ಡಿಪಿಟಿ, ಟಿಡಿ ಲಸಿಕೆ ಎಲ್ಲಾ ಮಕ್ಕಳಿಗೂ ತಲುಪಲಿ: ಸಮಿತಿ ಸದಸ್ಯ ಕಾರ್ಯದರ್ಶಿಯಾದ ಡಾ. ರಾಮಾಂಜನೇಯ

ಕೊಪ್ಪಳ 04: ಡಿಪಿಟಿ ಲಸಿಕೆಯನ್ನು ಒಂದು ಮತ್ತು ಎರಡನೇ ತರಗತಿ ಮಕ್ಕಳಿಗೆ ಹಾಗೂ ಮೂರರಿಂದ ಹತ್ತನೇ ತರಗತಿ ಮಕ್ಕಳಿಗೆ ಟಿಡಿ ಲಸಿಕೆಯನ್ನು ಹಾಕಲಾಗುವುದು. ಈ ಲಸಿಕೆ ಹಾಕಿಸುವುದರಿಂದ ಡಿಪ್ತೀರಿಯಾ (ಗಂಟಲು ಮಾರಿ) ಎಂಬ ಭಯಾನಕ ರೋಗ ತಡೆಗಟ್ಟಬಹುದು ಎಂದು ತಾಲೂಕಾ ಆರೋಗ್ಯಾಧಿಕಾರಿ ಮತ್ತು ಸಮಿತಿ ಸದಸ್ಯ ಕಾರ್ಯದರ್ಶಿಯಾದ ಡಾ. ರಾಮಾಂಜನೇಯ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಪ್ಪಳ ತಾಲ್ಲೂಕಾ ಆರೋಗ್ಯಾಧಿಕಾರಿಗಳ ಕಾಯರ್ಾಲಯ, ಐ.ಇ.ಸಿ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಿಪಿಟಿ ಮತ್ತು ಟಿಡಿ ಲಸಿಕಾ ಅಭಿಯಾನ ಕುರಿತು ತಾಲ್ಲೂಕಾ ಮಟ್ಟದ ಜಾಗೃತ ಸಮಿತಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಅಭಿಯಾನವು ಡಿ. 11ರಿಂದ 31 ರವರೆಗೆ ಒಟ್ಟು ಮೂರು ವಾರಗಳವರೆಗೆ ನಡೆಯುವುದು. ನಮ್ಮ ತಾಲ್ಲೂಕಿನಲ್ಲಿ 5 ರಿಂದ 6 ವರ್ಷದೊಳಗಿನ ಒಟ್ಟು ಡಿಪಿಟಿ ಮಕ್ಕಳು 14,142 ಹಾಗೂ 7 ರಿಂದ 16 ವರ್ಷದೊಳಗಿನ ಟಿಡಿ ಮಕ್ಕಳು 71,142 ಇದ್ದು, ಶಾಲಾ ಮಕ್ಕಳಿಗಾಗಿ 430 ತಂಡಗಳು, ಅಂಗನವಾಡಿ ಮಕ್ಕಳಿಗಾಗಿ 255 ತಂಡಗಳು ಹಾಗೂ ಶಾಲೆಯಿಂದ ಹೊರಗೆ ಉಳಿದ ಮಕ್ಕಳಿಗಾಗಿ 29 ತಂಡಗಳನ್ನು ರಚಿಸಿ ಒಟ್ಟು 706 ತಂಡಗಳು ಈ ಅಭಿಯಾನದಲ್ಲಿ ಕಾರ್ಯನಿರ್ವಹಿಸುತ್ತವೆ. ಡಿಪಿಟಿ ಮತ್ತು ಟಿಡಿ ಲಸಿಕೆ ಹಾಕಿಸುವುದರಿಂದ ಡಿಪ್ತೀರಿಯಾ (ಗಂಟಲು ಮಾರಿ) ಎಂಬ ಭಯಾನಕ ರೋಗ ತಡೆಗಟ್ಟಬಹುದು ಎಂದು ತಿಳಿಸಿದರು.

ಮೊದಲು ಎರಡು ವಾರ ಶಾಲೆಗಳಲ್ಲಿ ಡಿಪಿಟಿ ಮತ್ತು ಟಿಡಿ ಲಸಿಕೆ ಹಾಕಲಾಗುವುದು. ನಂತರ ಮೂರನೇ ವಾರದಲ್ಲಿ  ಅಂಗನವಾಡಿ ಮಕ್ಕಳಿಗೆ ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಲಸಿಕೆ ಹಾಕಲಾಗುವುದು. ಲಸಿಕೆ ಹಾಕಿಸಲು ಎಲ್ಲಾ ಇಲಾಖೆಯವರು, ಸಂಘ ಸಂಸ್ಥೆಗಳವರು ಸಹಕರಿಸಬೇಕು. ಸರಕಾರಿ ಶಾಲೆಗಳಲ್ಲದೇ ಎಲ್ಲಾ ಖಾಸಗಿ ಶಾಲೆಯ ಮುಖ್ಯಸ್ಥರು ಮುಂಚಿತವಾಗಿ ಪಾಲಕರ ಸಭೆ ನಡೆಸಿ ಪಾಲಕರಿಗೆ ಲಸಿಕೆಯ ಪ್ರಯೋಜನದ ಬಗ್ಗೆ ತಿಳಿ ಹೇಳಬೇಕು.  ಒಂದು ಮಗು ಕೂಡಾ ಲಸಿಕೆಯಿಂದ ವಂಚಿತವಾಗದಂತೆ ಕ್ರಮವಹಿಸಬೇಕು. ತಾಲ್ಲೂಕಿನಲ್ಲಿರುವ ತಹಶೀಲ್ದಾರರು ಡಿಪಿಟಿ ಮತ್ತು ಟಿಡಿ ಕಾರ್ಯಕ್ರಮ ನೂರಕ್ಕೆ ನೂರರಷ್ಟು ಸಾಧನೆ ಮಾಡಲು ಎಲ್ಲರೂ ಕೈ ಜೋಡಿಸಬೇಕು. ಮಾಧ್ಯಮ ಮಿತ್ರರು ಈ ಲಸಿಕೆ ಕುರಿತು ಹೆಚ್ಚು ಪ್ರಚಾರವಾಗುವಂತೆ ಎಲ್ಲಾ ಸಾರ್ವಜನಿಕರಿಗೆ ಲಸಿಕೆಯ ಬಗ್ಗೆ ತಿಳಿಯಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರರಾದ ಜೆ.ಬಿ.ಮಜ್ಗಿ ವಹಿಸಿದ್ದರು. ತಾಲ್ಲೂಕಾ ಹಿರಿಯ ಆರೋಗ್ಯ ಸಹಾಯಕರಾದ ಎಸ್.ಬಿ. ಚಿಕ್ಕನರಗುಂದ ಸ್ವಾಗತಿಸಿದರು. ಬಿ.ಹೆಚ್.ಇ.ಓ. ಗಂಗಮ್ಮ ವಂದಿಸಿದರು.