ಅಗತ್ಯ ವಸ್ತುಗಳನ್ನು ಅಧಿಕ ಬೆಲೆಗೆ ಮಾರಾಟ ಮಾಡಿದರೆ ಕಾನೂನು ಕ್ರಮ: ಡಿಸಿ

ಬಳ್ಳಾರಿ, ಏ.21: ಕೊರೊನಾ ವೈರಸ್ ಕಾರಣದಿಂದಾಗಿ ಲಾಕ್ಡೌನ್ ಕ್ರಮಗಳು ಜಾರಿಯಲ್ಲಿರುವ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡು ಅಗತ್ಯ ವಸ್ತುಗಳ ಸಗಟು ವಿತರಕರು, ಸಗಟು ಸಂಗ್ರಾಹಕರು, ಸಗಟು ಮತ್ತು ಚಿಲ್ಲರೆ ಮಾರಾಟಗಾರರು ಅಗತ್ಯ ವಸ್ತುಗಳ ಕೃತಕ ಅಭಾವ ಉಂಟುಮಾಡುವುದು ಮತ್ತು ಅಧಿಕ ಬೆಲೆಗೆ ಮಾರಾಟ ಮಾಡುತ್ತಿರುವುದು ಕಂಡು ಬಂದಲ್ಲಿ ಅಂಥವರ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಅಗತ್ಯ ವಸ್ತುಗಳ ಉತ್ಪಾದಕರು / ಸಗಟು ವಿತರಣಾ ಏಜನ್ಸಿಗಳು ನಡೆಸುತ್ತಿರುವವರು ತಮ್ಮ ಕಂಪನಿಗಳಿಂದ ಜಿಲ್ಲೆಯ ಜನರ ಅಗತ್ಯಕ್ಕೆ ತಕ್ಕಂತೆ ವಸ್ತುಗಳನ್ನು ತರಿಸಿ ಸಗಟು ಮತ್ತು ಚಿಲ್ಲರೆ ಮಾರಾಟಗಾರರಿಗೆ ಸರಬರಾಜು ಮಾಡಬೇಕು. ಈ ಸರಬರಾಜು ಸರಪಳಿಯಲ್ಲಿ ಯಾವುದೇ ವ್ಯತ್ಯಾಸವಾಗಬಾರದು. ಅಗತ್ಯ ವಸ್ತುಗಳ ಸಗಟು ವಿತರಕರು ಮತ್ತು ಸಗಟು ಸಂಗ್ರಾಹಕರು / ದಾಸ್ತಾನುಗಾರರು ಅಗತ್ಯ ವಸ್ತುಗಳನ್ನು ದಾಸ್ತಾನಿಸಿರುವ ಸ್ಥಳ / ಉಗ್ರಾಣ ಮತ್ತು ದಸ್ತಾನಿನ ಪ್ರಮಾಣವನ್ನು ಪ್ರಕಟಿಸಬೇಕು. ಸಕ್ಷಮ ಪ್ರಾಧಿಕಾರಗಳಿಗೆ ವಾರಕ್ಕೊಮ್ಮೆ ಘೋಷಿಸಬೇಕು.

 ಜಿಲ್ಲೆಯ ಸಗಟು ವಿತರಕರು ಮತ್ತು ಸಗಟು ಮಾರಾಟಗಾರರು ಅಗತ್ಯ ವಸ್ತುಗಳನ್ನು ಎಲ್ಲಾ ಸೂಪರ್ ಬಜಾರ್ಗಳು ಮತ್ತು ಚಿಲ್ಲರೆ ವಿತರಕರಿಗೆ ನಿಯತವಾಗಿ ಮತ್ತು ಸಮಾನವಾಗಿ ಹಂಚಿಕೆ ಮಾಡಬೇಕು. ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಎಲ್ಲಾ ಸಗಟು/ಚಿಲ್ಲರೆ/ ಕಿರಾಣಿ ವರ್ತಕರು ತಮ್ಮಲ್ಲಿರುವ ಪ್ರಮುಖ ಆಹಾರ ಪದಾರ್ಥ ಹಾಗೂ ಅಗತ್ಯವಸ್ತುಗಳ ದಾಸ್ತಾನು ಫಲಕವನ್ನು ಸಾರ್ವಜನಿಕರಿಗೆ ಅಂಗಡಿ ಮುಂದೆ ಕಡ್ಡಾಯವಾಗಿ ಪ್ರಕಟಿಸಬೇಕು.  

 ಯಾವುದೇ ಉತ್ಪಾದಕ / ಸಗಟು ವಿತರಕ / ದಾಸ್ತಾನುಗಾರ / ಸಗಟು ಮತ್ತು ಚಿಲ್ಲರೆ ಮಾರಾಟಗಾರ ಯಾವುದೇ ಅಗತ್ಯ ವಸ್ತುವಿನ ಅಕ್ರಮ ಸಂಗ್ರಹಣೆ ಮಾಡಿದರೆ ಅಥವಾ ಕೃತಕ ಅಭಾವ ಸೃಷ್ಠಿಸಿದರೆ ಅಥವಾ ಕಾಳಸಂತೆ ವಹಿವಾಟು ನಡೆಸಿದರೆ ಅಥವಾ ಅಧಿಕ ಬೆಲೆಗೆ ಮಾರಾಟ ಮಾಡಿದರೆ ಅಂಥವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ 1955 ಮತ್ತು ಕಾನೂನು ಮಾಪನಶಾಸ್ತ್ರ ಕಾಯ್ದೆ 2009 ಹಾಗೂ ಗ್ರಾಹಕ ಸಂರಕ್ಷಣಾ ಕಾಯ್ದೆ 1986 ಮತ್ತು ಕಾಳಸಂತೆ ತಡೆ ಮತ್ತು ಅಗತ್ಯ ವಸ್ತುಗಳ ನಿರ್ವಹಣಾ ಕಾಯ್ದೆ 1980 ರಡಿ ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.