‘ಶಿಕ್ಷಕರಿಗೆ ಬೋಧಕೇತರ ಕೆಲಸಗಳ ಹೊರೆ ಕಡಿಮೆಯಾಗಲಿ’
ಧಾರವಾಡ 09: ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಶಿಕ್ಷಕ-ಶಿಕ್ಷಕಿಯರು ಪೂರ್ಣಕಾಲಿಕವಾಗಿ ತರಗತಿ ಬೋಧನೆಗೆ ತೊಡಗಿಕೊಳ್ಳುವಂತೆ ಶಿಕ್ಷಕರಿಗೆ ಬೋಧಕೇತರ ಕೆಲಸಗಳ ಹೊರೆ ಕಡಿಮೆ ಮಾಡಲು ಸರಕಾರ ಗಂಭೀರ ಚಿಂತನೆ ಮಾಡಬೇಕೆಂದು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಶ್ರೀಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿದರು.
ಅವರು ತಾಲೂಕಿನ ಅಮ್ಮಿನಬಾವಿ ಗ್ರಾಮದ ಶ್ರೀಶಾಂತೇಶ್ವರ ಪ್ರೌಢ ಶಾಲೆಯಲ್ಲಿ ಅಮ್ಮಿನಬಾವಿ, ಮರೇವಾಡ ಮತ್ತು ಕರಡಿಗುಡ್ಡ ಗ್ರಾಮಗಳ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ 1996-97ನೆಯ ಶೈಕ್ಷಣಿಕ ವರ್ಷದ ಹಳೆಯ ವಿದ್ಯಾರ್ಥಿಗಳು ರವಿವಾರ ಹಮ್ಮಿಕೊಂಡಿದ್ದ ಗುರುವಂದನಾ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಿದ್ದರು. ಶಾಲಾ ಅವಧಿಗಳಲ್ಲಿ ಶಿಕ್ಷಕರೆಲ್ಲರೂ ಬೋಧನಾ ಕೈಂಕರ್ಯಗಳಿಗೇ ತೆರೆದುಕೊಳ್ಳಲು ಒತ್ತಡರಹಿತ ಮುಕ್ತ ವಾತಾವರಣ ಶಾಲಾ ಅಂಗಳದಲ್ಲಿ ನಿರ್ಮಾಣವಾಗಬೇಕು ಎಂದರು.
ಡಿಡಿಪಿಐ ಎಸ್.ಎಸ್. ಕೆಳದಿಮಠ ಮಾತನಾಡಿ, ಹಳೆಯ ವಿದ್ಯಾರ್ಥಿಗಳು ತಾವು ವ್ಯಾಸಂಗ ಮಾಡಿದ ಶಾಲೆಗಳ ಕೊರತೆಗಳನ್ನು ನೀಗಿಸಲು ಸಂಘಟಿತ ಪ್ರಯತ್ನಗಳನ್ನು ಮಾಡಬೇಕು ಎಂದರು. ಕಾರ್ಯದರ್ಶಿ ಜಿ.ಎಂ. ಹಂಚಿನಾಳ, ಮುಖ್ಯಾಧ್ಯಾಪಕ ಎಂ.ವ್ಹಿ. ಅಂಗಡಿ ಅತಿಥಿಗಳಾಗಿದ್ದರು. ಪ್ರೌಢ ಶಾಲೆ ಆಡಳಿತ ಮಂಡಳಿ ಕಾರ್ಯಧ್ಯಕ್ಷ ಎಂ.ವ್ಹಿ. ಹೊಸೂರ ಅಧ್ಯಕ್ಷತೆವಹಿಸಿದ್ದರು.
ನಿವೃತ್ತ ಅಧ್ಯಾಪಕರುಗಳಾದ ಆರ್.ಎಸ್. ಗುಲಗಂಜಿಕೊಪ್ಪ ಹಾಗೂ ಗುರುಮೂರ್ತಿ ಯರಗಂಬಳಿಮಠ, ವಿದ್ಯಾರ್ಥಿಗಳಾದ ಗಿರಿಜಾ ಹಾರೀಬೀಡಿ, ಕೀರ್ತಿ ಆರಾಧ್ಯಮಠ, ಸುಜಾತಾ ನೆಲಗುಡ್ಡ, ಸುಮಂಗಲಾ ಕಂಪ್ಲಿ ಮಾತನಾಡಿದರು. ಸುರೇಶ ಬಳಿಗೇರ ಸ್ವಾಗತಿಸಿದರು. ಕಲ್ಪನಾ ಮುತಾಲಿಕದೇಸಾಯಿ ಹಾಗೂ ಎನ್. ಬಿ. ಅಮರಗೋಳ ನಿರೂಪಿಸಿದರು. ಮೌನೇಶ ಪತ್ತಾರ ವಂದಿಸಿದರು.
ಗುರುವಂದನೆ : ಎಸ್.ಎಲ್.ಎಮ್ಮಿ, ಎನ್.ಬಿ.ಪವಾರ, ಆರ್.ಎಸ್. ಗುಲಗಂಜಿಕೊಪ್ಪ, ಪುಷ್ಪಾ ಬಾಗಲವಾಡಿ, ವ್ಹಿ.ಬಿ. ಕೆಂಚನಗೌಡ್ರ, ಎಸ್.ವೈ ಪೂಜಾರ, ಸುಮನ್ ಬೋಂಗಾಳೆ, ಜಯಶ್ರೀ ಮಾಳಗಿ, ಎನ್.ಸಿ. ಪಾಟೀಲ, ಚಿ.ರಾ.ಪದಕಿ, ಎಸ್.ಎಸ್. ಅಂಗಡಿ, ತುಳಸಾ ಮುತಾಲಿಕದೇಶಪಾಂಡೆ, ಜೀಜಾಬಾಯಿ ಜಾಧವ, ಚಾಂದಬೀಬಿ ಬಡೇಖಾನವರ, ಗುರುಮೂರ್ತಿ ಯರಗಂಬಳಿಮಠ, ಐ.ಐ. ಮುಲ್ಲಾನವರ, ಪ್ರೇಮಾ ಗುಡಿ ಅವರನ್ನು ಗೌರವಿಸಿ ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸಿದರು. ಬಸವರಾಜ ಬೂದಿಹಾಳ, ಮಲ್ಲು ಹೊಟ್ಟಿ, ಮಂಜುನಾಥ ಮಠಪತಿ, ಮಹಾದೇವ ಗಾಣಿಗೇರ, ಮಲ್ಲಿಕಾರ್ಜುನ ಮೋರೆ, ಮಹೇಶ ಸಾಳುಂಕೆ, ಮಲ್ಲಿಕಾರ್ಜುನ ಹುಬ್ಬಳ್ಳಿ, ಪ್ರೇಮಾ ದುಂಡಿ ಇತರರು ಗುರುಗಳನ್ನು ಪರಿಚಯಿಸಿದರು.
ಇದೇ ಸಂದರ್ಭದಲ್ಲಿ ಮಾಜಿ ಸೈನಿಕರಾದ ಧರ್ಮೇಂದ್ರ ರಾಯನಗೌಡ್ರ, ಸುರೇಶ ಬಳಿಗೇರ, ಶಾಂತಯ್ಯ ಮಠಪತಿ, ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿರುವ ಕವಿತಾ ಕರ್ಕಿ ಅವರನ್ನೂ ಗೌರವಿಸಲಾಯಿತು.