ್ರಂಥ ಸಂಪಾದನೆಯನ್ನು ಕೂಡಾ ವೈಚಾರಿಕ ಹಾಗೂ ಸೃಜನಶೀಲ ಮಾದರಿಯನ್ನಾಗಿ ರೂಪಿಸಬೇಕಾಗಿದೆ. ಡಾ.ಅಂಗಡಿ ಕಳೆದ 30 ವರ್ಷಗಳಿಂದ ಕನ್ನಡಿಗರ ಓದಿನ ಭಾಗವಾದ ಮಹತ್ವದ ಪ್ರಾಚೀನ ಪಠ್ಯಗಳನ್ನು ಸರಳ ಆವೃತ್ತಿಯನ್ನಾಗಿ ವಿನ್ಯಾಸಗೊಳಿಸಿದ್ದಾರೆ. ಅವುಗಳಲ್ಲಿ 10 ಪ್ರಾಚೀನ ಕೃತಿಗಳ ಸರಳ ಆವೃತ್ತಿಗಳು ಈ ಸಂಪುಟದಲ್ಲಿ ಸಂಕಲಿಸಿದ್ದಾರೆ. (ಯಶೋಧರ ಚರಿತ್ರೆ, ಧರ್ಮಾಮೃತ ಸಂಗ್ರಹ, ಬಸವದೇವರಾಜ ರಗಳೆ, ನಂಬಿಯಣ್ಣನ ರಗಳೆ, ಗಿರಿಜಾಕಲ್ಯಾಣ ಸಂಗ್ರಹ, ಸಿದ್ಧರಾಮ ಚರಿತೆ, ಕಬ್ಬಿಗರ ಕಾವ, ಹದಿಬದೆಯ ಧರ್ಮ, ಶ್ರೀರಾಮಶ್ವಮೇದ ಸಂಗ್ರಹ). ಅಂಗಡಿಯವರ ಈ ಸರಳ ಆವೃತ್ತಿಗಳು ವಿದ್ಯಾರ್ಥಿಗಳಿಗೆ ಮತ್ತು ಅದೇ ತಾನೇ ಶಿಕ್ಷಕ ವೃತ್ತಿ ಸ್ವೀಕರಿಸಿದ ಉಪಾಧ್ಯಾಯರಿಗೆ ತುಂಬಾ ನೆರವಾಗುತ್ತವೆ. ಅವರ ಸರಳ ಆವೃತ್ತಿಗಳು ಕನ್ನಡ ಸರಳ ಆವೃತ್ತಿ ಸಂಪುಟದಲ್ಲಿ ಸಂಕಲಿತವಾಗಿವೆ. ಒಟ್ಟಿನಲ್ಲಿ ಅಂಗಡಿಯವರ ಬರಹಗಳು ಅನೇಕ ಹೊಸ ಒಳನೋಟಗಳಿಂದ ಕೂಡಿವೆ. 

ಡಾ.ಎಸ್‌.ಎಸ್‌.ಅಂಗಡಿಯವರು ಸಾಹಿತ್ಯ ಮತ್ತು ಸಂಶೋಧನಾ ಕ್ಷೇತ್ರದಲ್ಲಿಯ ಗಣನೀಯ ಸಾಧನೆಯನ್ನು ಪರಿಗಣಿಸಿ, ನಾಡಿ ಸಂಘ-ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರಗಳನ್ನು ನೀಡಿ ಸನ್ಮಾನಿಸಿವೆ. ಮೂಜಗಂ ಪ್ರಶಸ್ತಿ, ಲಿಂಗರಾಜ ಪ್ರಶಸ್ತಿ, ಕಲಬುರಗಿ ವಿಶ್ವವಿದ್ಯಾಲಯ ರಾಜ್ಯೋತ್ಸವ ಪ್ರಶಸ್ತಿ, ಶಿವರಾತ್ರೀಶ್ವರ ಪ್ರಶಸ್ತಿ, ಸ್ನೇಹಸೇತು ಪ್ರಶಸ್ತಿ, ಬೆಳುವಲ ಪ್ರಶಸ್ತಿ, ಸಪ್ನ ಬುಕ್ ಹೌಸ್ ಗೌರವ ಪ್ರಶಸ್ತಿ, ರಮಣಶ್ರೀ ಶರಣ ಸಾಹಿತ್ಯ ಪ್ರಶಸ್ತಿ, ಮಲ್ಲೇಪುರಂ ಪ್ರಶಸ್ತಿ, ಕನ್ನಡ ಕೌಸ್ತುಭ ಪ್ರಶಸ್ತಿ, ಎಸ್‌.ವಿದ್ಯಾಶಂಕರ ಪುರಸ್ಕಾರ ಹೀಗೆ ಹತ್ತು ಹಲವು ಪ್ರಶಸ್ತಿ-ಪುರಸ್ಕಾರಗಳಿಗೆ ಅವರು ಭಾಜನರಾಗಿದ್ದಾರೆ. ಡಾ. ಎಸ್‌.ಎಸ್‌.ಅಂಗಡಿ ಅವರು ಕಳೆದ 30 ವರ್ಷಗಳಿಂದ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಕ್ಷೇತ್ರದಲ್ಲಿ ಮೌಲಿಕವಾದ ಕೆಲಸ ಮಾಡಿದ್ದಾರೆ. ಭಾಷಾಶಾಸ್ತ್ರದಲ್ಲಿ ಮಾಡಿದ ಕಾರ್ಯ ಅಪೂರ್ವವಾಗಿದೆ. ಸಂಪರ್ಕ:9945598224. 

- * * * -