ಲಿಂಗಾಯತ ಮಹಿಳಾ ಸಮಾಜದ ಸಂಕ್ರಾಂತಿ ಸಂಭ್ರಮ ವಿದ್ಯಾ ಗೌಡರ
ಬೆಳಗಾವಿ: ಸುಮಾ ತಟವಟಿ ಅವರ ತವರೂರು ಹುಕ್ಕೇರಿ ತಾಲೂಕಿನ ಗೌಂಡವಾಡ ಗ್ರಾಮದ ಹಿರಣ್ಯಕೇಶಿ ನದಿಯ ತಟದಲ್ಲಿ ವಿಜೃಂಭಣೆಯಿಂದ ಸಂಕ್ರಾಂತಿ ಆಚರಿಸಲಾಯಿತು.
ಮೊದಲಿಗೆ ನೂರೈವತ್ತರಿಂದ ಇನ್ನೂರು ಮಹಿಳೆಯರು ಬೆಳಗಾವಿಯಿಂದ ಹೊಳೆಮ್ಮಾ ದೇವಿಗೆ ಹೋಗಿ ಪೂಜೆ ಭಜನೆ ಮಾಡಿ ಅಲ್ಲಿಂದ ಎತ್ತಿನ ಬಂಡಿ ಹಾಗೂ ಟ್ರ್ಯಾಕ್ಟರ್‌ಗಳಲ್ಲಿ ಹೊಲದಲ್ಲಿ ಪೆಂಡಾಲ ಹಾಕಿ ಕಬ್ಬಿನ ಜೆಲ್ಲೆಯ ರಂಗೋಲಿ ಹಾಕಿ ಬುಟ್ಟಿ, ಗಡಿಗೆ, ಹಾರಿ, ಕಾರುಕ್ಲ, ಬೀಸುವ ಕಲ್ಲ, ಶ್ಯಾವಿಗಿ ಮಣಿ ಹೀಗೆ ಹತ್ತಾರು ಹಳ್ಳಿ ಮನೆಯ ಸಾಮಾನಿನೊಂದಿಗೆ ಸಿಂಗರಿಸಿದ ಸ್ಥಳಕ್ಕೆ ಹೋದೆವು.
ಲಿಂಗಾಯತ ಸಮಾಜದ ಅಧ್ಯಕ್ಷೆ ಸುನೀತಾ ಪಾಟೀಲ ಕಾರ್ಯದರ್ಶ ಶಾರದಾ ಪಾಟೀಲ ಹಾಗೂ ಸಹಕಾರ್ಯದರ್ಶಿ ವಿದ್ಯಾ ಗೌಡರ, ನಂದಾ ಲೋಕನ್ನವರ ಇವರ ನೇತೃತ್ವದಲ್ಲಿ ಎಲ್ಲರೂ ಉತ್ಸಾಹದಿಂದ ಬಾಲ್ಯದ ಆಟಗಳನ್ನು ಹಾಡಿ ಆಡಿ ಜೋಕಾಳಿ ಜೀಕಿ, ಚಿಗಳಿ ತಿಂದು, ಭೂರಿ ಭೋಜನ ಮಾಡಿ, ರೀಲ್ಸ್ ಮಾಡಿ ಕುಣಿದು ಕುಪ್ಪಳಿಸಿದರು. ಅತ್ಯಂತ ಪ್ರೀತಿಯಿಂದ ಅತ್ಯಂತ ಪ್ರೀತಿಯಿಂದ ಆದರಾತಿಥ್ಯ ನೀಡಿದ ಪಾಟೀಲ ಕುಟುಂಬದವರೂ ಎಲ್ಲರೊಂದಿಗೆ ಸಂತೋಷ ಹಂಚಿಕೊಂಡರು.
ಪ್ರಯಾಗ ರಾಜದಿಂದ ತಂದಂತ ಗಂಗೆಯನ್ನು ಹಿರಣ್ಯಕೇಶಿ ನದಿ ನೀರಿನೊಂದಿಗೆ ಸಂಗಮಿಸಿಪೂಜಿಸಿ ಕುಂಭಮೇಳದ ಸಂಭ್ರಮವನ್ನು ಇಲ್ಲೇ ಆಚರಿಸಲಾಯಿತು. ಆ ದೈವಿಕತೆಯನ್ನು ಅನುಭವಿಸಿ ಕೃತಾರ್ಥರಾದರು.
ಸಮಾಜದ ಹಿರಿಯರಾದ ಶೈಲಜಾ ಭಿಂಗೆ, ಜಯಶೀಲಾ ಬ್ಯಾಕೋಡ, ರತ್ನಪ್ರಭಾ ಬೆಲ್ಲದ, ಅನುರಾಧಾ ಬಾಗಿ, ಜ್ಯೋತಿ ಬದಾಮಿ, ಸುರೇಖಾ ಮಾನ್ವಿ, ಸುಮಂಗಲಾ ಕಾದ್ರೋಳ್ಳಿ, ಭಾರತಿ ಮಠದ, ಮುಂತಾದವರು ಭಾಗಿಯಾಗಿ ಸಂಭ್ರಮಿಸಿದರು.ಕಾರ್ಯಕ್ರಮದಲ್ಲಿ ಸಂಕ್ರಾಂತಿ ಉಡಿ ಕೊಟ್ಟು ಎಲ್ಲ ಮುತೈದೆಯರು ಒಗಟಿನೊಂದಿಗೆ ಪತಿಯ ಹೆಸರು ಹೇಳಿಹಳೆಯ ದಿನಗಳನ್ನು ಅನುಭವಿಸಿ ಮರಳಿ ಜೀವಿಸಿದೆವು ಅನ್ನುವ ಹಾಗೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಶರಣು ಶುಭೋದಯ
ಇದ್ದರೆ ಹಿಂಗಿರಬೇಕ
ಒಗ್ಗಟ್ಟಿನಲ್ಲಿ ಬಲವಿದೆಯಂತ ತೋರಿಸುವಂಗಿರ ಬೇಕ.ಸುವ್ವಿ ಸುವ್ವಕ್ಕ ಸುವ್ವಾಲಾಲಿ....
ಲಿಂಗಾಯತ ಮಹಿಳಾ ಸಮಾಜ
ಅಂದ್ರಾ....
ಸೇವಾ ಮಾಡಾಕ
ನಾ ಮುಂದು ತಾ ಮುಂದು ದೌಡಾಯಿಸಿ
ಬರುವಂಗ.....
ಯವ್ವಾ ನಮ್ಮ
ಅಧ್ಯಕ್ಷ ಸುನೀತಾ
ಬಾಯಿ.... ಮೆತ್ತಾಗ ನಡೆದು ಬಂದ್ರಾ..
ಸೊಂಟಕ್ಕೆ ಸೆರಗಾ ಸಿಕ್ಕಿಸಿಕೊಂಡ....
ಮೆಲ್ಲಾಗ ಮಾತಾಡಿ
ಅಲ್ಲಾಡಿಸಿಕೋಂತ
ಮಲ್ಲಿಗೆ ಜಡಿ
ಕಾರ್ಯದರ್ಶಿ
ಶಾರಕ್ಕಾ....
ನಾ ಇರೋದಾ ಹಿಂಗೇ ನೋಡ್ರಿ ...ನಾವು ಮಾಡಾವ್ರಾ....ಕುಣುಕ್ಕೋಂತ ಕುಣಸವ್ರಾ...
ಡೌಲ್ ರಾಣಿ ವಿದ್ಯಕ್ಕಾ...
ಸುವ್ವಿ ಸುವ್ವಕ್ಕ ಸುವ್ವಾಲಾಲಿ.....
ಶಾಂತ ನಗುಮುಖದ ಸುಮಕ್ಕ... ಹೇ
ಸುಮಕ್ಕ ತಟಪಟಿ...
ಏನವ್ವಾ ನಿನ್ನ ಕಟಪಟಿ.....
ತವರೆಲ್ಲಾ ತಗ್ಗಿ ಬಗ್ಗಿ ನಿಂತೈತಾ...ತಂಗೆವ್ವಾನ
ಬಳಗಾಕ್ಕೆಲ್ಲಾ.....ನದಿ ದಂಡಿ ಮ್ಯಾಗ ಚಪ್ಪಾರಾ....
ಜಾನಪದ ಸೊಗಡಿನ
ಕಬ್ಬಿನಾ ಗೋಪುರಾ.....
ಸವಿ ಸವಿ ಮಾತಿನಾ ಪ್ರೀತಿಯ ಬೋರಿ ಬೋಜಾನಾ...
ಚಿಕ್ಕಡಿ ಗಾಡಿ ಸವಾರಿ ಮಾಡಾಕ...
ತಂಗಾಳಿ
ಜೋಕಾಲಿ ಜೀಕಾಕ ,ಪತಂಗಾ
ಹಾರಿಸಾಕ ...
ಸುವ್ವಿ ಸುವ್ವಕ್ಕ ಸುವ್ವಾಲಾಲಿ.....
ತೋಪು ಸೆರಗೀನಾ
ಸೀರೀ ಸರದಾರಿಣಿಯರು...ಗೌಡಾರ,(ವಿದ್ಯಾ ಸವದಿ) ಬೆನ್ನತ್ತಿ..,ನಾಚಿ ನೀರಾಗ್ಯಾರ...
ಲಂಗಾ ದಾವಣೀಯಾ
ಸುಂದರಿಯರಾ
ಸರಸರಾ......
ಕೃಷ್ಣನಾ ಸುತ್ತಾ ಮುತ್ತಾ
ಸರಸವಾಡ್ಯಾರಾ...
ಹಾಡಿ ಪಾಡಿ ....
ನಲಿದಾಡ್ಯಾರಾ...
ಸುವ್ವಿ ಸುವ್ವಕ್ಕ ಸುವ್ವಾಲಾಲಿ.....
ಕುಂಬ ಮೇಳದಾ ಗಂಗಿ ಸರಸ್ವತಿ ಯಮುನಾಳೂ
ಹರಿದು ಬಂದಾಳ ಜುಳುಜುಳು
ಹಿರಣ್ಯ ಕೇಶಿಯಾ
ಸಂಗಾಮವಾಗಿ ಪೂಜೆಗೊಂಡಾಳ ....
ಭಕ್ತಿ ಭಾವಾದಾ ಸಿಂಚನಾ.....
ಯಾರಿಗುಂಟು ಯಾರಿಗಿಲ್ಲ ಈ ಸಂಕ್ರಾಂತಿ ಸಂಕ್ರಮಣದ ಸಂಭ್ರಮ.... ಸುವ್ವಿ ಸುವ್ವಕ್ಕ ಸುವ್ವಾಲಾಲಿ....
ಎಲ್ಲರೂ ಮಣ್ಣಿನ ಸೊಗಡೀಗೆ ಸೆರಗೊಡ್ಡಿ
ಬೇಡೋಣ...ಗೊಡವಾಡ ,ತಟಪಟ್ಟಿ ಕುಟುಂಬ
ತಣ್ಣಗಿರಲೆಂದು ಹರಿಸೋಣ.....
ಸುನಿತಕ್ಕನ ಸೆರಗು ಹಿಡಿದು
ತಂಗೆವ್ವಾ ಶಾರಕ್ಕ ವಿದ್ಯಕ್ಕ..
ನಿಮ್ಮ ಬಳಗಾದವರ ಹೊಟ್ಟೆ ತಣ್ಣಗಿರಲೆಂದು ಹರಿಸೋಣಾ....
(ಕಮಿಟಿ)
ಸುವ್ವಿ ಸುವ್ವಕ್ಕ ಸುವ್ವಾಲಾಲಿ.
ಜ್ಯೋತಿ ಬದಾಮಿ
ಅವರು ತಾವು ಆಚರಿಸಿದ ಸಂಕ್ರಾತಿ ಸಂಭ್ರವನ್ನೆಲ್ಲ ತಮ್ಮ ಕವಿತೆಯಲ್ಲಿ ಇಳಿಸಿ ಸುಂದರವಾಗಿ ಸ್ಥಳದಲ್ಲೇ ರಚಿಸಿ ಹಾಡಿದ್ದು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತಂದಿತು.
ಸುರೇಖಾ ದೇಸಾಯಿ ಹಾಗೂ ಇನ್ನಿತರರು ಸೇರಿ ಗಡಿಗೆ ವ್ಯಾಪಾರ ಮಾಡಿದ್ದು ಮನರಂಜಿಸಿತು. ಒಟ್ಟಾರೆ ಎಷ್ಟೇ ಅಧುನಿಕತೆ ಮುಂದುವರೆದರೂ ನಮ್ಮ ಹಳ್ಳಿಯ ಸಂಪ್ರದಾಯ ಸೊಗಡು ಸಂಭ್ರಮವೇ ಮನಸ್ಸಿಗೆ ಮುದ ನೀಡುವುದು. ಮನಸ್ಸಿಗೆ ಉಲ್ಲಾಸ ತರುವುದು. ಯಾವ ಲಿಂಗ, ವಯಸ್ಸು ಯಾವುದೇ ಭೇದಭಾವವಿಲ್ಲದೆ ಎಲ್ಲವನ್ನೂ ಮರೆಸಿ ನಕ್ಕು ನಲಿಸುವುದು ನಮ್ಮ ಹಳ್ಳಿಯ ಸಂಪ್ರದಾಯಗಳೇ. ಎಲ್ಲ ಹಳ್ಳಿ ಸೊಗಡನ್ನೇ ಈ ಸಂಕ್ರಾಂತಿ ಕಾರ್ಯಕ್ರಮವು ಬಿಂಬಿಸಿ ಬಹಳ ಸ್ವಾರಸ್ಯಕರವಾಗಿ ಆಚರಿಸಲ್ಪಟ್ಟಿತು. ಎತ್ತಿನ ಬಂಡಿ ಪಯಣ, ಭೂಮಿ ತಾಯಿ ಮಡಿಲಲ್ಲಿ ಮಕ್ಕಳಾಗಿ ಕುಣಿದು ನಲಿದು ಹಾಡಿ ಆಡಿ ಮೈಮರೆತು ಸಂಭ್ರಮಿಸಿದ್ದು, ಅಧುನಿಕತೆಯಲ್ಲಿ ನಮ್ಮ ಸಂಪ್ರದಾಯ ಪರಂಪರೆ ಎಲ್ಲವೂ ಕೊಚ್ಚಿ ಹೋಗಿ ಇಂದು ಮರೆಯಾಗುತ್ತಿದ್ದರೂ ಇಂಥ ಕಾರ್ಯಕ್ರಮಗಳಲ್ಲಿ ಇನ್ನೂ ಜೀವಂತವಾಗುಳಿದು ಮುಂದಿನ ಪೀಳಿಗೆಗೆ ಉಡುಗೊರೆಯಾಗಿ ಕೊಡಲಿದೆ.
ಬಾಕ್ಸ್
ಇನ್ನು ಮನೆಯ ಗಂಡು ಮಕ್ಕಳು ಎರಡು ಚಕ್ಕಡಿ, ನಾಲ್ಕು ಟ್ರ್ಯಾಕ್ಟರ್ ಸಿದ್ದ ಮಾಡಿ ಎತ್ತಿ ಕೊಂಬಿಗೆ ರಿಬ್ಬನ್ ಕಟ್ಟಿ ಗುಲಾಲ ಹಾಕಿ ನಮ್ಮನ್ನೆಲ್ಲಾ ಹೊಳಿ ದಂಡಿಗೆ ಕರಕೊಂಡು ಹೊರಟರು. ಒಂದೇ ಮನೆಯವರು ಇಡಿ ಊರಿನ ಜಾತ್ರೆ ಮಾಡತಾರು ಅನಬೇಕು ಹಂಗ ಅನುಭವ ಆಯಿತು. ನಾವೆಲ್ಲ ನಮ್ಮ ವಯಸ್ಸು ಮರೆತು ಚಕ್ಕಡಿ ಹೊಡದಾಂಗ ಟ್ರ್ಯಾಕ್ಟರ ಹೊಡೆದಾಂಗ ಪೋಜು ಕೊಟ್ಟು ಫೋಟೋ ತಕ್ಕೊಂಡಿವಿ. ರಸ್ತೆ ಮಧ್ಯ ನಿಂತು ರೀಲ್ಸ್ ಮಾಡಿದಿವಿ, ಎಂದೂ ಕೇಳಿರದ ಟ್ರ್ಯಾಕ್ಟರ ಹಾಡಿಗೆ ಹೆಜ್ಜೆ ಹಾಕಿ ನಕ್ಕವಿ ನಲಿದಿವಿ.