ಬೆಂಗಳೂರು, ಜ. 10 : ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲರ ಬಳಿಕ ಕಾಂಗ್ರೆಸ್ನಿಂದ ದೂರವಾಗಿರುವ ಲಿಂಗಾಯತ ಸಮುದಾಯದ ಬೆಂಬಲ ಮತ್ತೆ ಮರುಗಳಿಸಲು ಲಿಂಗಾಯತ ಸಮುದಾಯದ ಅಭ್ಯರ್ಥಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಸ್ಥಾನದ ಮೇಲೆ ಕಣ್ಣಿಟ್ಟಿರುವ ಮಾಜಿ ಸಚಿವ ಎಂ.ಬಿ.ಪಾಟೀಲ್ ಪರೋಕ್ಷವಾಗಿ ಮನದಿಂಗಿತ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗಾಯತ ಸಮುದಾಯದಂತೆ ಅನೇಕ ಸಮುದಾಯಗಳು ಕಾಂಗ್ರೆಸ್ ನಿಂದ ದೂರವಾಗಿವೆ. ರಾಜ್ಯದಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲ ಸಮುದಾಯಗಳ ವಿಶ್ವಾಸ ಪಡೆಯುವುದು ಅಗತ್ಯವಿದೆ. ಹೀಗಾಗಿ ಕೆಪಿಸಿಸಿ ಸಾರಥ್ಯ ನೇಮಕ ಯಾವ ರೀತಿಯಲ್ಲಿ ನಡೆದರೆ ಪಕ್ಷಕ್ಕೆ ಅನುಕೂಲವಾಗಲಿದೆ ಎಂಬ ಬಗ್ಗೆ ಎಐಸಿಸಿ ನಾಯಕಿ ಸೋನಿಯಾ ಗಾಂಧಿಯವರಿಗೆ ಸಲಹೆ ನೀಡಲಾಗಿದೆ. ನನ್ನನ್ನೇ ಆಯ್ಕೆ ಮಾಡಿ ಎಂದು ಎಂದಿಗೂ ಲಾಬಿ ಮಾಡಿಲ್ಲ ಎಂದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಿದ್ದರಾಮಯ್ಯ ತಮ್ಮ ಪರವಾಗಿಯೋ ಮತ್ತಿನ್ಯಾರ ಪರವಾಗಿಯೋ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆಂಬುದು ಗೊತ್ತಿಲ್ಲ. ಸಿದ್ದರಾಮಯ್ಯ ಅವರಿಲ್ಲದ ಕಾಂಗ್ರೆಸ್ಗೆ ಕಷ್ಟ ಕಟ್ಟಿಟ್ಟ ಬುತ್ತಿ. ಸದ್ಯಕ್ಕೆ ಅವರನ್ನು ಬಿಟ್ಟು ಪಕ್ಷ ಕಟ್ಟುವುದು ಕಷ್ಟ.
ಸಿದ್ದರಾಮಯ್ಯ ಅವರ ನಾಯಕತ್ವ, ಖರ್ಗೆಯವರ ಸಲಹೆ ಹಾಗೂ ಎಲ್ಲ ಸಮುದಾಯದ ನಾಯಕರನ್ನು ಒಳಗೊಂಡಿರುವಂತೆ ಸ್ಥಾನಗಳನ್ನು ನೀಡಬೇಕು ಎಂದರು.
ರಾಜ್ಯದಲ್ಲಿ ಲಿಂಗಾಯಿತ ಸಮುದಾಯಕ್ಕೆ ಶೇ. 16 ರಷ್ಟು ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡುವಂತೆ ಎಂ.ಬಿ.ಪಾಟೀಲ್ ಸರ್ಕಾರವನ್ನು ಒತ್ತಾಯಿಸಿದರು. ಮೀಸಲಾತಿ ಹೆಚ್ಚಳದಿಂದ ಬಡ ಲಿಂಗಾಯಿತ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ. ಮೀಸಲಾತಿ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ. ಮಹಾರಾಷ್ಟ್ರದಲ್ಲಿ ಮರಾಠಿಗರಿಗೆ ಮೀಸಲಾತಿ ಕೊಟ್ಟಿದ್ದಾರೆ. ಅದೇ ಮಾದರಿಯಲ್ಲೇ ರಾಜ್ಯದಲ್ಲೂ ಲಿಂಗಾಯಿತರು ಮನವಿ ಸಲ್ಲಿಸಿದ್ದಾರೆ ಎಂದು ಎಂ.ಬಿ.ಪಾಟೀಲ್ ಹೇಳಿದರು.