ಮಹಾಲಿಂಗಪುರ 25: ತಾಂತ್ರಿಕ ವಿಭಾಗದ ವಿದ್ಯಾರ್ಥಿಗಳು ಕೇವಲ ನೌಕರಿ ಹಿಡಿಯುವ ಹುನ್ನಾರಿಗಿಂತ ಉದ್ಯಮಿಯಾಗಿ ಉದ್ಯೋಗ ನೀಡುವ ಉತ್ಸಾಹ ತೋರಲಿ ಎಂದು ಉಪನ್ಯಾಸಕ ಶಿವಲಿಂಗ ಸಿದ್ನಾಳ ಹೇಳಿದರು.
ಸ್ಥಳೀಯ ಕೆಎಲ್‌ಇ ಸಂಸ್ಥೆಯ ಬಿಸಿಎ ಪದವಿ ವಿಭಾಗದಲ್ಲಿ ಹಮ್ಮಿಕೊಂಡಿದ್ದ ಅಧ್ಯಾಯ ಎಂಬ ಮೊದಲ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕೀಳರಿಮೆಯಿಂದ ಹೊರಬಂದು ಆತ್ಮವಿಶ್ವಾಸದಿಂದ ಗೆಲುವಿನ ಹಾದಿಯಲ್ಲಿ ಮೈಲುಗಲ್ಲಾಗಿ ನಿಲ್ಲಬೇಕು. ಕಾಲೇಜಿನಲ್ಲಿ ಪಡೆದ ತಾಂತ್ರಿಕ ವಿದ್ಯೆಯನ್ನು ನೌಕರಿಗಾಗಿ ಮಾರಿಕೊಳ್ಳದೇ ಅದನ್ನೇ ಬಳಸಿಕೊಂಡು ಸ್ವಂತ ಉದ್ಯಮ ಸ್ಥಾಪಿಸಿದರೆ ನೂರಾರು ಜನರಿಗೆ ಉದ್ಯೋಗ ಕೊಡುವ ಉದ್ಯೋಗದಾತ ಆಗಬಹುದು. ದೇಶದ ಆರ್ಥಿಕಗೆ ಆಸ್ತಿಯೂ ಆಗಬಹುದು ಎಂದರು.
ಇದಕ್ಕೂ ಮುನ್ನ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಪ್ಯಾನ್ ಇಂಡಿಯಾ ಸಿನಿಮಾ ಟೈಟಲ್ ಮೀರಿಸುವಂತೆ ತಮ್ಮ ಕಾರ್ಯಕ್ರಮದ ಬ್ಯಾನರ್ ಸಿದ್ದಪಡಿಸುವ ಮೂಲಕ ವಿದ್ಯಾರ್ಥಿಗಳು ತಮ್ಮ ಸೃಜನಶೀಲತೆ ಮೆರೆದಿದ್ದು ಗಮನ ಸೆಳೆಯಿತು. ನಿತ್ಯ ಸೂಟು, ಬೂಟು, ಕೋಟು ಧರಿಸಿ ಸಮವಸ್ತ್ರದಲ್ಲಿ ಬರುತ್ತಿದ್ದ ವಿದ್ಯಾರ್ಥಿಗಳು ಕಾರ್ಯಕ್ರಮದ ದಿನ ಟ್ರೆಡಿಶನಲ್ ಆಗಿ ಕೊಂಚ ಎಡಿಶನಲ್ ಆಗಿ ಮಿಂಚುತ್ತಿದ್ದರು. ನಂತರ ಹಾಡು, ನೃತ್ಯ ಸೇರಿದಂತೆ ನಾನಾ ಟಾಸ್ಕ್ ಆಯೋಜಿಸಿ ಸಂಭ್ರಮಿಸಿದರು. ನಂತರ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿವರ್ಗದವರು ಬಾಲೂಷಾ, ಮಸಾಲೆ ರೈಸ್ ಮತ್ತು ಮಸಾಲೆ ಮಜ್ಜಿಗೆ ಸವಿದರು. ಸಹಚರರೊಂದಿಗೆ ಸೆಲ್ಫಿಗೆ ಶರಣಾದರು.
ಬಿಸಿಎ ವಿಭಾಗದ ಸಂಯೋಜಕ ಪ್ರೋ. ಎಸ್.ಐ.ಪಾಟೀಲ, ಎ.ಆರ್.ಉರಬಿ, ವಿನಾಯಕ ಬಡಿಗೇರ, ಸುಮಾ ಕೆ, ಆರ್.ಎಸ್.ಪೂಜಾರಿ, ಐ.ಸಿ.ಶಿರೋಳ, ಪಿ.ಎಂ.ಗೌಳಿ, ಸಿ.ಎಂ.ಐಗಳಿ, ಪ್ರವೀಣ ಅಥಣಿ, ಅಶ್ವಿನಿ ಲಟ್ಟಿ, ಪಿ.ಎಸ್.ಹಿಪ್ಪರಗಿ ಇದ್ದರು.