13ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಲಿಂಗಾರೆಡ್ಡಿ ಆಯ್ಕೆ
ಗಂಗಾವತಿ 11: ಗಂಗಾವತಿ ನಗರದಲ್ಲಿ ಇದೇ ಮಾರ್ಚ್ 27ಮತ್ತು 28ರಂದು ಆಯೋಜಿಸಲಾಗಿರುವ ಕೊಪ್ಪಳ ಜಿಲ್ಲಾ 13ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗಂಗಾವತಿಯ ಹಿರಿಯ ಸಾಹಿತಿ ಲಿಂಗಾರೆಡ್ಡಿ ಆಲೂರು ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್ ತಿಳಿಸಿದ್ದಾರೆ.ಈ ಬಗ್ಗೆ ಪ್ರಕಟಣೆ ನೀಡಿ, ಕೊಪ್ಪಳ ನಗರದ ಗಾಣಿಗೇರ ಸಮುದಾಯ ಭವನದಲ್ಲಿ ಸೋಮವಾರ ಸಂಜೆ ನಡೆದ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಈ ಬಗ್ಗೆ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಸಾಹಿತ್ಯಕ, ಸಾಂಸ್ಕೃತಿಕ ವಲಯದಲ್ಲಿ ಸೇವೆ ಸಲ್ಲಿಸಿದ ಹಲವರನ್ನು ಸಮ್ಮೇಳನ ಅಧ್ಯಕ್ಷರನ್ನಾಗಿ ಮಾಡುವಂತೆ ಶಿಫಾರಸ್ಸು ಬಂದವು. ಆದರೆ ಸುಧೀರ್ಘ ಚರ್ಚೆ ಬಳಿಕ ಅಂತಿಮವಾಗಿ ಲಿಂಗಾರೆಡ್ಡಿ ಆಲೂರು ಅವರನ್ನು ಸರ್ವಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು ಒಪ್ಪಿಗೆ ಸೂಚಿದರು ಎಂದು ಶರಣೇಗೌಡ ತಿಳಿಸಿದ್ದಾರೆ.
ಸಮ್ಮೇಳನಕ್ಕೆ ಸಕಲ ಸಿದ್ಧತೆ:
ಗಂಗಾವತಿ ನಗರದಲ್ಲಿ ಮಾರ್ಚ್ 27 ಮತ್ತು 28ರಂದು ಹಮ್ಮಿಕೊಂಡಿರುವ 13ನೇ ಕೊಪ್ಪಳ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಿದ್ಧತೆಗಳು ಈಗಾಗಲೆ ಕೈಗೊಂಡಿದ್ದು, ವೇದಿಕೆ ನಿರ್ಮಾಣ, ಸಮಿತಿಗಳ ರಚನೆ, ಆಹ್ವಾನ ಪತ್ರಿಕೆ, ಅತಿಥಿಗಳನ್ನು ಅಂತಿಮಗೊಳಿಸುವ ಚಟುವಟಿಕೆ ನಡೆದಿವೆ. ಸರ್ಕಾರಿ ಜೂನಿಯರ್ ಕಾಲೇಜಿನ ಮೈದಾನದಲ್ಲಿಯೇ ಸಮ್ಮೇಳನ ಆಯೋಜಿಸಲು ತೀರ್ಮಾನಿಸಲಾಗಿದ್ದು, ವಿಶಾಲ ವೇದಿಕೆ ನಿರ್ಮಾಣ, ಸಾರ್ವಜನಿಕರಿಗೆ ಐದು ಸಾವಿರ ಆಸನದ ವ್ಯವಸ್ಥೆ ಮಾಡಲಾಗುವುದು. ಸಮ್ಮೇಳನದ ಎರಡೂ ದಿನವೂ ಅತಿಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. 13ನೇ ಸಮ್ಮೇಳನದ ಸ್ವಾಗತಿ ಸಮಿತಿ ಅಧ್ಯಕ್ಷ ಹಾಗೂ ಗಂಗಾವತಿ ಶಾಸಕ ಜಿ. ಜನಾರ್ಧನರೆಡ್ಡಿ ವಿಧಾನಸಭೆಯ ಅಧಿವೇಷನದಲ್ಲಿ ಭಾಗಿಯಾಗಿದ್ದು, ಬೆಂಗಳೂರಿನಿಂದ ಹಿಂತಿರುಗಿದ ತಕ್ಷಣ ಸಮ್ಮೇಳನದ ಸರ್ವಾಧ್ಯಕ್ಷರಿಗೆ ಪರಿಷತ್ತಿನಿಂದ ಅಧಿಕೃತ ಆಹ್ವಾನ ನೀಡಲಾಗುವುದು ಎಂದು ಶರಣೇಗೌಡ ತಿಳಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿದ್ದು, ಕನ್ನಡ ತಾಯಿ ಭುವನೇಶ್ವರಿಯ ಕಾರ್ಯಕ್ರಮದ ನುಡಿ ಜಾತ್ರೆಗೆ ಎಲ್ಲಾ ಹಾಲಿ-ಮಾಜಿ ಚುನಾಯಿತ ಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ವೃತ್ತಿಪರರು, ಸಾರ್ವಜನಿಕರು ಆಹ್ವಾನಕ್ಕೆ ಕಾಯದೇ ಮುಕ್ತವಾಗಿ ಬಂದು ಭಾಗವಹಿಸಿ ಸಮ್ಮೇಳನದ ಯಶಸ್ಸುಗೊಳಿಸುವಂತೆ ಪರಿಷತ್ತಿನ ಪರವಾಗಿ ಜಿಲ್ಲಾ ಕಸಾಪ ಅಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್ ಮನವಿ ಮಾಡಿದ್ದಾರೆ.