ಕಾರಾಗೃಹಗಳು ಪರಿವರ್ತನೆಯ ಆಗರಗಳಾಗಲಿ: ಮುಕುಂದರಾಜ
Let prisons be the gateways of transformation: Mukundaraja
ಬೆಳಗಾವಿ 19: 102 ವರ್ಷಗಳ ಇತಿಹಾಸವುಳ್ಳ ಬೆಳಗಾವಿ ಕೇಂದ್ರ ಕಾರಾಗೃಹದಲ್ಲಿ ದ.ರಾ.ಬೇಂದ್ರೆ, ಬಸವರಾಜ ಕಟ್ಟಿಮನಿ ಹಾಗೂ ವೀರ ಸಾವರ್‌ಕರ್ ಮತ್ತು ಇನ್ನೂ ಅನೇಕ ಸ್ವಾತಂತ್ರ್ಯ ಹೋರಾಟಗಾರರೂ ಕೆಲ ತಿಂಗಳುಕಾಲಈ ಕಾರಾಗೃಹದಲ್ಲಿ ಸೆರೆಮನೆವಾಸ ಅನುಭವಿಸಿದ್ದರು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್ ಎನ್ ಮುಕುಂದರಾಜ ಹೇಳಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಕೇಂದ್ರ ಕಾರಾಗೃಹ ಬೆಳಗಾವಿ ಇವರುಗಳ ಸಂಯುಕ್ತಾಶ್ರಯದಲ್ಲಿ ದಿ. 18ರಂದು ಏರಿ್ಡಸಲಾಗಿದ್ದ ಬೆಳಗಾವಿ ಕೇಂದ್ರ ಕಾರಾಗೃಹ ನಿವಾಸಿಗಳಿಗಾಗಿ ಸಾಹಿತ್ಯ ಕಮ್ಮಟ, ವಿಚಾರಗೋಷ್ಟಿ ಹಾಗೂ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರಾಗೃಹದಲ್ಲಿರುವ ನಿವಾಸಿಗಳಿಗೆ ಓದುವ ಕೌಶಲ್ಯ ಬೆಳೆಸಿ ಸಾಹಿತ್ಯದೆಡೆಗೆ ಸೆಳೆದು ಜ್ಞಾನ ಸಂಪಾದಿಸುವಂತೆ ಮಾಡಿ, ಬಿಡುಗಡೆ ನಂತರ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಮಾಡಲು ಸಾಹಿತ್ಯ ಅಕಾಡೆಮಿ ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಸಾಹಿತ್ಯ ಕಮ್ಮಟ, ವಿಚಾರಗೋಷ್ಟಿ ಹಾಗೂ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಕಾರಾಗೃಹಗಳ ಕೇವಲ ಶಿಕ್ಷೆ ಅನುಭವಿಸುವ ಸ್ಥಳಗಳಲ್ಲ ಅವು ಪರಿವರ್ತನೆಯ ಆಗರಗಳಾಗಬೇಕು ಎಂದು ಮುಕುಂದರಾಜ ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಳಗಾವಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಅವರು ಮಾತನಾಡಿ ಸಾಹಿತ್ಯ ಎಂಬುದು ಕೇವಲ ಬರವಣಿಗೆಯಲ್ಲ, ಮನುಷ್ಯರಲ್ಲಿ ಪರಿವರ್ತನೆಯ ಶಕ್ತಿಯಾಗಿದೆ, ತಪ್ಪು ಮಾಡುವುದು ಮಾನವನ ಸಹಜ ಗುಣ ಆದರೆ ಮಾಡಿದ ತಪ್ಪನ್ನು ಪುನರಾವರ್ತಿಸದೇ ಉತ್ತಮ ಪ್ರಜೆಗಳಾಗಿ ಬಾಳಿರಿ. ಕಾರಾಗೃಹದಲ್ಲಿರುವ ಸಮಯವನ್ನು ಸದುಪಯೋಗಪಡಿಸಿಕೊಂಡು ಓದು, ಬರಹ, ಯೋಗ, ಧ್ಯಾನ ಹಾಗೂ ಧನಾತ್ಮಕ ಚಿಂತನೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬಿಡುಗಡೆಯ ನಂತರ ಸಮಾಜದಲ್ಲಿ ಹಾಗೂ ತಮ್ಮ ಕುಟುಂಬ ವರ್ಗದವರಿಗೆ ಸಾಹಿತ್ಯದ ಮಹತ್ವ ತಿಳಿಸಬೇಕು ಎಂದು ಹೇಳಿದರು.
ಹಿರಿಯ ಸಾಹಿತಿ ಸರಜೂ ಕಾಟ್ಕರ್ ಮಾತನಾಡಿ ಜೀವನದಲ್ಲಿ ಆಕಸ್ಮಿಕವಾಗಿ ಘಟಿಸಿದ ಘಟನೆಗೆ ಒಳಗಾಗಿ ತಾವೂ ಇಲ್ಲಿಗೆ ಬಂದಿರಬಹುದು. ಆದರೆ ಇದು ತಾತ್ಕಾಲಿಕ ಮಾತ್ರ. ಇಲ್ಲಿಂದ ಬಿಡುಗಡೆಯಾಗಿ ಹೋಗಲೇ ಬೇಕು. ಕಾರಣ ತಾವೂ ಭೂತಕಾಲದ ಬಗ್ಗೆ ಚಿಂತಿಸದೇ ತಮ್ಮ ಭಾವಿ ಜೀವನದ ಬಗ್ಗೆ ರುಪೂರೇಶೆಗಳನ್ನು ಹಾಕಿಕೊಳ್ಳಬೇಕು. ದಾನವನನ್ನು ಮಾನವನನ್ನಾಗಿಸುವ ಶಕ್ತಿ ಸಾಹಿತ್ಯಕ್ಕೆ ಇದೆ ಕಾರಣ ತಾವೆಲ್ಲ ಸಾಹಿತ್ಯ ಓದುವದನ್ನು ದಿನನಿತ್ಯದ ಚಟುವಟಿಕೆಗಳಲ್ಲಿ ಒಂದನ್ನಾಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕಾರಾಗೃಹದ ಪ್ರಭಾರಿ ಮುಖ್ಯ ಅಧೀಕ್ಷಕ ವಿ.ಕೃಷ್ಣಮೂರ್ತಿ ಇವರು ಮಾತನಾಡಿ ಕಾರಾಗೃಹ ಇಲಾಖೆಯು ನಿವಾಸಿಗಳಲ್ಲಿ ಅಡಗಿರುವ ಉತ್ತಮ ಕಲೆಗಳನ್ನು, ಕೌಶಲ್ಯಗಳಿಗೆ ಪ್ರೋತ್ಸಾಹ ನೀಡುತ್ತಿದ್ದು, ಅವರಿಗೆ ವಿವಿಧ ಕೌಶಲ್ಯ ತರಬೇತಿಗಳು ಮನಃಪರಿವರ್ತನೆಯ ಕಾರ್ಯಕ್ರಮಗಳು ಯೋಗ, ಧ್ಯಾನದಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇಂದಿನ ಕಾರ್ಯಕ್ರಮ ನಿವಾಸಿಗಳಲ್ಲಿ ಓದಿನ ಕೌಶಲ್ಯ ಹೆಚ್ಚಿಸುವಲ್ಲಿ ತುಂಬಾ ಉಪಯುಕ್ತವಾಗಿದೆ ಎಂದು ಹೇಳಿದರು.
ಕಾರಾಗೃಹದ ಸಿಬ್ಬಂದಿ ರಾಘವೇಂದ್ರ ಪೂಜಾರ ಹಾಗೂ ನಿವಾಸಿಗಳಾದ ಅರುಣಕುಮಾರ ಲಮಾಣಿ, ಮಹಾಂತೇಶ ಹೊಂಗಲ, ಪುಂಡಲೀಕ ಹಾಗೂ ಪ್ರಿಯಂಕಾ ಇವರುಗಳು ಸ್ವರಚಿತ ಕವನಗಳನ್ನು ವಾಚನ ಮಾಡಿದರು.
ವೇದಿಕೆಯಲ್ಲಿ ಕಾರಾಗೃಹದ ಮುಖ್ಯ ವೈದ್ಯಾಧಿಕಾರಿ ಸಂಜಯ ಡುಮ್ಮಗೋಳ, ಸಹಾಯಕ ಅಧೀಕ್ಷಕ ಮಲ್ಲಿಕಾರ್ಜುನ ಕೊಣ್ಣೂರ ಹಾಗೂ ಜೈಲರ್‌ಗಳಾದ ರಾಜೇಶ ಧರ್ಮಟ್ಟಿ, ಬಸವರಾಜ ಭಜಂತ್ರಿ, ರಮೇಶ ಕಾಂಬಳೆ ಹಾಗೂ ಎಫ್.ಟಿ. ದಂಡೈನ್ನವರ ಉಪಸ್ಥಿತರಿದ್ದರು.
ಸಾಹಿತ್ಯ ಕಮ್ಮಟದ ಸಂಚಾಲಕ ಗಣೇಶ ಅಮಿನಗಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯ ಸಂಚಾಲಕಿ ಡಾ. ಮೈತ್ರೇಯಿನಿ ಗದಿಗೆಪ್ಪಗೌಡರ ಸ್ವಾಗತಿಸಿದರು. ಕಾರಾಗೃಹದ ಉಪಾಧ್ಯಾಯ ಎಸ್ ಎಸ್ ಯಾದಗುಡೆ ಕಾರ್ಯಕ್ರಮವನ್ನು ಸಂಯೋಜಿಸಿ ನಿರೂಪಿಸಿದರು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 