ಪುಟ್ಟರಾಜ ಗವಾಯಿಗಳ ಸೇವೆಯನ್ನು ಸರ್ಕಾರ ಪರಿಗಣಿಸಲಿ : ಸಿದ್ಧೇಶ್ವರ ಮಹಾಸ್ವಾಮಿಗಳು
ಕೊಪ್ಪಳ 13: ಸಂಗೀತಕ್ಕೆ ಶತಮಾನಗಳ ಇತಿಹಾಸವಿದೆ. ಸಂಗೀತಕ್ಕೆ ಕ್ಷೇತ್ರಕ್ಕೆ ಹಲವು ಮಹನೀಯರ ಸೇವೆ ಕೊಡುಗೆ ಅಪಾರವಿದೆ. ಈ ಸಾಲಿನಲ್ಲಿ ಗದಗನ ವೀರೇಶ್ವರ ಪುಣ್ಯಾಶ್ರಮದ ಸ್ಥಾಪನೆಗೆ ಹಾನಗಲ್ ಕುಮಾರಸ್ವಾಮಿಗಳು, ಪಂಡಿತ ಪಂಕ್ಷಾಕರಿ ಗವಾಯಿಗಳು ಹಾಗೂ ಪುಟ್ಟರಾಜ ಗವಾಯಿಗಳ ಸೇವೆ ಅತ್ಯಂತ ಅಮೂಲ್ಯವಾದದ್ದು, ಅಂಧರ ಬಾಳಲ್ಲಿ ಬೆಳಕು ತುಂಬುವ ಕಾಯಕಕ್ಕೆ ಗವಾಯಿಗಳು ಶ್ರಮಿಸಿದ್ದಾರೆ. ಆದರೆ ಇಂತಹ ಸೇವೆಯನ್ನು ಇದುವರೆಗೂ ಸರ್ಕಾರಗಳು ಪರಿಗಣಿಸಿಲ್ಲ. ಪುಟ್ಟರಾಜ ಗವಾಯಿಗಳಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಬೇಕಿತ್ತು, ಆದರೆ ಇದುವರೆಗೂ ಅದು ಆಗದಿರುವುದು ತೀವ್ರ ಖೇದಕರ ಸಂಗತಿ ಎಂದು ಮೈನಹಳ್ಳಿ ಹಿರೇಮಠದ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು ಕಳವಳ ವ್ಯಕ್ತಪಡಿಸಿದರು.
ಅವರು ನಗರದ ಶ್ರೀ ವೀರಮಹೇಶ್ವರ ಕ್ಷೇಮಾಭಿವೃದ್ಧಿ ಸಭಾಭವನದಲ್ಲಿ ಹಮ್ಮಿಕೊಂಡ ಡಾಽಽ ಪಂ.ಪುಟ್ಟರಾಜ ಹರಿಕಥಾ ಸಾಂಸ್ಕೃತಿಕ ಕಲಾ ಸಂಘದ 18ನೇ ವಾರ್ಷಿಕೋತ್ಸವ ಹಾಗೂ ಗುರುನಮನ ಸಂಗೀತ ಉತ್ಸವ ಹಾಗೂ ಧರ್ಮಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಅಂಧರ ಯಾರ ಮೇಲೂ ಆಧಾರವಾಗದೇ ತಮ್ಮ ಸ್ವಾಭಿಮಾನದ ಬದುಕು ನಡೆಸುವ ಮೂಲ ಉದ್ದೇಶದಿಂದ ಈ ವೀರೇಶ್ವರ ಪುಣ್ಯಾಶ್ರಮ ಹುಟ್ಟಿಕೊಂಡಿದ್ದು, ಇಂದು ಎಷ್ಟೋ ಅಂಧರ ಬಾಳಿನಲ್ಲಿ ಬೆಳಕು ತುಂಬಿದ ಕೀರ್ತಿ ಈ ಮಠಕ್ಕೆ ಸಲ್ಲುತ್ತದೆ. ಇಂತಹ ಮಹಾನೀಯರನ್ನು ಸರ್ಕಾರಗಳು ಗುರುತಿಸಿ ಅವರಿಗೆ ಸೂಕ್ತ ಗೌರವ ನೀಡಬೇಕಿದೆ. ಆದರೆ ಸರ್ಕಾರಗಳಿಗಿರುವ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ಸರ್ಕಾರಗಳು ಪುಟ್ಟರಾಜ ಗವಾಯಿಗಳ ಜಯಂತಿಯನ್ನು ಮಾಡುವ ಮನಸ್ಸು ಮಾಡಬೇಕು, ಅಂದಾಗ ಅವರ ಸೇವೆಯನ್ನು ಗೌರವಿಸುವಂತಾಗುತ್ತದೆ ಎಂದು ಹೇಳಿದರು.
ಬೆಂಗಳೂರಿನ ಉಪಕೃಷಿ ನಿರ್ದೇಶಕರಾದ ಸಹದೇವ ಯರಗೊಪ್ಪ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ವೀರೇಶ್ವರ ಪುಣ್ಯಾಶ್ರಮವು ಯಾವುದೇ ಜಾತಿ, ಮತ, ಬೇಧವಿಲ್ಲದೇ ಸಂಗೀತ ಕ್ಷೇತ್ರಕ್ಕೆ ತನ್ನ ಕೊಡುಗೆ ನೀಡುತ್ತಾ ಬಂದಿದೆ. ನಾನು ಕೂಡ ಗುರುಗಳ ಆತ್ಮೀಯರಲ್ಲಿ ಒಬ್ಬನಾಗಿ ಅವರ ವಾಣಿಯನ್ನು ಕೇಳಿದ್ದೇನೆ. ಇಲ್ಲಿನ ವೈಶಿಷ್ಠ್ಯವು ಇತರೆ ಮಠಗಳಿಗೆ ಮಾದರಿಯಾಗಿದೆ. ಕನ್ನಡದಲ್ಲಿರುವ ಬಸವ ಪುರಾಣವನ್ನು ಹಿಂದಿಗೆ ತರ್ಜುಮೆ ಮಾಡಿದ ಕಾಯಕಕ್ಕೆ ಅಂದಿನ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ ರವರು ಬಸವ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದ್ದರು ಎಂದು ಅವರೊಡನೆ ಕಳೆದ ಕ್ಷಳಗಳ ಕುರಿತು ನೆನಪುಗಳನ್ನು ಮೆಲುಕು ಹಾಕಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಉಪ ನಿರ್ದೇಶಕರ ಕಛೇರಿಯ ವಿಷಯ ಪರೀವೀಕ್ಷಕರಾದ ಗವಿಸಿದ್ದೇಶ್ವರಸ್ವಾಮಿ ಆರ್.ಬೆಣಕಲಮಠ ನೆರವೇರಿಸಿ ಮಾತನಾಡಿದರು. ವೇದಿಕೆ ಮೇಲೆ ಸಾಹಿತಿ ಜಿ.ಎಸ್.ಗೋನಾಳ, ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಶಿವಾನಂದಯ್ಯ ಕುಣಿಕೇರಿಮಠ, ಹಲಗೇರಿ ಗ್ರಾ.ಪಂ. ಕಾರ್ಯದರ್ಶಿ ದೊಡ್ಡನಗೌಡರ, ಕೊಪ್ಪಳದ ಪ್ರೌಢಶಾಲೆ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಶರಣಯ್ಯ ಸಸಿಮಠ, ಪ್ರಾಥಮಿಕ ಶಾಲಾ ತಾಲೂಕಾಧ್ಯಕ್ಷ ಹಳಿಬಸಯ್ಯ ಕೆ.ಎಂ.ಹಲಗೇರಾ, ಯುವ ಕವಿ ಗವಿಸಿದ್ದಪ್ಪ ಸರ್ದಾರ, ಗ್ರಾ.ಪಂ.ಸದಸ್ಯ ರವಿಚಂದ್ರ ದೇವರಮನಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪಂಪಯ್ಯಸ್ವಾಮಿ ಬನ್ನಿಮಠ, ಪಂ.ಶಂಕ್ರಯ್ಯ ಗವಾಯಿಗಳು, ಬಸಯ್ಯ ಮಹಾಂತಯ್ಯನ ಮಠ, ಹನುಮಗೌಡ್ರ ಪೊಲೀಸ್ ಪಾಟೀಲ್, ಜಿಲ್ಲಾ ವರದಿಗಾರರು ನಾಗರಾಜ ವೈ, ಶಿಕ್ಷಕರಾದ ಮುಸ್ತಫಾ ದಲಾಯತ್, ಸುರೇಶ ಕುಮಾರ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾರಂಭದಲ್ಲಿ ಪಂಡಿತ್ ಶಂಕ್ರಯ್ಯ ಗವಾಯಿ ಸ್ವಾಗತಿಸಿದರೆ, ಮಹಾಂತಯ್ಯ ಶಾಸ್ತ್ರಿ ಹಿರೇಬಗನಾಳ ಕಾರ್ಯಕ್ರಮ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಹುಬ್ಬಳ್ಳಿಯ ಗುರುಮಠ ಕಲ್ಲೂರ ಗಾಯಕರಾದ ಪಂಡಿತ ಶಂಕರಯ್ಯ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಪ್ರಸ್ತುತಪಡಿಸಿದರು. ಚೆನ್ನಯ್ಯ ರಾ್ಯವಣಕಿ, ಅಮೃತವರ್ಷಿಣಿ ಹುಲ್ಲೂರು, ಯಮನೂರ್ಪ ಬಿ.ಕೊಪ್ಪಳ ಇವರಿಂದ ಸುಗಮ ಸಂಗೀತ, ಮಹಾಂತಯ್ಯನಮಠ ಹಿರೇಬಗನಾಳ ಹಾಗೂ ಪುಟ್ಟರಾಜ ರಾ್ಯವಣಕಿ ಇವರಿಂದ ವಚನ ಸಂಗೀತ ಹಾಗೂ ಲೇಖನಾ, ಪುಟ್ಟರಾಜ ಇವರಿಂದ ಸಮೂಹ ಗೀತೆ ಪ್ರಸ್ತುತಪಡಿಸಲಾಯಿತು. ದಾವಣಗೇರೆಯ ಪುಣ್ಯಶ್ರಮ ಮಠದ ಸುರೇಶ ಕುಮಾರ ಕೊಪ್ಪಳ, ಎನ್.ಎಸ್.ಬಡಿಗೇರ ತಬಲಾ, ಕೀಬೋರ್ಡ್‌ನಲ್ಲಿ ರಾಮು ಕಂಪ್ಲಿ ಗಂಗಾವತಿ, ತಾಳದಲ್ಲಿ ಕೃಷ್ಣ ಸೊರಟೂರು ಇವರ ಪಾಲ್ಗೊಂಡಿದ್ದರು.