ದೆಹಲಿ ಮರ್ಕಜ ಜಮಾತ್ ನಲ್ಲಿ ಭಾಗವಹಿಸಿ, ಮಾಹಿತಿ ಬಚ್ಚಿಟ್ಟ ಯುವಕ, ಸಹಕರಿಸಿದ ಆರು ಜನರ ವಿರುದ್ಧ ಕಾನೂನು ಕ್ರಮ

 ಬೆಳಗಾವಿ, ಏ 12 ಳೆದ ಮಾರ್ಚ್ ನಲ್ಲಿ ದೆಹಲಿಯ ನಿಜಾಮುದ್ದೀನ ಮರ್ಕಜ್ ಮಸೀದಿಯಲ್ಲಿ ಜರುಗಿದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ಹಿರೇಬಾಗೇವಾಡಿ ಗ್ರಾಮದ ಯುವಕ ಹಾಗೂ ಈತನಿಗೆ ಸಹಕರಿಸಿದ ಆರು ಜನರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ದೆಹಲಿ ಜಮಾತ್ ನಲ್ಲಿ ಪಾಲ್ಗೊಂಡಿದ್ದವರಿಗೆ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ವ್ಯಾಪಿಸಿರುವ ಹಿನ್ನೆಲೆಯಲ್ಲಿ ನೈಜ ಸಂಗತಿ ಮುಚ್ಚಿಟ್ಟರ ಮೇಲೆ ಕ್ರಮ ಕೈಗೊಳ್ಳಲಾಗಿದೆ.  ಈತ ವೈದ್ಯಕೀಯ ತಪಾಸಣೆಗೂ ಒಳಗಾಗದೇ, ಜಮಾತ್ ನಲ್ಲಿ ಭಾಗವಹಿಸಿದ ಸತ್ಯ ಸಂಗತಿಯನ್ನು ಟಾಸ್ಕ್ ಪೋರ್ಸ್ ನಿಂದ ಬಚ್ಚಿಟ್ಟಿದ್ದ. ಇವನೊಂದಿಗೆ ಅದೇ ಗ್ರಾಮದ  ತಬ್ಲಿಕ್ ಜಮಾತನ ಕಾರ್ಯದರ್ಶಿ, ಮುಖಂಡ ಹಾಗೂ ಆತನ ಮನೆಯವರೂ ಸಹ ತಪ್ಪು ಮಾಹಿತಿ ನೀಡಿದ್ದಾರೆ. ಸರ್ಕಾರದ ಆದೇಶ  ಧಿಕ್ಕರಿಸಿದ ಹಿನ್ನೆಲೆಯಲ್ಲಿ ಟಾಸ್ಕ್ ಪೋರ್ಸಿನ ನೋಡಲ್ ಅಧಿಕಾರಿ ನೀಡಿದ ದೂರಿನಂತೆ 7 ಜನರ ಮೇಲೆ ಹಿರೇಬಾಗೆವಾಡಿ ಪೊಲೀಸ್ ಠಾಣೆಯಲ್ಲಿ ಕಲಂ.೧೪೩, ೨೦೨, ೨೭೦, ೩೦೮ ಸಹಕಲಂ ೧೪೯ ರಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ದೆಹಲಿ ಸಭೆಯಲ್ಲಿ ಭಾಗವಹಿಸಿದವರು ಯಾವುದೇ ಮುಜಗರ ಪಡದೆ ಸ್ವ ಇಚ್ಛೆಯಿಂದ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು. ಅಂಥವರ ಮಾಹಿತಿಯನ್ನು ಸಾರ್ವಜನಿಕರು ನೀಡಬೇಕು ಎಂದು  ಸರ್ಕಾರ ಹಲವು ಬಗೆಯಿಂದ ವಿನಂತಿಸಿಕೊಂಡಿತ್ತು. ಆದರೆ ವೀರಪನಕೊಪ್ಪ ಗ್ರಾಮದ ೨೫ ವರ್ಷದ ಯುವಕ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ. ಆದರೆ ಈತ ಸುಳ್ಳು ಮಾಹಿತಿ ಹೇಳಿ ನಿಜ ಸಂಗತಿಯನ್ನು ಬಚ್ಚಿಟ್ಟಿದ್ದ. ಇದಕ್ಕೆ ಸಂಭಂದಪಟ್ಟ ಹಿರೇಬಾಗೆವಾಡಿ ಗ್ರಾಮದ ತಬ್ಲಿಕ ಜಮಾತಿನ ಕಾರ್ಯದರ್ಶಿ ಹಾಗೂ ಇನ್ನೊಬ್ಬ  ಮುಖಂಡರಿಗೆ  ಈ ಬಗ್ಗೆ ಮಾಹಿತಿಯನ್ನು ಕೇಳಿದಾಗ ಅವನಂತೆ ಹೇಳಿ ಅವರೂ ಸಹ ಉದ್ದೇಶಪೂರ್ವಕವಾಗಿ  ಮಾಹಿತಿಯನ್ನು ಬಚ್ಚಿಟ್ಟಿದ್ದರು. ಅವರೆಲ್ಲರೂ ಸರ್ಕಾರದ ಆದೇಶವನ್ನು ಧಿಕ್ಕರಿಸಿ ರೋಗ ಹರಡಿ ಅಪರಾಧಿಕ ಮಾನವ ಹತ್ಯೆ ಮಾಡಲು ಪ್ರಯತ್ನ ಮಾಡಿದ ಬಗ್ಗೆ ಕಾರ್ಯಪಡೆಯ ನೋಡಲ್ ಅಧಿಕಾರಿ ರಾಜೇಂದ್ರ ಪವಾಡೆಪ್ಪ ಖಾನಾಪುರೆ ಅವರ ದೂರಿನ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ.