ತಿಮ್ಮಾಪೂರ ಜ್ಞಾನಜ್ಯೋತಿ ವಿದ್ಯಾಲಯದ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಆಹಾರ ಮೇಳ
ಉಪ್ಪಿನಬೆಟಗೇರಿ 10: ಬೇಕರಿ ಉತ್ಪನ್ನಗಳ ವಿಭಿನ್ನ ತಿಂಡಿ-ತಿನಿಸುಗಳ ಬದಲಾಗಿ ಮಕ್ಕಳಿಗೆ ಹೆಚ್ಚೆಚ್ಚು ಹಣ್ಣು-ತರಕಾರಿ ತಿನ್ನಲು ಕೊಡಬೇಕೆಂದು ಧಾರವಾಡ ಕೃಷಿ ವಿ.ವಿ. ಪ್ರಾಧ್ಯಾಪಕ ಡಾ. ಸದಾನಂದ ಹಿರೇಮಠ ವಿದ್ಯಾರ್ಥಿಗಳ ಪಾಲಕರು ಮತ್ತು ಪೋಷಕರಲ್ಲಿ ಮನವಿ ಮಾಡಿದರು.
ಅವರು ಹತ್ತಿರದ ಧಾರವಾಡ ತಾಲೂಕು ತಿಮ್ಮಾಪೂರ ಜ್ಞಾನಜ್ಯೋತಿ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಆಹಾರ ಮೇಳ ಉದ್ಘಾಟಿಸಿ ಮಾತನಾಡುತ್ತಿದ್ದರು. ದೇಸಿ ಕೃಷಿ ಪದ್ಧತಿ ಅನುಸರಿಸಿ ಬೆಳೆದ ಧಾನ್ಯಗಳ ಸೇವನೆಯಿಂದ ವಿದ್ಯಾರ್ಥಿಗಳ ಆರೋಗ್ಯ ಸಂವರ್ಧಿಸುತ್ತದೆ. ತನ್ಮೂಲಕ ವಿದ್ಯಾರ್ಜನೆಗೆ ಅಗತ್ಯವಾದ ಸ್ಮರಣಶಕ್ತಿಯೂ ವಿಕಾಸವಾಗುತ್ತದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಕೃಷಿ ವಿ.ವಿ. ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನದ ತಜ್ಞೆ ಡಾ.ಪಲ್ಲವಿ ಟಿ. ಮಾತನಾಡಿ, ಪಠ್ಯಾಧಾರಿತ ಕಲಿಕಾ ಚಟುವಟಿಕೆಗಳನ್ನು ಹಮ್ಮಿಕೊಂಡಾಗ ವಿದ್ಯಾರ್ಥಿಗಳಲ್ಲಿ ಪ್ರಾಯೋಗಿಕ ನೆಲೆಯಲ್ಲಿ ವಿಷಯ ಜ್ಞಾನ ಹೆಚ್ಚುತ್ತದೆ ಎಂದರು.
ಅತಿಥಿಗಳಾಗಿದ್ದ ಅಮ್ಮಿನಬಾವಿ ಯುಕೋ ಬ್ಯಾಂಕ್ ಪ್ರಬಂಧಕ ಶಂಕರ ಕಡ್ಲಿಮಟ್ಟಿ ಮತ್ತು ಸಿಆರ್ಪಿ ಬಸವರಾಜ ಕುರಗುಂದ ಮಾತನಾಡಿದರು. ವಿದ್ಯಾಚೇತನ ಶಿಕ್ಷಣ ಸಮಿತಿ ನಿರ್ದೇಶಕ ಮೃತ್ಯುಂಜಯ ಹಿರೇಮಠ ಅಧ್ಯಕ್ಷತೆವಹಿಸಿದ್ದರು. ಶಾಲೆಯ ಮುಖ್ಯಾಧ್ಯಾಪಕಿ ಬಿಂದು ಲಗಳಿ ವಂದಿಸಿದರು.