ಲಿಂ. ಶಿವಕುಮಾರಶ್ರೀಗಳು ಭಕ್ತ ಜನಮಾನಸದಲ್ಲಿ ನೆಲೆನಿಂತಿದ್ದಾರೆ: ವಚನಾನಂದ ಶ್ರೀಗಳು

ರಾಣೇಬೆನ್ನೂರು22:  ಭಾರತ ಭೂಮಿ ಅತ್ಯಂತ ಪವಿತ್ರ ಮತ್ತು ಪುಣ್ಯ ಭೂಮಿಯಾಗಿದೆ.  ಇಂತಹ ನೆಲದಲ್ಲಿ ತುಮಕೂರು ಪವಿತ್ರ ಕ್ಷೇತ್ರದ ಸಿದ್ಧಗಂಗಾ ಮಠದ ಲಿಂ. ಶಿವಕುಮಾರ ಮಹಾಸ್ವಾಮಿಗಳವರು ಅನ್ನ, ವಸ್ತ್ರ, ಶಿಕ್ಷಣ ಜೊತೆಗೆ ಸಂಸ್ಕಾರ ಕೊಡುವಂತಹ ಕಾರ್ಯಕ್ರಮದ ಮೂಲಕ ಸಮಗ್ರ ನಾಡಿನ ಮತ್ತು ದೇಶದ ಭಕ್ತ ಜನಮಾನಸದಲ್ಲಿ ನೆಲೆನಿಂತಿದ್ದಾರೆ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಜಗದ್ಗುರು ವಚನಾನಂದ ಮಹಾಸ್ವಾಮಿಗಳು ಹೇಳಿದರು. 

       ಅವರು ಮಂಗಳವಾರ ಇಲ್ಲಿನ ಕೊಟ್ಟೂರೇಶ್ವರ ನಗರದ ಕೊಟ್ಟೂರೇಶ್ವರ ದೇವಸ್ಥಾನ ಆವರಣದಲ್ಲಿ ಆಯೋಜಿಸಲಾಗಿದ್ದ, ಲಿಂ. ಶಿವಕುಮಾರ ಮಹಾಸ್ವಾಮಿಗಳವರ ಪ್ರಥಮ ವರ್ಷದ ಪುಣ್ಯಾರಾಧನಾ ಸಮಾರಂಭದ ದಿವ್ಯಸಾನಿಧ್ಯವಹಿಸಿ ಮಾತನಾಡಿದರು. 

     ಶರಣರ ಮಹಿಮೆ ಮರಣದಲ್ಲಿ ಕಾಣಾ ಎನ್ನುವ ವಾಣಿಯಂತೆ ಲಿಂ. ಶಿವಕುಮಾರ ಶ್ರೀಗಳು ಇಂದು ಈ ನೆಲದಲ್ಲಿ ಭೌತಿಕವಾಗಿ ಇಲ್ಲದೇ ಹೋದರೂ ಸಹ ಅವರು ತಮ್ಮ ಜೀವಿತದ ಕಾಲದಲ್ಲಿ ಭಕ್ತರಿಗಾಗಿ ಮತ್ತು ವಿದ್ಯಾರ್ಥಿಗಳ ಭವಿಷ್ಯತ್ತಿಗಾಗಿ ಮಾಡಿದ ಸೇವೆ, ತ್ಯಾಗ ಯಾರೂ ಮರೆಯಲು ಸಾಧ್ಯವಾಗಲಾರದು ಎಂದ ಅವರು ಸಮಾಜಮುಖಿ ಕಾರ್ಯವು ದೂರದೃಷ್ಠಿ ಹೊಂದಿರುವ ಶರಣರಿಂದ ಮಾತ್ರ ಸಾಧ್ಯವಾಗುವುದು ಅಂತಹ ಸಾಧನೆ ಮಾಡಿದ ಮಹಾನ್ ಪುಣ್ಯ ಪುರುಷರು ಕಂಡಿದ್ದು ನಮ್ಮೆಲ್ಲರ ಸೌಭಾಗ್ಯ ಎಂದರು.

       ದಿವ್ಯ ನೇತೃತ್ವದಲ್ಲಿದ್ದ, ಶನೈಶ್ಚರ ಮಂದಿರದ ಶ್ರೀ ಶಿವಯೋಗಿ ಶಿವಾಚಾರ್ಯರು ಮಾತನಾಡಿ ಲಿಂ. ಶಿವಕುಮಾರ ಶ್ರೀಗಳು ಈ ನಾಡಿನ ಮತ್ತು ದೇಶದ ಸಮಗ್ರ ಶರಣ ಪರಂಪರೆಗೆ ಮಾದರಿಯಾದವರು ಯಾವುದೇ ಆಸೆ, ಆಕಾಂಕ್ಷೆ ಬಯಸದೇ ಸಮಾಜ ಮತ್ತು ಭಕ್ತರು ಎಲ್ಲರೂ ನಮ್ಮವರೇ ಎನ್ನುವ ನಿಷ್ಠಲ ಮನಸ್ಸಿನಿಂದ ಸೇವೆ ಮಾಡಿದ ಮಾಹನ್ ಸಂತರಾಗಿದ್ದರು.  ಅಂತಹ ಶರಣರ ಜೀವನದ ಬದುಕನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳುವ ಮೂಲಕ ಮತ್ತಷ್ಟು ಕಾಯಕಯೋಗಿಗಳಾಗಿ ಸಾಗಬೇಕಾದ ಅಗತ್ಯವಿದೆ ಎಂದರು.

      ವೇದಿಕೆಯಲ್ಲಿ ಶ್ರೀ ನಂಜುಡೇಶ್ವರ ಮಹಾಸ್ವಾಮಿಗಳು,  ಪ್ರಭುಸ್ವಾಮಿ ಕರ್ಜಗಿಮಠ, ಬಾಬಣ್ಣ ಕೊಪ್ಪದ, ಪರಮೇಶಣ್ಣ ಗೂಳಣ್ಣನವರ, ಪ್ರಭಾವತಿ ತಿಳವಳ್ಳಿ, ಸಿದ್ಧಣ್ಣ ಚಿಕ್ಕಬಿದರಿ, ಮಲ್ಲಣ್ಣ ಅಂಗಡಿ, ಚಂದ್ರಣ್ಣ ರಮಾಳದ, ಅಶೋಕ ರೊಡ್ಡನವರ, ನಾಗಪ್ಪ ರಮಾಳದ, ಮಹಾಲಿಂಗಪ್ಪ ಸಾಲಿಮನಿ, ಮಂಜಣ್ಣ ಬೇತೂರ, ಮಂಜಣ್ಣ ರಮಾಳದ, ಮಂಜುನಾಥ ಚಂದನಕೇರಿ, ಅನಿಲ್ ಸಿದ್ಧಾಳಿ, ನಾಗರಾಜ ಮಜ್ಜಗಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.