ಹೊರದೇಶದಿಂದ ಬಂದು ಮಾಹಿತಿ ನೀಡದಿದ್ದರೆ ಕಾನೂನು ಕ್ರಮ: ಶರತ್ ಬಿ

ಕಲಬುರಗಿ, ಮಾ.19, ಎಲ್ಲೆಡೆ‌  ಕೊರೊನಾ ಭೀತಿ ಹೆಚ್ಚಾದ ಹಿನ್ನೆಲೆಯಲ್ಲಿ ಹೊರದೇಶದಿಂದ ಬಂದವರು ತಪಾಸಣೆಗೆ ಒಳಪಡದೆ‌  ಮನೆಯಲ್ಲಿ ಗೌಪ್ಯವಾಗಿದ್ದರೇ, ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ  ಶರತ್ ಬಿ. ಖಡಕ್ ಎಚ್ಚರಿಕೆ ನೀಡಿದ್ದಾರೆ.ಕೆಲಸಕ್ಕೆಂದು  ಹೊರದೇಶಕ್ಕೆ ಹೋಗಿ ಕಳೆದ‌ ಒಂದು ತಿಂಗಳಿನಿಂದ ಇಂದಿನವರೆಗೂ ಜಿಲ್ಲೆಗೆ ವಾಪಸ್ಸಾದ  ನಾಗರಿಕರು  ಸ್ವಯಂಪ್ರೇರಿತರಾಗಿ ಕಲಬುರಗಿ ಇ.ಎಸ್.ಐ.ಸಿ. ಆಸ್ಪತ್ರೆಗೆ ಬಂದು ಕೊರೊನಾ  ವೈರಸ್ ತಪಾಸಣೆಗೆ ಒಳಪಡಬೇಕು ಎಂದರು.
ಕೊರೊನಾ ವೈರಸ್ ಸೋಂಕು ಹೆಚ್ಚಾಗಿ ಹೊರದೇಶದಿಂದ‌ ಆಗಮಿಸಿದವರಲ್ಲೇ, ಕಂಡುಬರುತ್ತಿರುವುದರಿಂದ ಹೊರದೇಶದಿಂದ ಬಂದವರು ಮನೆಯಲ್ಲಿ  ಗೌಪ್ಯವಾಗಿರಬಾರದು. ಕೂಡಲೇ ತಮ್ಮ ಪ್ರವಾಸದ ಇತಿಹಾಸದೊಂದಿಗೆ ಆಸ್ಪತ್ರೆಗೆ ತೆರಳಿ   ತಪಾಸಣೆಗೊಳಪಡುವ ಮೂಲಕ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು. ಇಲ್ಲದಿದ್ದಲ್ಲಿ  ಸರ್ಕಾರದಿಂದಲೇ ಹೊರದೇಶದಿಂದ‌ ಮರಳಿದವರ ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ  ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.