ಅನುಮಾನಸ್ಪದ ಸಾವಿನ ಬಗ್ಗೆ ಶೀಘ್ರ ತನಿಖೆ ಆಗಲಿ: ಮುತಾಲಿಕ್

ಬೆಳಗಾವಿ, ಜ 20 :       ಗೋಪ್ರೇಮಿ ಶಿವು ಉಪ್ಪಾರ ಹಾಗೂ ಸಂತೋಷ ನಾಯಕರ ಅನುಮಾನಸ್ಪದ ಸಾವಿನ ಕುರಿತು ಪೊಲೀಸರು ಸಮಗ್ರ ತನಿಖೆ ಮಾಡಬೇಕು ಎಂದು ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಪ್ರೇಮಿ ಶಿವು ಉಪ್ಪಾರ ಸಂಶಯಾಸ್ಪದವಾಗಿ ಮೃತಪಟ್ಟು ತಿಂಗಳುಗಳೇ ಕಳೆದರೂ, ಇನ್ನು ತನಿಖೆ ಪೂರ್ಣಗೊಂಡಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸಾಕ್ಷಿಗಳು, ಕಾಲ್ ರೆಕಾರ್ಡ್ ಇದ್ದರೂ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು. 

ಅಲ್ಲದೇ, ಕಳೆದ ಜೂನ್ ತಿಂಗಳಿನಲ್ಲಿ ಬೆಳಗಾವಿಯ ಮುಚ್ಛೆ ಗ್ರಾಮದಲ್ಲಿ ಸಂತೋಷ್ ನಾಯಕ, ಪೀರನವಾಡಿಯ ಹೋಪ್ಸ್ ರಿಕವರಿ ಸೆಂಟರ್ ಎಂಬ ಚರ್ಚ್ ನಲ್ಲಿ ವ್ಯಸನಮುಕ್ತಿ ಚಿಕಿತ್ಸೆಗಾಗಿ ದಾಖಲಾದಾಗ, ಶೌಚಾಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿತ್ತು. ಈ ಸಾವು ಕೂಡ ಸಂಶಯಾಸ್ಪದವಾಗಿದೆ. ಈ ಕುರಿತು ತನಿಖೆಗೆ ಆಗ್ರಹಿಸಿದ್ದೇವು. ಆದರೆ ಪೊಲೀಸ್ ಇಲಾಖೆ ನಿರ್ಲಕ್ಯ ತೋರುತ್ತಿದೆ ಎಂದು ಅವರು ದೂರಿದರು. 

ಈ ಎರಡು ಅನುಮಾನಸ್ಪದ ಸಾವಿನ ಕುರಿತಾದ ತನಿಖೆಯನ್ನು 15 ದಿನಗಳವರೆಗೆ ಮುಕ್ತಾಯಗೊಳಿಸದಿದ್ದರೇ, ಅಂಕಲಗಿಯ ಶಿವು ಉಪ್ಪಾರ ಮನೆಯಿಂದ ಸಂತೋಷ ನಾಯಕ ಅವರ ಮನೆಯ ಮಾರ್ಗದ ಮೂಲಕ ಬೆಳಗಾವಿವರೆಗೆ ಬೈಕ್ ಜಾಥಾ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು. 

ಈ ಸಂದರ್ಭದಲ್ಲಿ ರಾಜ್ಯ ಕಾರ್ಯಧ್ಯಕ್ಷ ಗಂಗಾಧರ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಮಹಾಲಿಂಗಣ್ಣ ಸೇರಿ ಮತ್ತಿತ್ತರಿದ್ದರು.