ಲೋಕದರ್ಶನ ವರದಿ
ಬೆಳಗಾವಿ 02: ಕನ್ನಡ ಭಾಷೆ ಜಗತ್ತಿನ ಪ್ರಾಚೀನ ಭಾಷೆಗಳಲ್ಲಿ ಒಂದಾಗಿದ್ದು, ಅದು ತನ್ನದೇ ಆದ ಸಾಹಿತ್ಯಿಕ ಪರಂಪರೆಯನ್ನು ಹೊಂದಿದೆ. ಮಾತೃ ಭಾಷೆ ಶಿಕ್ಷಣದ ಮಾದ್ಯಮವಾಗಿ ಉಪಜೀವನಕ್ಕೆ ದಾರಿದೀಪವಾಗಬೇಕು ಎಂದು ಪ್ರಾಚಾರ್ಯರಾದ ಪ್ರೊ. ಬಿ.ಎಸ್. ನಾವಿ ಅವರು ಸಂಗೊಳ್ಳಿ ರಾಯಣ್ಣ ಘಟಕ ಮಹಾವಿದ್ಯಾಲಯ ಸಭಾಂಗಣದಲ್ಲಿ ಜರುಗಿದ 64ನೇ 'ಕರ್ನಾಟಕ ರಾಜ್ಯೋತ್ಸವ' ಸಮಾರಂಭದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಡಾ. ನಾರಾಯಣ ನಾಯ್ಕ ಮಾತನಾಡುತ್ತಾ ಕನ್ನಡ ಭಾಷೆಯ ಪರಂಪರೆಯ ಮಹತ್ವದ ಬಗ್ಗೆ ತಿಳಿಸುತ್ತಾ, ವಿವಿಧ ಪ್ರಾಂತ್ರಗಳಲ್ಲಿ ಹರಿದು ಹಂಚಿಹೊಗಿದ್ದ ಕನ್ನಡ ನೆಲವನ್ನು ಒದಗೂಡಿಸುವ ಕಾಯಕದಲ್ಲಿ ತೊಡಗಿಸಿಕೊಂಡ ಮಹನೀಯರನ್ನು ಸ್ಮರಿಸುತ್ತಾ ಕರ್ನಾಟಕ ಏಕೀಕರಣದ ಸನ್ನಿವೇಶಗಳನ್ನು ಮೇಲುಕು ಹಾಕಿದರು.
ಕನ್ನಡ ಪ್ರಾಧ್ಯಾಪಕರಾದ ಡಾ. ಸಾವಕಾರ ಕಾಂಬಳೆ ಅವರು ಮಾತನಾಡುತ್ತಾ ಕನ್ನಡ ಭಾಷೆ ಕೇವಲ ಮಾತನಾಡುವ ಭಾಷೆಯಾಗಿರದೇ ಅದು ವ್ಯವಹಾರಿಕ ಹಾಗೂ ಆಡಳಿತ ಭಾಷೆಯಾದರೆ ಮಾತ್ರ ಆ ಭಾಷೆಯ ಅಸ್ಮೀತೆ ಸಾಧ್ಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ.ಬಿ.ಎಸ್. ನಾವಿ ಪ್ರತಿಯೊಂದು ಭಾಷೆ ತನ್ನದೇ ಆದ ಇತಿಹಾಸ ಪರಂಪರೆ ಸಾಹಿತ್ಯವನ್ನು ಹೊಂದಿರುತ್ತದೆ. ನಾವು ಮಾತೃ ಭಾಷೆ ಬಗ್ಗೆ ಅಭಿಮಾನ ಇರಬೇಕು ಹೊರತು ಭಾಷಾಂಧತೆ ಇರಬಾರದು. ಕನ್ನಡ ಜೊತೆಗೆ ಇತರ ಭಾಷೆಗಳನ್ನು ಗೌರವಿಸುವ ಮನೋಭಾವನೆ ಹೊಂದಿ ದೇಶದ ಐಕ್ಯತೆಯನ್ನು ಸಾಧಿಸುವಲ್ಲಿ ಶ್ರಮಿಸಬೇಕು ಎಂದು ತಿಳಿಸಿದರು.
ಸಮಾರಂಭದಲ್ಲಿ ಪ್ರೋ. ಬಾಲಾಜಿ ಆಳಂದೆರವರು ಅತಿಥಿಗಳನ್ನು ಸ್ವಾಗತಿಸಿದರು. ಡಾ. ಅರ್ಜುನ ಜಂಬಗಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಸಮಾರಂಭದಲ್ಲಿ ಕಾಲೇಜಿನ ಬೋಧಕ/ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಡಾ. ಮಲ್ಲೇಶ ದೊಡ್ಡಲಕ್ಕಣ್ಣವರ ವಂದಿಸಿದರು.