ನಮ್ಮ ಒಳ ಅರಿವು ಬೆಳಕಿನಿಂದ ಕೂಡಲಿ : ಡಾ.ನಿರ್ಮಲಾ ಬಟ್ಟಲ್

ಲೋಕದರ್ಶನ ವರದಿ

  ಬೆಳಗಾವಿ,11: ನಮ್ಮ ಬದುಕಿನ ಎಲ್ಲ ಮೂಲಭೂತ ವಿಚಾರಗಳನ್ನು ಶರಣರು ವಚನಗಳಲ್ಲಿ ದಾಖಲಿಸಿ ದ್ದಾರೆ. ಯೋಗ-ಮನೋವಿಜ್ಞಾನ-ಶರೀರ ಶಾಸ್ತ್ರವನ್ನು ಆಳವಾಗಿ ವ್ಯಾಖ್ಯಾನಿಸಿದ್ದಾರೆ ಎಂದು ಮಹಾಂತೇಶ ನಗರದ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ನಿರ್ಮಲಾ ಬಟ್ಟಲ ಹೇಳಿದರು. 

ಅವರು ಬೆಳಗಾವಿ ಅಖಿಲ ಭಾರತ ವೀರಶೈವ ಮಹಾಸಭೆಯಲ್ಲಿ ಅಮವಾಸೆ ಅನುಭಾವ ಗೋಷ್ಠಿಯಲ್ಲಿ ಶರಣರ ವಚನಗಳಲ್ಲಿ ವೈಜ್ಞಾನಿಕ ಅಂಶಗಳು ವಿಷಯ ಕುರಿತು ಮಾತನಾಡಿದರು. ನಮ್ಮ ಒಳ ಅರಿವು ಬೆಳಕಿನಿಂದ ಕೂಡಬೇಕು ಅಂದಾಗ ಮಾನವ ಮಹಾಮಾನವನಾಗಲು ಸಾಧ್ಯ. ಈ ದೇಹವು ಕ್ರಿಮಿಗಳ ಕೋಟಾರ, ಎಲುಬಿನ ಹಂದರ, ಇಂತಹ ದೇಹದ ಮೇಲೆ ನಮ್ಮೆಲ್ಲರಿಗೂ ವಿಪರೀತ ವ್ಯಾಮೋಹ. ಇದು ಸಲ್ಲದು. ಒಂದು ದಿನ ಈ ದೇಹ ಬಿದ್ದು ಹೋಗುವಂತಹದು. ಇಂತಹ ದೇಹಕ್ಕೆ ಆತ್ಮಕ್ಕೆ ಉತ್ತಮವಾದ ಸಂಸ್ಕಾರವನ್ನು ನೀಡುವ ಮೂಲಕ ರಚನಾತ್ಮಕಗೊಳಿಸಬೇಕಾಗಿದೆ. ಎಲ್ಲಿ ಶಿವಜ್ಞಾನ ಶಿವಚಿಂತನೆ ಇರುವುದೋ ಅಲ್ಲಿ ರೋಗಗಳನ್ನು ಶಮನಗೊಳಿಸಲು ಸಾಧ್ಯ. ವಾತ-ಪಿತ್ತ-ಕಫ ರೋಗಕ್ಕೆ ಮೂಲ, ಅವುಗಳನ್ನು ನಿಯಂತ್ರಿಸಿಕೊಂಡಾಗ ಸದಾಚಾರ ಬದುಕನ್ನು ನಡೆಸಲು ಸಾಧ್ಯ. ಹೀಗೆ ಶರಣರು ಕಣ್ಣಿಗೆ ಕಾಣುವ ಹಾಗೂ ಕಾಣದ ನೂರಾರು ರೋಗರುಜಿನಗಳ ಬಗ್ಗೆ ಹೇಳುತ್ತಾರೆ, ಮಾತ್ರವಲ್ಲದೆ ಅವುಗಳ ನಿಯಂತ್ರಕ್ಕೆ ಶಿವಸೂತ್ರವನ್ನು ನೀಡುತ್ತಾರೆ. ವಚನಶಾಸ್ತ್ರವನ್ನು ಅಧ್ಯಯನ ಮಾಡುವುದರಿಂದ ನಮ್ಮ ಬದುಕನ್ನು ಸೃಜನಾತ್ಮಕ ಹಾಗೂ ರಚನಾತ್ಮಕಗೊಳಿಸಲು ಸಾಧ್ಯವೆಂದು ಅನುಭಾವ ಗೋಷ್ಠಿಯನ್ನುದ್ದೇಶಿಸಿ ಹೇಳಿದರು.

   ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜಿಲ್ಲಾ ಘಟದ ಅಧ್ಯಕ್ಷರು ಹಾಗೂ ನಿವೃತ್ತ ಕೆಎಎಸ್ ಅಧಿಕಾರಿಗಳಾದ ವಾಯ್.ಎಸ್.ಪಾಟೀಲ ಮಾತನಾಡಿ, ಹನ್ನೆರಡನೆಯ ಶತಮಾನ ಬಸವಾದಿ ಶಿವಶರಣರು ಹೇಳದೇ ಇರುವ ಸಂಗತಿಗಳೇ ಇಲ್ಲ. ಅವರ ವಿಚಾರಗಳು ಜಾಗತಿಕ ಸತ್ಯವನ್ನು ಹೊಂದಿವೆ. ಅವುಗಳನ್ನು ನಮ್ಮ ಯುವಜನಾಂಗಕ್ಕೆ ಮನವರಿಕೆ ಮಾಡಿಕೊಡುವ ಅಗತ್ಯತೆ ಇದೆ. ಇಂದಿನ ಒತ್ತಡ ಬದುಕಿಗೆ ದಿವ್ಯೌಷಧಿಯಾಗಿರುವ ವಚನಗಳನ್ನು ಮನನ ಮಾಡಿಕೊಡುವ ಉದ್ದೇಶದಿಂದ ಜಿಲ್ಲಾ ಘಟಕ ಪ್ರತಿ ಮಾಸ ಶರಣರ ವಚನಗಳ ಕುರಿತು ಚಿಂತನಗೋಷ್ಠಿಯನ್ನು ಏರ್ಪಡಿಸುತ್ತಾ ಬಂದಿದೆ, ಸಾಧಕರನ್ನು ಗುರುತಿಸಿ ಸತ್ಕರಿಸುತ್ತಿದೆ ಎಂದು ಹೇಳಿದರು.

ವೇದಿಕೆಯ ಮೇಲೆ ಕೇಂದ್ರ ಮಹಾಸಭೆ ಪ್ರಧಾನ ಕಾರ್ಯದಶರ್ಿ ಕಲ್ಯಾಣರಾವ್ ಮುಚಳಂಬಿ ಉಪಸ್ಥಿತರಿದ್ದರು. ಶರಣ ಶಂಕರ ಚೊಣ್ಣದ ವಚನ ಪ್ರಾರ್ಥನೆ ಮಾಡಿದರು.  ನ್ಯಾಯವಾದಿ ವ್ಹಿ.ಕೆ.ಪಾಟೀಲ ಸ್ವಾಗತಿಸಿದರು. ಡಾ.ಮಹೇಶ ಗುರನಗೌಡರ ನಿರೂಪಿಸಿದರು. ಪ್ರಧಾನ ಕಾರ್ಯದಶರ್ಿ ಸೋಮಲಿಂಗ ಮಾವಿನಕಟ್ಟಿ ವಂದಿಸಿದರು. ನ್ಯಾಯವಾದಿ ಆರ್.ಪಿ.ಪಾಟೀಲ, ತರಗಾರ, ಮೊದಲಾದ ಗಣ್ಯರು ಉಪಸ್ಥಿತರಿದ್ದರು.