ಗುಳೇದಗುಡ22: ರಾಜ್ಯ ಕೆಪಿಸಿಸಿ ಅಧ್ಯಕ್ಷರನ್ನು ಶೀಘ್ರ ನೇಮಕ ಮಾಡಲು ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿರುವುದಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ ಅವರು ತಿಳಿಸಿದ್ದಾರೆ.
ಅವರು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಕೆಪಿಸಿಸಿ ಅಧ್ಯಕ್ಷರ ನೇಮಕ ವಿಳಂಬವಾಗಿರುವುದಕ್ಕೆ ನನಗೂ ವಿಷಾದವಿದೆ. ನಾನು ಪಕ್ಷದ ಸಂಘಟನೆಯಲ್ಲಿ 37 ವರ್ಷಕಾಲ ತೊಡಗಿಕೊಂಡಿದ್ದೇನೆ. ಪಕ್ಷ ಸುಬದ್ರ ಮತ್ತು ಕ್ರೀಯಾಶೀಲವಾಗಿದ್ದರೆ ಕಾರ್ಯಕರ್ತರು ಸಮಾಧಾನದಿಂದ ಇರುತ್ತಾರೆ ಎಂದು ಹೇಳಿದರು.
ಪಕ್ಷದ ಹಿಂದಿನ ಅಧ್ಯಕ್ಷರಾಗಿದ್ದ ದಿನೇಶ ಗುಂಡುರಾವ್ ಅಧ್ಯಕ್ಷರ ಸ್ಥಾನಕ್ಕೆ ವಿರೋಧ ಪಕ್ಷದ ನಾಯಕಾರಾದ ಸಿದ್ದರಾಮಯ್ಯನವರು ಸಿಎಲ್ಪಿಗೆ ರಾಜೀನಾಮೆ ನೀಡಿದ್ದಾರೆ. ಇವುಗಳ ಬಗ್ಗೆ ಪಕ್ಷ ಇತ್ಯರ್ಥ ಪಡಿಸುವ ಅಗತ್ಯವಿದೆ. ಇದು ಇತ್ಯಾರ್ಥವಾಗದ ಕಾರಣ ನನ್ನಂತ ನಿಷ್ಠಾವಂತ ಕಾರ್ಯಕರ್ತರಿಗೆ ಮತ್ತು ಇಲ್ಲಿಯವರೆಗೆ ದುಡಿದು ಬಂದವರಿಗೆ ನೋವಾಗಿದೆ. ಕೂಡಲೇ ರಾಜ್ಯ ಅಧ್ಯಕ್ಷರನ್ನು ನೇಮಿಸಬೇಕು. ಇಂತಹ ಸ್ಥಾನಗಳಿಗೆ ನೇಮಕ ಮಾಡಿದಲ್ಲಿ ಕಾರ್ಯಕರ್ತರು ಹುರುಪು ಹುಮ್ಮಸ್ಸಿನಿಂದ ಕೆಲಸ ಮಾಡಲು ಸಾಧ್ಯ. ಆದ್ದರಿಂದ ಸೋನಿಯಾ ಅವರಿಗೆ ವಿನಂತಿ ಮಾಡಿರುವುದಾಗಿ ತಿಳಿಸಿದ್ದಾರೆ.
ಜಿ.ಪರಮೇಶ್ವರ ಅವರು 8 ವರ್ಷಗಳ ಕಾಲ ರಾಜ್ಯ ಕೆಪಿಸಿಸಿ ಅಧ್ಯಕ್ಷರಾಗಿ ಕೆಲಸ ಮಾಡಿದವರು. ಮಂತ್ರಿಗಳಾಗಿಯೂ ಕೆಲಸ ಮಾಡಿದ ಅನುಭವವುಳ್ಳವರು. ಅವರೇ ಹೇಳಿದಂತೆ ವಿಭಾಗ ವಾರು ಕಾರ್ಯಾಧ್ಯಕ್ಷರ ನೇಮಕದಿಂದ ಗುಂಪುಗಾರಿಕೆಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ. ಕೆಲವರು ವಿಭಾಗ ವಾರು ಕಾರ್ಯಾಧ್ಯಕ್ಷರ ನೇಮಕ ಮಾಡಲು ಒತ್ತಾಯವಿದೆ. ಇವುಗಳನ್ನು ಆಳವಾಗಿ ಅಭ್ಯಸಿಸಿ ಪಕ್ಷ ನಿರ್ಣಯವನ್ನು ತಗೆದುಕೊಳ್ಳುವದು ಎಂಬುದು ನನಗೆ ವಿಶ್ವಾಸವಿದೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜು ಜವಳಿ, ಲಾಯದಗುಂದ ಪಿಕೆಪಿಎಸ್ ಅಧ್ಯಕ್ಷ ಪ್ರಕಾಶ ಗೌಡರ, ಶಶಿಧರ ಬಿಜ್ಜಳ, ಚಾಂದ್ ಹನಮಸಾಗರ, ವಿನೋಧ ಮದ್ದಾನಿ ಹಾಗು ಇತರರು ಇದ್ದರು.