ಲೋಕದರ್ಶನವರದಿ
ಗುಳೇದಗುಡ್ಡ29: ವಿಳಂಬವಾಗಿರುವ ಬಾದಾಮಿಯ ಚಾಲುಕ್ಯ ಉತ್ಸವವನ್ನುಾದಷ್ಟು ಬೇಗನೇ ಮಾಡಲು ತಾಲೂಕಿನ ಹಲವಾರು ಪ್ರಜ್ಞಾವಂತ ನಾಗರಿಕರು ಹಾಗೂ ಸಾಮಾಜಿಕ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಹಾಗೂ ತಾಲೂಕ ದಂಡಾಧಿಕಾರಿಗಳ ಮುಖಾಂತರ ರಾಜ್ಯದ ಮುಖ್ಯಮಂತ್ರಿಗಳಿಗೆ, ಪ್ರವಾಸೋದ್ಯಮ ಸಚಿವರಿಗೆ, ಬಾಗಲಕೋಟ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಬಾದಾಮಿ ಶಾಸಕರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಮನವಿಯಲ್ಲಿ, ಈಗಾಗಲೇ 2019-20ರ ಆರ್ಥಿಕತೆಯ ವರ್ಷವು ಮುಕ್ತಾಯದ ಅಂತಿಮದಲ್ಲಿದ್ದು, ನಮ್ಮ ಕನ್ನಡ ನಾಡಿನಾದ್ಯಂತ ಹಲವಾರು ನಾಡು-ನುಡಿಯ ಉತ್ಸವಗಳು ತುಂಬಾ ಯಶಸ್ವಿಯಾಗಿ ನಡೆದಿವೆ ಮತ್ತು ನಡೆಯುತ್ತಿವೆ.
ಪ್ರಮುಖವಾಗಿ ಹಂಪಿ ಉತ್ಸವ, ಕಿತ್ತೂರು ಉತ್ಸವ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಚಿತ್ರಸಂತೆ, ಕೃಷಿಮೇಳಗಳಂತಹ ವಿಭಿನ್ನವಾದ ನಾಡು-ನುಡಿಯ ಕುರಿತಾದ ಸಮಾರಂಭಗಳನ್ನು ಮಾಡಿರುವುದು ಸ್ವಾಗತಾರ್ಹ. ಆದರೆ ನಮ್ಮ ಐತಿಹಾಸಿಕ ಬಾದಾಮಿ ಚಾಲುಕ್ಯರ ಉತ್ಸವ ಮಾಡಲು ಮಾತ್ರ ಸರ್ಕಾರವು ಕಾಲ ವಿಳಂಬ ಮಾಡುತ್ತಿರುವುದಕ್ಕೆ ಕನ್ನಡಿಗರಾದ ನಮಗೆ ಬೆಸರದ ಸಂಗತಿಯಾಗಿದೆ.
ಭಾರತೀಯ ಇತಿಹಾಸದಲ್ಲಿಯೇ ಕರ್ನಾಟಕ ದ ಬಾಗಲಕೋಟ ಜಿಲ್ಲೆಯ ಬಾದಾಮಿ ಚಾಲುಕ್ಯರ ನಾಡು ಕಲೆ, ಸಾಹಿತ್ಯ, ಸಾಂಸ್ಕೃತಿಕ, ವಾಸ್ತುಶಿಲ್ಪಕಲೆಗಳಿಗೆ ಇಡೀ ವಿಶ್ವದಲ್ಲಿಯೇ ಸುಪ್ರಸಿದ್ಧಯಾಗಿವೆ. ಇಂದಿಗೂ ದೇಶ-ವಿದೇಶಿ ಪ್ರವಾಸಿಗರು ಬಾದಾಮಿಯ ಚಾಲುಕ್ಯರ ನಾಡಿಗೆ ನಿರಂತರವಾಗಿ ಭೇಟಿ ನೀಡುತ್ತ ಸಂತಸ ಪಡುತ್ತಿದ್ದಾರೆ. ಇಲ್ಲಿಯ ವಿಶ್ವವಿಖ್ಯಾತ ಬಾದಾಮಿಯ ಗುಹಾಂತರ ದೇವಾಲಯಗಳು, ಪಟ್ಟದಕಲ್ಲು, ಐಹೊಳ್ಳಿ ಮತ್ತು ಮಹಾಕೂಟದಲ್ಲಿಯ ಬಾದಾಮಿ ಚಾಲುಕ್ಯರ ಕಾಲದ ವಿಶ್ವಪ್ರಸಿದ್ದ ದೇವಾಲಯಗಳು ಇಡೀ ಪ್ರಪಂಚದ ದೇವಾಲಯಗಳ ತೊಟ್ಟಿಲು ಎಂಬ ಬಿರುದು ಪಡೆದು ವಿಶ್ವಖ್ಯಾತಿಯನ್ನು ಹೊಂದಿವೆ.
ಇಂತಹ ಐತಿಹಾಸಿಕ ವೈಭವದ ನಮ್ಮ ಬಾದಾಮಿ ಚಾಲುಕ್ಯ ಉತ್ಸವನ್ನು ತಾವುಗಳೆಲ್ಲರೂ ಅತೀ ಶೀಘ್ರವಾಗಿ ಬಾದಾಮಿ. ಪಟ್ಟದಕಲ್ಲು ಮತ್ತು ಐಹೊಳ್ಳಿಯಲ್ಲಿ 2020 ಮಾರ್ಚ ತಿಂಗಳ ಮುಗಿಯುದರಲ್ಲಿಯೇ ನಮ್ಮ ಐತಿಹಾಸಿಕ ಬಾದಾಮಿಯ "ಚಾಲುಕ್ಯ ಉತ್ಸವ" ಮಾಡಬೇಕೆಂದು ತಾಲೂಕಿನ ತೆಗ್ಗಿ ಗ್ರಾಮದ ಸಾಮಾಜಿಕ ಕಾರ್ಯಕರ್ತ ಚಂದ್ರಶೇಖರ ಕಾಳನ್ನವರ, ಪುಲಕೇಶಿ ಸೂಳಿಕೇರಿ, ವೀರಯ್ಯ ಮಣ್ಣೂರಮಠ, ಬಸವರಾಜ ಭೂತಾಳಿ ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಕರ್ತರು ಆಗ್ರಹಿಸಿದ್ದಾರೆ.