ಗದಗ 26: ವಿದ್ಯಾರ್ಥಿಗಳು ಪಠ್ಯಪುಸ್ತಕದ ಜೊತೆಗೆ ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಂಡು ರಾಜ್ಯ ರಾಷ್ಟ್ರಾದ್ಯಂತ ನಡೆಯುವ ವಿಚಾರಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಶಾಲೆಯ ಮುಖ್ಯೋಪಾಧ್ಯಾಯರಾದ ಆಯ್.ಎಚ್. ಪನ್ನಮ್ಮನಹಳ್ಳಿ ಹೇಳಿದರು.
ಗದಗ ತಾಲೂಕಿನ ಮದಗಾನೂರ ಗ್ರಾಮದ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಏರ್ಪಡಿಸಿದ ಗ್ರಾಮ ಸಂಪರ್ಕ ಯೋಜನೆ ಅಡಿಯಲ್ಲಿ ಜಾನಪದ ಸಂಗೀತ ಮತ್ತು ಬೀದಿ ನಾಟಕದ ಮೂಲಕ ಸರ್ಕಾರದ ಯೋಜನೆಗಳ ಕುರಿತು ಜನ ಜಾಗೃತಿ ಮೂಡಿಸುವ ಕ್ಷೇತ್ರ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಲಪ್ರಭಾ ಸಾಂಸ್ಕೃತಿಕ ಕಲಾ ತಂಡ ಕೊಣ್ಣೂರು ಬೀದಿ ನಾಟಕ ಮತ್ತು ಗಾನತರಂಗ ಸಾಂಸ್ಕೃತಿಕ ಹಾಗೂ ಗ್ರಾಮೀಣ ಅಭಿವೃದ್ಧಿ ಮಾದಿಗರ ಸಂಸ್ಥೆ ಅಸುಂಡಿ ಜಾನಪದ ಸಂಗೀತ ತಂಡದವರು ಶಾಲೆಯ ಸ್ವಚ್ಛತೆ ಹಾಗೂ ಸರಕಾರದ ಯೋಜನೆಗಳ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮಗಳನ್ನು ಪ್ರಸ್ತುತಿಸಿದರು.
ಇದೇ ಸಂದರ್ಭದಲ್ಲಿ ಶಾಲೆಯ ಸಹಶಿಕ್ಷಕರಾದ ಕೃಷ್ಣರೆಡ್ಡಿ ಇಬ್ರಾಹಿಂಪೂರ, ನಾಗೇಶ ಶೇಠ್, ಬಸವರಾಜ ಲಕ್ಕುಂಡಿ, ರಾಘವೇಂದ್ರ ಹನಮರ, ವಾರ್ತಾ ಇಲಾಖೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.