ಗದಗ 29: ಗ್ರಾಮೀಣರಿಗೆ ಸರ್ಕಾರದ ಯೋಜನೆಗಳನ್ನು ಮನ ಮನೆಗೆ ತಲುಪಿಸುವಲ್ಲಿ ಜಾನಪದ ಕಲೆಗಳು ಬಹಳಷ್ಟು ಮಹತ್ವ ಪಡೆದುಕೊಂಡಿದೆ ಎಂದು ಶಾಲೆಯ ಮುಖ್ಯ ಶಿಕ್ಷಕ ಎಫ್.ಎಮ್.ಹಳ್ಳೆಮ್ಮನವರ ಹೇಳಿದರು.
ಶಿರಹಟ್ಟಿ ತಾಲೂಕಿನ ಹೊಳೆ ಇಟಗಿ ಗ್ರಾಮದ ಎಸ್.ಜಿ.ಬಿ.ಎಂ ಪ್ರೌಢ ಶಾಲೆಯಲ್ಲಿ ಮತ್ತು ಹೆಬ್ಬಾಳ ಗ್ರಾಮದ ಹನುಮಾನ್ ದೇವಸ್ಥಾನದ ಆವರಣದಲ್ಲಿ ನಡೆದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಏರ್ಪಡಿಸಿದ ಗ್ರಾಮ ಸಂಪರ್ಕ ಯೋಜನೆ ಅಡಿಯಲ್ಲಿ ನಡೆದ ಕ್ಷೇತ್ರ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪರಿಸರ ನಾಶದಿಂದ ವಾತಾವರಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹೀಗಾಗಿ ಮುಂದಿನ ಪೀಳಿಗೆಗೆ ಪರಿಸರ ಉಳಿಸಿ ಬೆಳೆಸಬೇಕು. ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಹಲವಾರು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಪ್ರತಿಯೊಬ್ಬರು ಇವುಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಎಫ್.ಎಮ್.ಹಳೆಮ್ಮನವರ ತಿಳಿಸಿದರು.
ಶ್ರೀ ಸಿದ್ದಲಿಂಗೇಶ್ವರ ಜಾನಪದ ಕಲಾ ತಂಡ ಅಡವಿಸೋಮಾಪೂರ ಹಾಗೂ ಶ್ರೀ ಗುರು ಶಿಷ್ಯ ಪರಂಪರೆ ಜಾನಪದ ಕಲಾ ತಂಡ ಲಕ್ಕುಂಡಿ ತಂಡದವರು ಗ್ರಾಮದ ಸ್ವಚ್ಛತೆ ಹಾಗೂ ಸರಕಾರದ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮಗಳನ್ನು ಪ್ರಸ್ತುತಿಸಿದರು.
ಇದೇ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರತಂದಿರುವ ಮಹಾತ್ಮಾ ಗಾಂಧೀಜಿಯ ಜೀವನ ಕುರಿತಾಗಿರುವ ಪಾಪು ಬಾಪು ಕಿರುಪುಸ್ತಕ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಹಶಿಕ್ಷಕರಾದ ಪಿ.ಆರ್.ಅಚಲಕರ, ಆರ್.ಎ.ಬಿದರಕೊಪ್ಪ, ಎನ್.ಎಂ.ಹುಡೇದಮನಿ ಸೇರಿದಂತೆ ಗ್ರಾಮ ಪಂಚಾಯತ ಸದಸ್ಯರಾದ ರವಿ ಕನವಳ್ಳಿ, ದೇವೇಂದ್ರಗೌಡ ಪುಟ್ಟಮಲ್ಲಪ್ಪನವರ ಹಾಗೂ ವಿದ್ಯಾರ್ಥಿಗಳು ವಾರ್ತಾ ಇಲಾಖೆಯ ಸಿಬ್ಬಂದಿ ಇದ್ದರು.