ಬೆಳಗಾವಿ 12: ಉಳಿದ ಕ್ಷೇತ್ರಗಳನ್ನು ಗಮನಿಸಿದಾಗ ಹಾಸ್ಯ ಭಾಷಣಕಾರರ ಕೊರತೆ ಎದ್ದು ಕಾಣಿಸುತ್ತದೆ. ಹಾಸ್ಯ ಕ್ಷೇತ್ರದಲ್ಲಿ ಹೊಸ ಪ್ರತಿಭೆಗಳು ಕಾಣಿಸಿಕೊಳ್ಳಲಿ. ಹೊಸಬರಿಗೆ ಅವಕಾಶಗಳನ್ನು ನೀಡಲು ಹಾಸ್ಯಕೂಟ ವೇದಿಕೆ ಯಾವಾಗಲೂ ಸಿದ್ದವಾಗಿದೆ. ಅದರ ಸದುಪಯೋಗವನ್ನು ಪಡೆದುಕೊಳ್ಳಲಿ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿವೃತ್ತ ಶಾಖಾಧಿಕಾರಿ ಅರವಿಂದ ಹುನಗುಂದ ಇಂದಿಲ್ಲಿ ಹೇಳಿದರು.
ನಗರದ ಹಾಸ್ಯಕೂಟ ಮತ್ತು ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ ’ಹಾಸ್ಯ ರಸಾಯನ’ ಎಂಬ ಕಾರ್ಯಕ್ರಮವನ್ನು ದಿ. 10 ಶನಿವಾರದಂದು ಹಮ್ಮಿಕೊಂಡಿದ್ದರು. ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಅರವಿಂದ ಹುನಗುಂದ ಅವರು ಮೇಲಿನಂತೆ ಅಭಿಪ್ರಾಯ ಪಟ್ಟರು.ಪ್ರಮುಖ ಭಾಷಣಕಾರರಾಗಿ ಆಗಮಿಸಿದ್ದ ಜಿ. ಎಸ್. ಸೋನಾರ ಅವರು ಮಾತನಾಡುತ್ತ ಯಶಸ್ವಿ ಹಾಸ್ಯ ಭಾಷಣಕಾರರಾಗಲು ಹಾಸ್ಯ ವಿಷಯಗಳಷ್ಟೇ ಸಾಲದು ನಗೆಪ್ರಸಂಗಗಳನ್ನು ಹೇಳುವ ಶೈಲಿ, ಹಾವಭಾವ, ಧ್ವನಿ ಎಲ್ಲವೂ ಪ್ರಾಧನ್ಯವನ್ನು ಪಡೆಯುತ್ತವೆ ಅಲ್ಲದೇ ಹಾಸ್ಯ ಭಾಷಣಕಾರನಿಗೆ ಸಾಹಿತ್ಯದ ಓದು ಹೆಚ್ಚಾಗಿರಬೇಕು ಎಂದು ಹಲಾವಾರು ಲೇಖಕರು ಬರೆಹಗಳ ಉದಾಹರಣೆಗಳನ್ನು ನೀಡುತ್ತ ಬೇರೆ ಬೇರೆ ಹಾಸ್ಯ ಪ್ರಸಂಗಗಳನ್ನು ಹೇಳಿ ಜನರನ್ನು ರಂಜಿಸಿದರು.
ಪ್ರಾಯೋಜಕತ್ವವನ್ನು ವಹಿಸಿಕೊಂಡಿದ್ದ ಡಾ. ಜಿ. ಬಿ. ಪಡಗುರಿಯವರು, ಬೆಳಗಾವಿಯಲಿ ಹಾಸ್ಯಕೂಟ ತನ್ನದೇ ಆದ ವೈಶಿಷ್ಟ್ಯತೆಯನ್ನು ಕಾಯ್ದುಕೊಂಡು ಬಂದಿದೆ. 12 ವರ್ಷಗಳ ಕಾಲ ಸತತವಾಗಿ ಕಾರ್ಯಕ್ರಮವನ್ನು ನಡೆಸಿಕೊಂಡು ಬರುವುದು ಸಾಮಾನ್ಯ ವಿಷಯವೇನಲ್ಲ ಅದಕ್ಕಾಗಿ ಹಾಸ್ಯಕೂಟ ಪರಿವಾರವನ್ನು ಅಭಿನಂದಿಸುತ್ತೇನೆ ಎಂದ ಡಾ. ಪಡಗುರಿಯವರು ಸಂಘಟನೆ ಕಾರ್ಯಕ್ಕೆ ಹಣಕಾಸಿನ ತೊಂದರೆಯಾದಾಗ ಬೆನ್ನೆಲಬಾಗಿ ನಾನಿರುತ್ತೇನೆ ಎಂಬ ಅಭಯ ಹಸ್ತವನ್ನು ನೀಡಿದರು.
ಗುಂಡೇನಟ್ಟಿ ಮಧುಕರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಚಿದಂಬರ ಮುನವಳ್ಳಿ, ಆರ್. ವಿ. ಭಟ್ ತಮ್ಮ ನಗೆ ಪ್ರಸಂಗಗಳನ್ನು ಹಂಚಿಕೊಂಡರು. ಕವಿ ಬಸವರಾಜ ಗಾರ್ಗೆ ಹಾಸ್ಯ ಹನಿಗವನ್ನ ವಾಚನ ಮಾಡಿದರು. ಮತ್ತು ನಾದಸುಧಾ ಸಂಸ್ಥಾಪಕ ಸತ್ಯನಾರಣ ಅಣಕು ಹಾಡೊಂದನ್ನು ಹಾಡಿದರು. ಕೆ. ತಾನಾಜಿ ನಿರೂಪಿಸಿದರು.