ಮನುಷ್ಯನ ಜೀವನ ತನ್ನಿಷ್ಟದಂತೆ ನಡೆಯಬೇಕು ಎಂದು ಬಯಸುವವನು. ಹಾಗೆ ನಡೆಯಲಿಲ್ಲ ಎಂದಾಗ ತನ್ನಿಂದ ಆಗುವ ತಪ್ಪನ್ನು ಒಪ್ಪಿಕೊಳ್ಳುವ ಬದಲು ಆದದ್ದೆಲ್ಲ ಬೇರೆಯವರಿಂದ ಎನ್ನುವದು ಅಥವಾ ಯಾವುದೂ ಸರಿಯಿಲ್ಲ ಎಂದು ತಕರಾರು ಮಾಡುವುದು ಇದ್ದೇ ಇದೆ. ಗಂಡ ಹೆಂಡತಿಯ ಮೇಲೆ, ಹೆಂಡತಿ ಗಂಡನ ಮೇಲೆ, ವಿದ್ಯಾರ್ಥಿಗಳು ಶಿಕ್ಷಕರ ಮೇಲೆ, ಶಿಕ್ಷಕರು ತಮ್ಮ ಮೇಲಿನ ಅಧಿಕಾರಿಗಳ ಮೇಲೆ, ಸಮಾಜ ವ್ಯವಸ್ಥೆಯ ಮೇಲೆ, ವ್ಯವಸ್ಥೆ ಮಾಡುವವರು ಸಮಾಜ ಸಹಕರಿಸಲಾರದು ಎನ್ನುವ ತಕರಾರು ಹೋರಿಸುತ್ತಲೇ ಇರುತ್ತಾರೆ. ಈ ತಕರಾರಿನ ಪಟ್ಟಿ ಬರೆಯುತ್ತ ಕುಳಿತರೆ ಸಾವಿರ ಪುಟಗಳು ಸಾಕಾಗುವುದಿಲ್ಲ. ದಿನಕ್ಕೊಂದು ಘಳಿಗೆಗೊಂದು ತಕರಾರು ಬಂದಿರುತ್ತದೆ. ಕೆಲವು ತಕರಾರಿಗೆ ಕಾರಣ ಇರುತ್ತದೆ. ಕೆಲವಕ್ಕೆ ಕಾರಣ ಬೇಕಿಲ್ಲ. ನನ್ನ ಮಾತೊಂದು ಇರಲಿ, ತಾನು ಪ್ರಚಲಿತದಲ್ಲಿ ಇರಬೇಕು ಎನ್ನುವ ಕಾರಣಕ್ಕೆ ಸುಮ್ಮನೆ ಹೇಳುತ್ತಿರುವುದು. ಅದರಿಂದ ನಮ್ಮವರು, ನಮ್ಮ ಮಧ್ಯ ಇರುವವರಿಗೆ, ಸಮಾಜಕ್ಕೆ ಎಷ್ಟು ಹಿಂಸೆ ಆಗುತ್ತದೆ, ಕಿರಿಕಿರಿ ಆಗುತ್ತದೆ ಎನ್ನುವ ಸಣ್ಣ ಯೋಚನೆಯನ್ನು ಮಾಡದೆ ಮಾತಾಡುವುದು ನಿಜಕ್ಕೂ ಬೇಸರ ಮೂಡಿಸುತ್ತದೆ.
ಒಬ್ಬ ಯುವಕ ವಿದ್ಯೆ ಕಲಿಯುವುದು ಬಿಟ್ಟು ಬೇರೆಯ ಚಿಂತನೆಯಲ್ಲಿ ತೊಡಗಿದ. ತಾನು ಇನ್ನು ಎಷ್ಟು ವರ್ಷ ಬದುಕಬಹುದು? ತಾನು ಬದುಕಿ ಮಾಡಬೇಕಾಗಿದ್ದೇನು? ತಾನೇಕೆ ಸಮಾಜ ಸೇವೆ ಮಾಡಬೇಕು? ಮನುಷ್ಯನಾಗಿಯೇ ತಾನೇಕೆ ಹುಟ್ಟಿದೆ? ಹೀಗೆ ಪ್ರಶ್ನೆಗಳು ಹುಟ್ಟಿದವು. ಅವನು ಆ ಪ್ರಶ್ನೆಗಳನ್ನು ತನ್ನಲ್ಲಿಯೇ ಇಟ್ಟುಕೊಳ್ಳದೆ ಮೊದಲು ಹೆತ್ತವರಿಗೆ ಕೇಳಿದ. ಇವನ ಅಸಂಬದ್ಧ ಪ್ರಶ್ನೆಗೆ ತಾವು ಉತ್ತರ ಕೊಡಲಾರೆವು ಎಂದರು. ನಂತರ ಊರಿನಲ್ಲಿ ಸಿಕ್ಕಸಿಕ್ಕವರ ಬಳಿ ಕೇಳಿದ. ಊರವರು ಈ ಹುಡುಗನಿಗೆ ತಲೆ ಕೆಟ್ಟಿದೆ ಎಂದರು. ಆ ಯುವಕನಿಗೆ ಉತ್ತರ ಸಿಗಲಿಲ್ಲ. ಆಗ ಈ ಲೋಕದ ಜನರು ಸರಿ ಇಲ್ಲ ಎಂದು ಹೇಳುತ್ತ ತಿರುಗಿದ. ನೀವೆಲ್ಲ ಭೂಮಿಯ ಮೇಲೆ ಬದುಕಲು ಅಯೋಗ್ಯರು. ತನಗೆ ಹುಟ್ಟಿದ ಪ್ರಶ್ನೆ ನಿಮಗೆ ಹುಟ್ಟಿಲ್ಲ, ಅದರ ಉತ್ತರ ಗೊತ್ತಿಲ್ಲ ಎಂದರೆ ಮತ್ಯಾಕೆ ಬದುಕಿದ್ದೀರಿ ಎಂದೆಲ್ಲ ಕೇಳತೊಡಗಿದ. ಇವನ ಮಾತಿನಿಂದ ಬೇಸತ್ತ ಮನೆಯವರು ಮನೆಯಿಂದ, ಊರಿನಿಂದ ಹೊರಗೆ ಕಳುಹಿಸಿಬಿಟ್ಟರು.
ಆ ಯುವಕ ಅಲ್ಲಿಂದ ನಡೆಯುತ್ತ ಹೊರಟ. ದಾರಿ ಮಧ್ಯದಲ್ಲಿ ಸಿಕ್ಕವರಿಗೂ ಇವನ ಪ್ರಶ್ನೆ ಕೇಳುವಿಕೆ ಮುಂದುವರೆದಿತ್ತು. ಹಾಗಿರುವಾಗ ಒಬ್ಬ ಸಾಧು ಸಿಕ್ಕಿದ. ಸಾಧು ಇವನ ಪ್ರಶ್ನೆಗಳನ್ನು ಕೇಳಿಸಿಕೊಂಡು ‘ಅಯ್ಯಾ ನನಗೂ ಮೊದಲು ಇಂಥಹ ಪ್ರಶ್ನೆಗಳು ಹುಟ್ಟಿದವು. ಇದೆಲ್ಲ ಆಧ್ಯಾತ್ಮಿಕ ಜಿಜ್ಞಾಸೆಗೆ ಸಂಬಂಧ ಪಟ್ಟಿರುವುದು. ನಮ್ಮ ಹುಟ್ಟು ಸಾವು ದೈವಕೃಪೆ. ಮಧ್ಯದಲ್ಲಿ ನಾವು ಮಾಡುವ ಕರ್ತವ್ಯಗಳು ಮಾಡಬೇಕು.’ ಎಂದರು. ಅದ್ಯಾಕೆ ಮಾಡಬೇಕು. ಅದನ್ನೆಲ್ಲ ಉಳಿದವರು ಮಾಡಿದ್ರೆ ಆಗುತ್ತದಲ್ಲ. ನಾನೇ ಮಾಡಬೇಕು ಅಂತ ಇದೆಯೇ. ಎಲ್ಲ ಪ್ರಾಣಿಗಳಂತೆ ಮನುಷ್ಯನೂ ಇರಬಹುದಲ್ಲ. ನಾನೇ ಯಾಕೆ ದಾನ ಧರ್ಮ ಮಾಡಬೇಕು ಎಂದನು. ‘ನೋಡು ಹುಡುಗ, ನಿನ್ನ ಈ ತಕರಾರಿನ ಪ್ರಶ್ನೆಗಳಿಗೆ ಉತ್ತರ ಬೇಕು ಎಂದರೆ ಇಲ್ಲಿಂದ ಹಿಮಾಲಯಕ್ಕೆ ಹೋಗು. ಅಲ್ಲಿ ನಾನು ಹೇಳಿದ ಜಾಗದಲ್ಲಿ ನನ್ನ ಗುರುಗಳು ಇರುತ್ತಾರೆ. ಅವರು ಇದಕ್ಕೆಲ್ಲ ಸಮಂಜಸವಾಗಿ ಉತ್ತರಿಸುತ್ತಾರೆ’ ಎಂದ ಸಾಧು.
ಸಾಧುವಿನ ಮಾತಿನಂತೆ ಆ ಆಶ್ರಮಕ್ಕೆ ಬಂದು ತಲುಪಿದ. ಗುರುಗಳ ಎದುರು ತನ್ನ ವಾದವನ್ನು ಮಂಡಿಸಿದ. ಗುರುಗಳು ನಿನ್ನ ಪ್ರಶ್ನೆಗಳಿಗೆ ನೀನೆ ಉತ್ತರ ಕಂಡುಕೊಳ್ಳಬೇಕು. ಅಲ್ಲೊಂದು ಕೋಣೆ ಇದೆ. ಆ ಕೋಣೆಯಲ್ಲಿ ನೀನು ಎರಡು ವರ್ಷ ಇರಬೇಕು. ನಿನಗೆ ಬೇಕಾದ ಊಟ ತಿಂಡಿಯ ವ್ಯವಸ್ಥೇ ಆಶ್ರಮ ಮಾಡುತ್ತದೆ. ಆದರೆ ನೀನು ಆರು ತಿಂಗಳ ಒಂದೇ ಒಂದು ಮಾತನಾಡಬಾರದು. ಅ ಕೋಣೆಯಿಂದ ಹೊಗೆ ಬರಬಾರದು. ಮೌನವೃತದಲ್ಲಿರಬೇಕು. ಆರು ತಿಂಗಳದ ನಂತರ ನನ್ನೆದುರು ಬಂದು ಒಂದು ವಾಕ್ಯ ಮಾತನಾಡಬೇಕು. ಒಂದೇ ವಾಕ್ಯ ಮಾತಾಡಲು ಮಾತ್ರ ನಿನಗೆ ಅವಕಾಶ. ಮತ್ತೆ ನೀನು ಮೌನವೃತಕ್ಕೆ ಸಾಗಬೇಕು ಎಂದು ಹೇಳಿ ಕಳುಹಿಸಿಕೊಟ್ಟರು.
ಆ ಕೋಣೆಯ ಒಳಗೆ ಹೋದ ಮೇಲೆ ಗೊತ್ತಾಯಿತು ಮಲಗಲು ಹಾಸಿಗೆ ಇಲ್ಲ ಎಂದು. ಜೋರಾದ ಚಳಿ. ಹಿಮಾಲಯದ ಚಳಿ ಎಂದರೆ ಗಡಗಡ ನಡುಕ. ಮಾತನಾಡುವಂತಿಲ್ಲ. ಆ ಕೋಣೆಗೆ ಯಾರೂ ಬರುವುದೂ ಇಲ್ಲ. ಕೂಗಿ ಹೇಳುವಂತೆಯೂ ಇಲ್ಲ. ಹಾಗೂ ಹೀಗೂ ಆರು ತಿಂಗಳ ಕಾಲ ಕಳೆದು ಕೋಣೆಯಿಂದ ಹೊರಗೆ ಬಂದ. ಗುರುಗಳು ಒಂದು ವಾಕ್ಯ ಮಾತಾಡುವಂತೆ ತಿಳಿಸಿದರು. ‘ಗುರುಗಳೇ, ನನಗೆ ಮಲಗಲು ಹಾಸಿಗೆ ಬೇಕು’ ಎಂದ. ಕೋಣೆಗೆ ಹೋಗುವಷ್ಟರಲ್ಲಿ ಹಾಸಿಗೆ ಇತ್ತು. ಹಾಸಿಗೆ ಹಾಸಿ ಮಲಗುವಾಗ ಕಳ್ಳ ಬೆಕ್ಕೊಂದು ಕಿಟಕಿಯನ್ನು ಹಾರಿ ಒಳಗೆ ಬರಲು ನೋಡಿತು. ಆಗ ಕಿಟಕಿಯ ಗಾಜು ಒಡೆದು ಹೋಯ್ತು. ಅಲ್ಲಿಂದ ಚಳಿಗಾಳಿ ಒಳಗೆ ನುಗ್ಗಿ ಬಂದಿತು. ಮಳೆ, ಮಂಜು ಎಲ್ಲವೂ ಕೋಣೆಯ ಒಳಗೆ ಬಂದು ಮಲಗಲು ಅಸಾಧ್ಯವಾಯಿತು. ಅಂತು ಆಗಲೂ ಆರು ತಿಂಗಳು ಪೂರೈಸಿದ. ಮತ್ತೆ ಹೊರಗೆ ಬಂದಾಗ ಗುರುಗಳೇ ನನ್ನ ಕೋಣೆಯ ಕಿಟಕಿಯ ಗಾಜು ಒಡೆದಿದೆ’ ಎಂದು ಹೇಳುವಷ್ಟರಲ್ಲಿ ಗುರುಗಳು ಕೈ ಮುಂದೆ ಮಾಡಿ ಮಾತು ನಿಲ್ಲಿಸಿದರು. ಕೋಣೆಗೆ ಹೋಗುವಷ್ಟರಲ್ಲಿ ಕಿಟಕಿಯ ಗಾಜು ಸರಿಮಾಡಿದ್ದರು. ಆದರೆ ಗಾಜು ಸರಿ ಮಾಡುವವರು ಹಾಸಿಗೆಯನ್ನು ಹೊರಗೆ ಇಟ್ಟುಬಿಟ್ಟಿದ್ದರು. ಹಾಸಿಗೆ ಇಲ್ಲ ಹೇಳುವಂತಿಲ್ಲ, ಯಾರನ್ನಾದರೂ ಮಾತನಾಡಿಸುವಂತಿಲ್ಲ. ಅಲ್ಲಿ ಉಳಿಯಲು ಆ ಯುವಕನಿಂದ ಆಗಲಿಲ್ಲ. ಹೊರಗೆ ಬಂದು ಗುರುಗಳ ಎದುರು ನಿಂತು, ಈ ಮೌವೂ ಬೇಡ ಏನು ಬೇಡ. ಕಷ್ಟದಲ್ಲಿದ್ದೇನೆ ಎಂದು ಸಹಾಯ ಮಾಡುವವರು ಯಾರು ಇಲ್ಲ. ಇಲ್ಲಿ ಬದುಕಲು ಸಾಧ್ಯವೇ ಇಲ್ಲ ಎಂದ. ಆಗ ಗುರುಗಳು ನಾವು ಯಾಕೆ ಹುಟ್ಟಿದ್ದೇವೆ? ನಾವೇ ಯಾಕೆ ಸಹಾಯ ಮಾಡಬೇಕು. ಹುಟ್ಟು ಸಾವಿನ ನಮಗೇಕೆ? ಸಮಾಜ ಸೇವೆ ಯಾಕೆ ಮಾಡಬೇಕು ಎನ್ನುವದು ಈಗಲೂ ಅರ್ಥವಾಗದಿದ್ದರೆ ನಿಜವಾಗಿ ನೀನು ನಿಪ್ರಯೋಜಕ. ಮನುಷ್ಯ ಹುಟ್ಟಿದ್ದೆ ಇನ್ನೊಬ್ಬರಿಗೆ ಒಳಿತು ಮಾಡಲು. ಅದನ್ನು ಬಿಟ್ಟು ನಾನು ಸರಿ ಇದ್ದೇನೆ, ಅವನು ಸರಿ ಇಲ್ಲ. ಅವನು ಬೇಕಾದರೆ ಮಾಡಿಕೊಳ್ಳಲಿ ಎನ್ನುವ ಧೋರಣೆ ಹೊಂದಲು ಅಲ್ಲ. ನಾನೇಕೆ ಮಾಡಬೇಕು ಎಂದು ನೀನು ಯೋಚಿಸಿದಂತೆ ಎಲ್ಲರೂ ಯೋಚಿಸಿಬಿಟ್ಟರೆ ಜಗತ್ತಲ್ಲಿ ಸುಖ ಎನ್ನುವುದೇ ಇರುತ್ತಿರಲಿಲ್ಲ. ಸಹಬಾಳ್ವೆಯೇ ಜೀವಿಗಳ ಬದುಕು. ನೀನು ಇವತ್ತು ಒಬ್ಬನಿಗೆ ಸಹಾಯ ಮಾಡಿದರೆ ನಿನ್ನ ಕಷ್ಟ ಕಾಲಕ್ಕೆ ಮತ್ತೊಬ್ಬ ಹೇಗೋ ಬಂದಿರುತ್ತಾನೆ. ಬೇರೆಯವರು ಸರಿ ಇಲ್ಲ ಎಂದು ತಕರಾರು ತೆಗೆಯುವುವ ಬದಲು ನಾವು ಎಷ್ಟು ಸರಿಯಾಗಿದ್ದೇವೆ ಎಂದು ಅರಿತುಕೊಳ್ಳಬೇಕು. ಅದುವೇ ಜೀವನದ ಸಾರ. ಎಂದರು. ಅಲ್ಲಿಂದ ಆ ಯುವಕ ಮತ್ತೆ ಪ್ರಶ್ನೆ ಕೇಳಲಿಲ್ಲ. ತನ್ನಿಂದ ಸಾಧ್ಯವಾಗುವ ಎಲ್ಲ ರೀತಿಯ ಸಮಾಜ ಸೇವೆ ಮಾಡುತ್ತ ಬದುಕು ಸವೆಸಿದ.
ಇನ್ನೊಬ್ಬರು ಮಾಡಲಿ ಎನ್ನುವ ಧೋರಣೆ ಮತ್ತು ನನ್ನಿಂದ ಆಗುವುದಿಲ್ಲ ಎನ್ನುವ ಕೀಳರಿಮೆ ಇವೆರಡು ನಮ್ಮ ಸೋಲುಗಳು. ಜವಬ್ದಾರಿಯಿಂದ ತಪ್ಪಿಸಿಕೊಳ್ಳಲು ಬೇಕಾದ ಎಲ್ಲ ರೀತಿಯ ಉಪಾಯಗಳನ್ನು ಸಲೀಸಾಗಿ ಮಾಡುತ್ತೇವೆ. ಅದನ್ನು ಇನ್ನೊಬ್ಬರ ಮೇಲೆ ಎತ್ತಿ ಹಾಕಿ ತಕರಾರು ತೆಗೆದು ನಾವು ಸಾಚಾ ಎನ್ನಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಕಲಿಕೆ ಎನ್ನುವದು ಸಾಯುವ ಕ್ಷಣದವರೆಗೂ ಇರುತ್ತದೆಯಂತೆ. ಹಾಗಿರುವಾಗ ನಾವು ಕಲಿತು ಮುನ್ನೆಡೆಯುವುದರ ಜೊತೆ ನಮ್ಮ ಮುಂದಿನ ಪೀಳಿಗೆಯವರಿಗೆ ಕೂಡ ಜವಬ್ದಾರಿಯುತ ನಡೆ ಕಲಿಸಿಕೊಡುವುದು ಬಹಳ ಮುಖ್ಯವಾಗುತ್ತದೆ.
- * * * -