ಸಾರ್ವಜನಿಕ ಕೆಲಸದಲ್ಲಿ ಪಾರದರ್ಶಕತೆ ಇರಲಿ: ದಿವ್ಯ ಪ್ರಭು

Let there be transparency in public affairs: Divya Prabhu

ಧಾರವಾಡ 21: ಸಾರ್ವಜನಿಕ ಕೆಲಸಗಳಲ್ಲಿ ಪಾರದರ್ಶಕತೆಯನ್ನು ತರಲು ಮತ್ತು ಸಕಾಲಕ್ಕೆ ಸೇವೆಗಳು ತಲುಪುವಂತೆ ಮಾಡುವಲ್ಲಿ ಮಾಹಿತಿ ಹಕ್ಕು ಕಾಯ್ದೆ ಪ್ರಮುಖ ಪಾತ್ರ ವಹಿಸುತ್ತಿದ್ದು, ಸರ್ಕಾರಿ ನೌಕರರಿಗೆ ಆರ್‌.ಟಿ.ಐ ಕಾಯ್ದೆಯ ಬಗ್ಗೆ ಭಯ ಬೇಡ. ಆದರೆ ಸಾರ್ವಜನಿಕ ಕೆಲಸಗಳಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಂಡು ಬರಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.  

ಅವರು ಫೆ.21ರಂದು ಬೆಳಿಗ್ಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ ಆಶ್ರಯದಲ್ಲಿ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳು, ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಸಹಾಯಕ ಮಾಹಿತಿ ಅಧಿಕಾರಿಗಳು ಮತ್ತು ಆರ್‌.ಟಿ.ಐ ವಿಷಯ ನಿರ್ವಾಹಕರಿಗೆ ಮಾಹಿತಿ ಹಕ್ಕು ಅಧಿನಿಯಮ-2005 ಕುರಿತು ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ, ಮಾತನಾಡಿದರು.  

ಮಾಹಿತಿ ಹಕ್ಕು ಅಧಿನಿಯಮವು ಮುಖ್ಯವಾಗಿ ಸಾರ್ವಜನಿಕ ಕೆಲಸಗಳಲ್ಲಿ ಪಾರದರ್ಶಕತೆ, ಹೋಣೆಗಾರಿಕೆ, ಪಾಲ್ಗೋಳುವಿಕೆ ಮತ್ತು ಜವಾಬ್ದಾರಿಯನ್ನು ನಿಗದಿಪಡಿಸುತ್ತದೆ. ಪ್ರತಿಯೊಬ್ಬ ಅಧಿಕಾರಿಯು ಈ ತತ್ವಗಳಿಗೆ ಬದ್ಧರಾಗಿ, ತಮ್ಮ ಕರ್ತವ್ಯಗಳನ್ನು ನಿರ್ವಹಿಸಿದರೆ ಯೋಜನೆಯ ಉದ್ದೇಶ ಸಫಲವಾಗುತ್ತದೆ ಎಂದು ಅವರು ಹೇಳಿದರು.  

ಸರ್ಕಾರಿ ಅಧಿಕಾರಿ ಮತ್ತು ಸಿಬ್ಬಂದಿಗಳು ಮಾಹಿತಿ ಹಕ್ಕು ಕಾಯ್ದೆಯ ಬಗ್ಗೆ ಹೆದರುವ, ಭಯ ಪಡುವ ಅಗತ್ಯವಿಲ್ಲ. ಕಾಯ್ದೆಯನ್ನು ಸರಿಯಾಗಿ ಅರ್ಥೈಸಿಕೊಂಡು ಕಾರ್ಯನಿರ್ವಹಿಸಬೇಕು. ಆರ್‌.ಟಿ.ಐ ಅಡಿ ಸಲ್ಲಿಕೆಯಾಗುವ ಅರ್ಜಿಗಳನ್ನು ಪರೀಶೀಲಿಸಿ, ಸಂಬಂಧಿಸಿದ ಮಾಹಿತಿ ಇರುವ ಅಧಿಕಾರಿಗಳಿಗೆ ವರ್ಗಾಯಿಸಬೇಕು. ತಮ್ಮ ಬಳಿಯೇ ಮಾಹಿತಿ ಇದ್ದಲ್ಲಿ, ಪೂರೈಸಬೇಕು. ಒಟ್ಟಾರೆಯಾಗಿ ಆರ್‌.ಟಿ.ಐ ಅರ್ಜಿಗೆ ಕಾಲಮಿತಿಯಲ್ಲಿ ಉತ್ತರಿಸುವುದು ಬಹುಮುಖ್ಯವಾಗಿದೆ. ನಿಧಾನಗತಿ ಅಥವಾ ನಿಷ್ಕಾಳಜಿ ಸಲ್ಲದು ಎಂದು ಅವರು ತಿಳಿಸಿದರು.  

ಪ್ರತಿ ಇಲಾಖೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಆರ್‌.ಟಿ.ಐ ಕಾಯ್ದೆಯ ಕುರಿತು ಅಗತ್ಯ ಮಾಹಿತಿ ಮತ್ತು ತಿಳುವಳಿಕೆಯನ್ನು ಪಡೆಯುವುದು ಅಗತ್ಯವಾಗಿದೆ. ಸರ್ಕಾರವು ಪ್ರತಿ ನೌಕರನು ಮಾಹಿತಿಯುಕ್ತ ಅಧಿಕಾರಿಯಾಗಿ ರೂಪಿಸುವ ಉದ್ದೇಶದಿಂದ ಇಂತಹ ಮಾಹಿತಿ ಹಕ್ಕು ಅಧಿನಿಯಮ-2005 ಕುರಿತು ಕಾರ್ಯಾಗಾರಗಳನ್ನು ಏರಿ​‍್ಡಸಿ, ತರಬೇತಿ ನೀಡಲು ನಿರ್ದೇಶಿಸಿದೆ. ಅದರನ್ವಯ ಈ ಕಾರ್ಯಾಗಾರವನ್ನು ಆಯೋಜಿಸಲಾಗಿದ್ದು, ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಅವರು ಹೇಳಿದರು.  

ಕಾರ್ಯಾಗಾರದಲ್ಲಿ ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ವಿಶ್ರಾಂತ ಆಯುಕ್ತರಾದ ಡಾ.ಶೇಖರ ಸಜ್ಜನ ಅವರು ಮಾಹಿತಿ ಹಕ್ಕು ಅಧಿನಿಯಮ-2005 ಕುರಿತು ವಿಶೇಷ ಉಪನ್ಯಾಸ ನೀಡಿ, ಅಧಿನಿಯಮವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಅನೇಕರು ತೊಂದರೆಗೆ ಒಳಗಾಗುತ್ತಾರೆ. ಅಧಿನಿಯಮದಲ್ಲಿ ಆರ್‌.ಟಿ.ಐ ಅರ್ಜಿಯ ಪ್ರತಿ ಹಂತದ ವಿಲೇವಾರಿ ಬಗ್ಗೆ ಹಾಗೂ ತಿರ್ಮಾನಗಳ ಬಗ್ಗೆ ಸಕ್ಷನ್‌ಗಳ ಪ್ರಕಾರ ವಿವರವಾಗಿ ತಿಳಿಸಲಾಗಿದೆ ಎಂದರು.  

ಮಾಹಿತಿ ಹಕ್ಕು ಅಧಿನಿಯಮದ ಸಿಗುವ ಅವಕಾಶ ಬಳಸಿಕೊಂಡು ಅನೇಕರು ಮಾಹಿತಿ  ದುರಪಯೋಗ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಕರ್ನಾಟಕದಲ್ಲಿ ರಾಜ್ಯ ಮಾಹಿತಿ ಆಯೋಗವು ಈಗಾಗಲೇ ಸುಮಾರು 22 ಜನ ಮಾಹಿತಿ ಹಕ್ಕು ಅರ್ಜಿದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಆದೇಶಿಸಿದೆ. ಅಧಿಕಾರಿಗಳು ತಮ್ಮ ಕೆಲಸಗಳಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಕಾಪಾಡಿಕೊಂಡು ಕರ್ತವ್ಯ ನಿರ್ವಹಿಸಬೇಕೆಂದು ಅವರು ಹೇಳಿದರು.  

ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಬಿ.ಎಸ್‌.ಮೂಗನೂರಮಠ, ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ, ಯೋಜನಾ ನಿರ್ದೇಶಕಿ ರೇಖಾ ಡೊಳ್ಳಿನವರ ವೇದಿಕೆಯಲ್ಲಿದ್ದರು.  

ಉಪವಿಭಾಗಾಧಿಕಾರಿ ಶಾಲಂ ಹುಸೇನ್ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಧಾರವಾಡ ತಹಶೀಲ್ದಾರ ಡಾ. ಡಿ.ಎಚ್‌.ಹೂಗಾರ ವಂದಿಸಿದರು. ಶಿರಸ್ತೇದಾರ ಮಲ್ಲಿಕಾರ್ಜುನ ಸೊಲಗಿ ಕಾರ್ಯಕ್ರಮ ನಿರೂಪಿಸಿದರು.  

ಮಾಹಿತಿ ಹಕ್ಕು ಕಾರ್ಯಾಗಾರದಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳು, ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಸಹಾಯಕ ಮಾಹಿತಿ ಅಧಿಕಾರಿಗಳು ಮತ್ತು ಆರ್‌.ಟಿ.ಐ ವಿಷಯ ನಿರ್ವಾಹಕರು ಭಾಗವಹಿಸಿದ್ದರು.