ಆರೆಸ್ಸೆಸ್ , ತನ್ನ ಕೃತಿಯಲ್ಲೂ ಶಾಂತಿ, ಸಾಮರಸ್ಯಕ್ಕೆ ಬದ್ಧತೆ ಪ್ರದರ್ಶಿಸಲಿ: ಪಾಪ್ಯುಲರ್ ಫ್ರಂಟ್

ಬೆಂಗಳೂರು, ನ.8:    ಆರೆಸ್ಸೆಸ್ ತನ್ನ ಮೂಲಭೂತ ವೈಚಾರಿಕ ದಾಖಲೆಗಳನ್ನು ಹಿಂಪಡೆಯುವ ತನಕ ಮತ್ತು ತಮ್ಮ ಐತಿಹಾಸ ಪ್ರಮಾದಗಳಿಗಾಗಿ ಕ್ಷಮೆ ಕೋರುವ ವರೆಗೆ ಧಾರ್ಮಿಕ ಅಲ್ಪಸಂಖ್ಯಾತರ ವಿಶ್ವಾಸವನ್ನು ಗಳಿಸಲು ಸಾಧ್ಯವಿಲ್ಲ ಎಂದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಮುಹಮ್ಮದ್ ಅಲಿ ಜಿನ್ನಾ ಹೇಳಿದ್ದಾರೆ. ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯವು ಮುಸ್ಲಿಮರ ಗುಂಪೊಂದರ ಜೊತೆ ಆಯೋಜಿಸಿದ್ದ  ಸಭೆಯಲ್ಲಿ ಆರೆಸ್ಸೆಸ್ ನಾಯಕರು ಕೆಲವೊಂದು ಭರವಸೆಗಳನ್ನು ನೀಡಿದ್ದಾರೆ. ಆರೆಸ್ಸೆಸ್ ಭಾರತೀಯ ಮುಸ್ಲಿಮರಿಗೆ ಕೋಮು ಸೌಹಾರ್ದ ಮತ್ತು ನ್ಯಾಯಾಂಗದ ಗೌರವದ ಕುರಿತು ಪಾಠ ಹೇಳುವ ಯಾವುದೇ ನೈತಿಕತೆಯನ್ನು ಹೊಂದಿಲ್ಲ. ಯಾಕೆಂದರೆ, ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸುವ ಕುರಿತು ಮುಸ್ಲಿಮರು ಯಾವುದೇ ಇತಿಹಾಸವನ್ನು ಹೊಂದಿಲ್ಲ ಎಂದೂ ಅವರು ಹೇಳಿಕೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.    ಆರೆಸ್ಸೆಸ್ ನಾಯಕರು ಮುಸ್ಲಿಮರಲ್ಲಿ ಬಾಬರಿ ಮಸ್ಜಿದ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವೀಕರಿಸುವಂತೆ ಮತ್ತು ಶಾಂತಿ ಹಾಗೂ ಸೌಹಾರ್ದ ಕಾಪಾಡುವಂತೆ ಪದೇ ಪದೇ ಹೇಳುತ್ತಿದ್ದಾರೆ. ಶಾಂತಿ ಮತ್ತು ಕೋಮು ಸೌಹಾರ್ದದ ಎಲ್ಲಾ ಪ್ರಯತ್ನಗಳು ಎಲ್ಲಿಂದಲೇ ಆಗಿರಲಿ ಅದನ್ನು ಎಲ್ಲರೂ ಸ್ವಾಗತಿಸಲೇಬೇಕೆಂದು ಪಾಪ್ಯುಲರ್ ಫ್ರಂಟ್ ಬಲವಾಗಿ ನಂಬುತ್ತದೆ. ಅದೇ ವೇಳೆ ಆರೆಸ್ಸೆಸ್, ಬಾಬರಿ ಮಸ್ಜಿದ್ ಪ್ರಕರಣವನ್ನು ಈ ದುರಂತ ಮಟ್ಟದ ವರೆಗೆ ತಲುಪಿಸಲು ಆರೆಸ್ಸೆಸ್ ವಹಿಸಿದ ಪಾತ್ರವನ್ನು ಜನರು ಮರೆತು ಬಿಡಲಿ ಎಂದು ಇಚ್ಛಿಸುತ್ತಿದೆ ಎಂದು ಅನಿಸುತ್ತದೆ. ಡಿಸೆಂಬರ್ 6, 1992ರಂದು ಸಂಘಪರಿವಾರದ ವ್ಯಕ್ತಿಗಳೇ ಬಾಬರಿ ಮಸ್ಜಿದ್ ಅನ್ನು ಹಾಡಹಗಲೇ ಧ್ವಂಸಗೊಳಿಸಿದರು ಎಂಬ ವಿಚಾರವನ್ನು ಯಾರು ಕೂಡ ದೇಶದ ನೆನಪಿನಿಂದ ಅಳಿಸಲು ಸಾಧ್ಯವಿಲ್ಲ. ಕೇವಲ ಮುಸ್ಲಿಮರು ಮಾತ್ರವಲ್ಲ, ಬದಲಿಗೆ ಇಡೀ ದೇಶ ಮತ್ತು ಜನರ ವಿರುದ್ಧ ನಡೆದ ಈ ಸಂಘಟಿತ ಅಪರಾಧವು ಆಯೋಧ್ಯೆಯಲ್ಲಿ ಯಥಾಸ್ಥಿತಿ ಕಾಪಾಡುವ ಕೋರ್ಟ್ನ್ ಆದೇಶದ ಬಹಿರಂಗ ಉಲ್ಲಂಘನೆಯ ಮೂಲಕ ನಡೆಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ. ಆರೆಸ್ಸೆಸ್ ನಾಯಕರು ಮುಸ್ಲಿಮರ ಮುಂದೆ ನ್ಯಾಯಾಂಗ ಮತ್ತು ಕಾನೂನು ಸುವ್ಯವಸ್ಥೆಯನ್ನು ಗೌರವಿಸುವಂತೆ ಉಪನ್ಯಾಸ ನೀಡುತ್ತಿದ್ದಾರೆ. ಆದರೆ ಬಾಬರಿ ಮಸ್ಜಿದ್ ನ ಒಳಗಡೆ ಬಲವಂತದಿಂದ ಮತ್ತು ಅಕ್ರಮವಾಗಿ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಮತ್ತು ಬಾಬರಿ ಮಸ್ಜಿದ್ ಧ್ವಂಸಕ್ಕೆ ಮೊದಲು ಹಾಗೂ ನಂತರದಿಂದ ಈ ವರೆಗಿನ ಈ ಎಲ್ಲಾ ವರ್ಷಗಳಲ್ಲೂ ಮುಸ್ಲಿಮರು ಎಂದಿಗೂ ನ್ಯಾಯಾಂಗದ ಮೇಲೆ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ ಮತ್ತು ಅವರು ಇವತ್ತಿಗೂ ಅದೇ ನಂಬಿಕೆ ಹಾಗೂ ಭರವಸೆಯಲ್ಲಿ ದೃಢವಾಗಿದ್ದಾರೆ ಎಂಬುದನ್ನು ಅವರು ನೆನಪಿನಲ್ಲಿಟ್ಟುಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ. ಮುಸ್ಲಿಮರು ಮತ್ತು ತನ್ನ ನಡುವಿನ ಅಂತರವನ್ನು ಕಡಿಮೆಗೊಳಿಸಲು ಆರೆಸ್ಸೆಸ್ಗಿರುವ ಒಂದೇ ಹಾದಿಯೆಂದರೆ, ಅದು ತನ್ನ ಮೂಲಭೂತ ವಿಚಾರಧಾರೆ ಮತ್ತು ಹಿಂಸಾತ್ಮಕ ವಿಧಾನಗಳನ್ನು ಶಾಶ್ವತವಾಗಿ ತೊರೆಯಬೇಕು ಎಂದು ಅವರು ಒತ್ತಿ ಹೇಳಿದ್ದಾರೆ. ತಮ್ಮ ನಂಬಿಕೆ ಮತ್ತು ಗುರಿಯ ಪ್ರಕಾರ, ಭಾರತದಲ್ಲಿ ಮುಸ್ಲಿಮರು ಸ್ವತಃ ತಮ್ಮ ಸಮುದಾಯದ ಹೊರತಾಗಿ ಬಹುಸಂಖ್ಯಾತ ಸಮುದಾಯದೊಂದಿಗೆ ಸೌಹಾರ್ದಯುತ ಸಂಬಂಧಗಳನ್ನು ಬಲಪಡಿಸುವ ಮತ್ತು ಮೈತ್ರಿಯನ್ನು ಸ್ಥಾಪಿಸುವ ಹೊಣೆಗಾರಿಕೆಯನ್ನು ಹೊಂದಿರುತ್ತಾರೆ. ಆದುದರಿಂದ ಮುಸ್ಲಿಮ್ ನಾಯಕರು ಯಾವುದೇ ವರ್ಗದ ಮೂಲಕ ಇತರ ಸಮುದಾಯಗಳ ಜೊತೆಗೂಡಿ ಶಾಂತಿ ಮತ್ತು ಸಾಮರಸ್ಯಕ್ಕಾಗಿ ನಡೆಸುವ ಎಲ್ಲಾ ಪ್ರಯತ್ನಗಳನ್ನು ಸ್ವಾಗತಿಸಬೇಕು ಹಾಗೂ ಬೆಂಬಲಿಸಬೇಕಾಗಿದೆ. ಪ್ರಸಕ್ತ ಸನ್ನಿವೇಶದಲ್ಲಿ ಇದು ಅತ್ಯಂತ ಮಹತ್ವದ ಹೆಜ್ಜೆಯಾಗಿದೆ ಮತ್ತು ಎಲ್ಲಾ ಜನರೊಂದಿಗೂ ಮಾತುಕತೆಯ ಹಾದಿಯನ್ನು ಮುಕ್ತವಾಗಿರಿಸಬೇಕಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈ ಪ್ರಯತ್ನಗಳು ಲಾಭದಾಯಕವಾಗಬೇಕಾದರೆ, ದ್ವೇಷ ಮತ್ತು ಹಿಂಸಾಚಾರವನ್ನು ಬೋಧಿಸುವವರು ನ್ಯಾಯಸಮ್ಮತ ಮತ್ತು ಅಧಿಕಾರದೊಂದಿಗೆ ಸ್ವಯಂ ನೇಮಕಗೊಂಡು ತಾವು ಸಲಹೆಗಾರರ ಪಾತ್ರವನ್ನು ವಹಿಸಬಾರದು ಅನ್ನುವುದು ಮಹತ್ವ ವಿಚಾರವಾಗಿದೆ. ಒಂದು ವೇಳೆ ಕೇಂದ್ರ ಸರಕಾರ ಮತ್ತು ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯವು ಅಲ್ಪಸಂಖ್ಯಾತ ಸಮುದಾಯಗಳ ನಂಬಿಕೆಯನ್ನು ಗೆಲ್ಲುವ ವಿಚಾರದ ಬಗ್ಗೆ ಗಂಭೀರವಾಗಿದ್ದರೆ, ಅದು ಆರೆಸ್ಸೆಸ್ ನ ಸಾರ್ವಜನಿಕ ಸಂಪರ್ಕದ ಅಜೆಂಡಾವನ್ನು ಸುಗಮಗೊಳಿಸುವುದರ ಬದಲಿಗೆ ಅಲ್ಪಸಂಖ್ಯಾತರ ಅಸ್ತಿತ್ವ ಮತ್ತು ಅಭಿವೃದ್ಧಿಯ ವಿಚಾರದ ಕಡೆಗೆ ಗಮನಹರಿಸುವ ಅಗತ್ಯವಿದೆ ಎಂದು ಮುಹಮ್ಮದ್ ಅಲಿ ಜಿನ್ನಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.