ನಾಳೆ ಮುಂಜಾನೆ ಇಂದಿನಂತೆ ಇರುವುದಿಲ್ಲ. ಇಂದಿನ ಬೆಳಗು ನಿನ್ನೆಯಂತೆ ಇದ್ದಿಲ್ಲ. ಪ್ರತೀ ದಿನ ಹುಟ್ಟುವ ಸೂರ್ಯ ಒಬ್ಬನೇ. ಅದೇ ಭೂಮಿ, ಅದೇ ಗಾಳಿ, ಅದೇ ನೀರಿನ ಆದ್ರತೆ. ಆದರೂ ಕಣ್ಣಿಗೆ ನಿತ್ಯವೂ ಹೊಸತೇ ಕಾಣಿಸುವುದು. ಆ ಕಣ್ಣಿನ ದೃಷ್ಟಿ ಎಷ್ಟು ದೂರ ಸೂರ್ಯನ ಬೆಳಕಿನಲ್ಲಿ ಚಲಿಸಿ ಸುತ್ತ ಇರುವ ಪರಿಸರವನ್ನು ನೋಡುತ್ತದೆಯೋ ಅದೆಲ್ಲವೂ ನನ್ನದು ಎನ್ನುವ ಭಾವ. ಸರಳ, ಸಣ್ಣದು ಎನ್ನಿಸುವ ಪ್ರಕೃತಿ ಸಹಜತೆಯಲ್ಲಿ ಒಂದಾಗಿರುವ ಈ ಸೋಜಿಗವನ್ನು ನೋಡುವ ಮನಸ್ಸು ಪ್ರಪುಲ್ಲತೆಯನ್ನು ಹೊಂದುತ್ತದೆ. ರವಿ ಕಾಣದ್ದನ್ನು ಕವಿ ಕಂಡ ಎನ್ನುವಂತೆ ನಮ್ಮ ಒಳಮನಸ್ಸನ್ನು ತೆರೆದು ಹೊರಗಣ್ಣಿನಿಂದ ಆಸ್ವಾದಿಸಿದರೆ ಎಲ್ಲವೂ ಅತೀ ಸುಂದರವಾಗಿರುತ್ತದೆ.
ಈ ಮುಂಜಾನೆಯ ಜೊತೆ ಒಂದು ಮುಗುಳು ನಗು, ಪುಟ್ಟ ಕಂದನ ತೊದಲ ನುಡಿ, ಹಿರಿಯರ ಒಂದು ಶಬ್ದದ ಹಿತವಚನ, ಪತ್ರಿಕೆಯಲ್ಲಿ ಓದುವ ಸುದ್ದಿ, ಯಾರೋ ಗೀಚಿದ ಕವಿತೆಯ ಸಾಲಿನ ಒಂದು ಸಾಲು, ಅಮ್ಮನ ಕೈ ತುತ್ತು, ಅಪ್ಪನ ಬೈಗುಳ, ಕೈಯಲ್ಲಿ ದಿನದ ಖರ್ಚಿಗೆ ಚಿಲ್ಲರೆ ಕಾಸು, ರಾತ್ರಿ ಮಲಗಲೊಂದು ಹಾಸಿಗೆ ಇದ್ದರೆ ಜೀವನ ಸ್ವರ್ಗವಿದ್ದಂತೆ. ಅಲ್ಲಿಗೆ ಮನುಷ್ಯನ ಬದುಕು ಸಂತೃಪ್ತ. ಈ ಮೇಲಿನ ಎಲ್ಲ ಸಾಲುಗಳು ಓದುವಾಗ ಹೌದು ನಾವು ಎಷ್ಟು ಸಂತೃಪ್ತರು. ಇಷ್ಟು ಇದ್ದು ಬಿಟ್ಟರೆ ಖುಷಿಯಿಂದ ಬದುಕಿಬಿಡಬಹುದು ಎನ್ನಿಸುತ್ತದೆ. ಇದನ್ನು ಓದಿ ಮುಗಿಸಿ ಒಂದು ನಿಮಿಷದಲ್ಲಿ ಹೊರ ಪ್ರಪಂಚ ನೋಡಿದಾಗ ಚಿಂತೆಯೋ, ಕಷ್ಟವೋ, ತೊಂದರೆಯೋ, ಒದ್ದಾಟವೋ ಇನ್ನೇನೋ ತಲೆಯೊಳಗೆ ಮುತ್ತಿಕೊಂಡು ಗಲಿಬಿಲಿಯಿಂದ ಎದ್ದು ಹೊರಡುತ್ತೇವೆ. ಹೇಳಿದಷ್ಟು ಸುಲಭ ಜೀವನದ ದಾರಿ ಅಲ್ಲ ಎನ್ನುವದು ವಾಸ್ತವ. ಅದನ್ನು ಒಪ್ಪಿಕೊಳ್ಳೋಣ. ಆದರೆ ಋಣಾತ್ಮಕ ಬದುಕೇ ಜೀವನ ಅಲ್ಲ ಎನ್ನುವದು ಕೂಡ ಸತ್ಯ.
ಕೆಲವೊಂದಷ್ಟನ್ನು ನಾವು ಮೈಮೇಲೆ ಎಳೆದುಕೊಳ್ಳುತ್ತೇವೆ ಅನ್ನಿಸುತ್ತದೆ. ಬೇಕಿಲ್ಲದ ಉಸಾಬರಿಗಳು ನಮ್ಮನ್ನು ಸುತ್ತಿಕೊಳ್ಳಲು ನಾವೇ ಜಾಗ ಮಾಡಿ ಕೊಟ್ಟುಬಿಡುತ್ತೇವೆ. ಸಮಾಜ ಅಥವಾ ಮನೆಯ ಸ್ವಾಸ್ಥ್ಯಕ್ಕಾಗಿ ಮಾತನಾಡುವುದು ಬೇರೆಯ ವಿಚಾರ. ಆದರೆ ತಿಳಿಯಾಗಿದ್ದ ನೀರಲ್ಲಿ ಕಾಲು ಹಾಕಿ ರಾಡಿ ಮಾಡುವುದು ಬೇಕಿರೋದಿಲ್ಲ. ಯಾವುದೋ ಸಣ್ಣ ಕಾರಣವನ್ನೇ ದೊಡ್ಡದು ಮಾಡಿ ಅವರ ಮೇಲೆ ಇವರು ಇವರ ಮೇಲೆ ಅವರು ಮಾತಿನ ಛಾಟಿಗಳನ್ನು ಬೀಸುತ್ತ, ಜಗಳವಾಡಿ ಅದು ರಾಜಕೀಯಕ್ಕೆ ತಿರುಗಿ ಸಂಬಂಧವೇ ಇಲ್ಲದ ವಿಚಾರಗಳನ್ನು ವಯಕ್ತಿಯ ನಿಂದನೆಗಳನ್ನು ಮಾಡಿಕೊಂಡು ಮನಸ್ಸನ್ನು ಕೆಡಿಸಿಕೊಂಡು ಕೂರುವುದು ಸಾಕಷ್ಟು ಕಾಣುತ್ತಿದ್ದೇವೆ.
ಅದೊಂದು ಪುಟ್ಟ ಊರು. ಅಲ್ಲಿರುವ ಎರಡು ಅಕ್ಕ ಪಕ್ಕದ ಮನೆಯವರಿಗೆ ಅಷ್ಟಾಗಿ ಆಗಿ ಬರುವುದಿಲ್ಲ. ಒಂದು ಮನೆಯವರು ಇನ್ನೊಂದು ಮನೆಯವರನ್ನು ಮಾತನಾಡಿಸುತ್ತಿರಲಿಲ್ಲ. ಯಾವುದೋ ಜಗಳ ಅವರ ಮಧ್ಯ ಗೋಡೆ ಎಬ್ಬಿಸಿತ್ತು. ಆದರೆ ನಿತ್ಯ ಅವರು ಜಗಳ ಮಾಡುತ್ತ ಕೂರಲಿಲ್ಲ. ಅವರವರ ಪಾಡಿಗೆ ಇದ್ದುಕೊಂಡಿದ್ದರು. ಅದರಲ್ಲಿ ಒಂದು ಮನೆಗೆ ಒಬ್ಬಾತ ಅಥಿತಿಯಾಗಿ ಬಂದ. ಆ ಅತಿಥಿ ಎರಡು ಮನೆಗೂ ಪರಿಚಯಸ್ಥನಾಗಿದ್ದರಿಂದ ಎರಡು ಮನೆಯಲ್ಲೂ ಉಳಿದುಕೊಂಡ. ಆತ ತಾನು ಬಂದಿದ್ದು ಆಯಿತೆಂದು ಹೋಗಿಬಿಟ್ಟಿದ್ದರೆ ಅಲ್ಲಿ ಏನು ಆಗುತ್ತಿರಲೇ ಇಲ್ಲ. ಆದರೆ ಆತ ಸುಮ್ಮನಿರಲಾರದೇ ಎರಡು ಮನೆಯ ಮಾತುಗಳನ್ನು ವರ್ಗಾಯಿಸಿಬಿಟ್ಟಿದ್ದ. ಆ ಮಾತುಗಳು ಜಗಳಕ್ಕೆ ಕಾರಣವಾಯ್ತು. ತಮ್ಮ ಮನೆಯ ವಿಚಾರವನ್ನು ಮೂರನೇ ವ್ಯಕ್ತಿಯಲ್ಲಿ ಕೆಟ್ಟದಾಗಿ ಮಾತನಾಡುತ್ತಾರೆ ಎಂದಾಗ ಎಂಥವರಿಗೆ ಆದರೂ ಕೋಪ ಬರುವುದು ಸಹಜ. ಅಲ್ಲಿ ಆದದ್ದು ಅದೇ. ಆ ಜಗಳ ತಾರಕಕ್ಕೆ ಹೋಗಿ ಕೋರ್ಟ್ ಮೆಟ್ಟಿಲೇರಿತು. ಕೋರ್ಟ್ ಸಾಕ್ಷಿಗಾಗಿ ಈ ಅಥಿತಿಯನ್ನು ಕರೆಸಿಕೊಂಡಿತ್ತು. ಕೊನೆಯಲ್ಲಿ ಆ ಎರಡು ಮನೆಯವರು ಆ ಅಥಿತಿಯನ್ನೆ ದೂರಿದರು. ಆ ಅಥಿತಿಯಾಗಿದ್ದ ಮನುಷ್ಯ ಭಯದಿಂದ ಊರನ್ನೇ ಬಿಟ್ಟು ಹೋಗುವಂತಾಯಿತು.
ಇಲ್ಲಿ ಒಬ್ಬ ವ್ಯಕ್ತಿಯನ್ನು ದೂರಲು ಗುರುತಿಸಿದ್ದಲ್ಲ. ಅಂಥಹ ಸಂದರ್ಭವನ್ನು ಉಪಯೋಗಿಸಿಕೊಂಡು ಸಮಾಜದಲ್ಲಿ ಸ್ವಾಸ್ಥ್ಯ ಕೆಡಿಸುವ ಹುನ್ನಾರ ಸಾಕಷ್ಟಿದೆ. ಇತ್ತಿತ್ತಲಾಗೆ ರಾಜಕೀಯ ವಲಯದಲ್ಲಿ ಧರ್ಮರಾಜಕೀಯ ಬಹಳ ಕಾಣುತ್ತಿದ್ದೇವೆ. ಕೊಲೆಯಂಥ ಪ್ರಕರಣಗಳು ದಿನೆದಿನೆ ಹೆಚ್ಚುತ್ತಿದೆ. ಮನುಷ್ಯರಲ್ಲಿ ದ್ವೇಶಭಾವನೆ ಬೆಳೆಯುತ್ತಿದೆ. ಯಾಕೆ? ಕಾರಣ ಇಷ್ಟೆ, ಕೆಲವೊಂದಿಷ್ಟು ಜನ ತಮ್ಮ ಲಾಭಕ್ಕಾಗಿಯೋ, ಸ್ವಖುಷಿಗೋ, ನಾಲ್ಕು ಜನರ ಮುಂದೆ ತಾವು ಮುನ್ನೆಲೆಗೆ ಬರಬೇಕು ಎಂದೋ ಇನ್ನೊಂದು ಧರ್ಮ ಅಥವಾ ವ್ಯವಸ್ಥೆಯನ್ನು ಎತ್ತಿ ಆಡುವುದು. ತುಚ್ಛವಾಗಿ ಬಿಂಬಿಸುವುದು. ಒಂದು ಸಣ್ಣ ಕಿಡಿ ತಾಕಿಸಿಬಿಡುವುದು. ಅದು ಬೆಳೆದು ಹೆಮ್ಮರವಾಗಿ ಕಿಡಿ ಹಾಕಿದವರ ಕಂಟ್ರೋಲ್‌ಗೂ ಸಿಗದೇ ಹೊತ್ತಿ ಉರಿದುಬಿಡುತ್ತದೆ. ಯಾವಾಗ ತಮ್ಮ ಕಾಲ ಬುಡಕ್ಕೆ ಬೆಂಕಿ ತಾಕುವುದೋ ಆಗ ಸಂಧಾನ ಎಂದು ಓಡುವುದು. ಇದರಲ್ಲಿ ಜೀವ ಬಲಿ, ಜೀವನ ಬಲಿ ಆಗುತ್ತಿರುವುದು ದುರಂತವೇ ಸರಿ. ಆ ದುರಂತಕ್ಕೆ ಹೊಣೆ ಹೊರಬೇಕಾದವರು ಕಾಣಸಿಗುವುದೇ ಇಲ್ಲ.
ಹೋರಾಟ ಇರಬೇಕು, ತಪ್ಪಿದ್ದಲ್ಲಿ ಪ್ರತಿರೋಧಿಸಲೇ ಬೇಕು. ಇದು ತಪ್ಪು ದಾರಿ ಎಂದು ಬೆರಳು ಮಾಡಿ ತೋರಿಸಬೇಕು. ಅದರ ಜೊತೆ ಸರಿ ಯಾವುದು ಎನ್ನುವ ಸ್ಪಷ್ಟ ಕಲ್ಪನೆಯನ್ನೂ ನೀಡಬೇಕು. ಅದರ ಬದಲಾಗಿ ಋಣಾತ್ಮಕ ಸಂಗತಿಗಳಿಗೆ ಪ್ರಚೋದನೆಯನ್ನು ನೀಡಿ, ತಮ್ಮ ಕೆಟ್ಟ ಮನಸ್ಸನ್ನು ಹರಿಬಿಟ್ಟು ಎಲ್ಲರ ಮನಸ್ಸನ್ನು ಕೊಳಕು ನಾರುವಂತೆ ಮಾಡಿ ರಾಡಿ ಎಬ್ಬಿಸುವುದಲ್ಲ. ಒಬ್ಬ ಮನುಷ್ಯನ ಯೋಚನೆಯೇ ಅವನ ಜೀವನದ ಸಾಧಕ ಬಾಧಕವನ್ನು ಸಮಾಜ ಗುರುತಿಸುವುದು. ಸ್ವಾಮಿ ವಿವೇಕಾನಂದರನ್ನು ಕಂಡಿದ್ದೇವೆ. ಬಿನ್‌ಲಾಡೆನ್‌ನಂತವನನ್ನು ಕಂಡಿದ್ದೇವೆ. ಇಬ್ಬರೂ ಮನುಷ್ಯರೆ. ಆದರೆ ಅವರ ಯೋಚನಾ ಶಕ್ತಿ, ತನ್ನವರನ್ನು ಮುಂದೆ ನಡೆಸಿಕೊಂಡು ಹೋಗುವ ಮಾರ್ಗ, ತನ್ನನ್ನು ಸಮಾಜಕ್ಕೆ ಒಡ್ಡಿಕೊಂಡ ರೀತಿ ಎಲ್ಲವೂ ಭಿನ್ನವಾಗಿದೆ. ಹಾಗಾಗಿ ನಾವು ಯೋಚಿಸುವುದು ಕೇವಲ ಮೇಲ್ಮಟ್ಟದ ಬುದ್ದಿಯಿಂದ ಅಲ್ಲ. ಮನಸ್ಸು ಒಪ್ಪುವಂಥದ್ದು. ನಮ್ಮೊಟ್ಟಿಗೆ ನಮ್ಮವರು ಬದುಕಲು, ಜೀವಿಸಲು, ಸ್ವಚ್ಛಂದವಾಗಿ ಪ್ರಕೃತಿಯನ್ನು ನೋಡಲು ಸಾಧ್ಯವಾಗುವಂತ ಪರಿಸರವನ್ನು ಕಟ್ಟಿಕೊಡುವ ಕೆಲಸ ಆದರೆ ಅದು ಅತ್ಯುತ್ತಮ. ವಿಧಿಯ ಮೂಲಕ, ಪ್ರಕೃತಿಯ ಮೂಲಕ ಬದುಕಿನಲ್ಲಿ ಆಗುವ ಏರು ಪೇರುಗಳು ಬೇರೆ. ಆದರೆ ನಾವೇ ನಮ್ಮ ಹಣೆಬರಹವನ್ನು ಬರೆದುಕೊಳ್ಳುವ ಕೆಲವು ಅಂಶಗಳನ್ನು ತುಂಬಾ ಎಚ್ಚರಿಕೆಯಲ್ಲಿ ನಿರ್ವಹಿಸಬೇಕಿದೆ.
- * * * -