ಮಾದಕ ದ್ರವ್ಯದ ಕುರಿತು ಉಪನ್ಯಾಸ ಕಾರ್ಯಕ್ರಮ

ಲೋಕದರ್ಶನ ವರದಿ

ಶೇಡಬಾಳ 03: ಇಂದಿನ ಯುವಕರು ಮದ್ಯ, ತಂಬಾಕು, ಗುಟಕಾ, ಮಾವಾ, ಸಿಗರೇಟು, ಅಪೀಮು, ಗಾಂಜಾ, ಚರಸ ಮೊದಲಾದ ಮಾದಕ ಪದಾರ್ಥಗಳನ್ನು ಸೇವಿಸಿ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದು  ಮಿರಜದ ನಿರ್ಮಲ ವ್ಯಸನ ಮುಕ್ತಿ ಕೇಂದ್ರದ ವೈದ್ಯಾಧಿಕಾರಿ ಡಾ. ಚಂದ್ರಶೇಖರ ಹಳಿಂಗಳಿ ಹೇಳಿದರು.

ಅವರು ಸೋಮವಾರ ದಿ. 2 ರಂದು ಸಾಂಗಲಿಯ ನ್ಯೂ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯಡಿಯಲ್ಲಿ ಆಯೋಜಿಸಲಾಗಿದ್ದ "ಮಾದಕ ದ್ರವ್ಯ ದುರುಪಯೋಗ ಪ್ರತಿಬಂಧಕ" ವಿಷಯವಾಗಿ ಏರ್ಪಡಿಸಲಾಗಿದ್ದ ಶಿಬಿರವನ್ನುದ್ದೇಶಿಸಿ ಮಾತನಾಡುತ್ತಿದ್ದರು. ಅವರು ಮುಂದೆ ಮಾತನಾಡಿ ನಮ್ಮ ಸುತ್ತಮುತ್ತಲಿನ ಯುವಕರು ದುಷ್ಚಟಗಳಿಗೆ ದಾಸರಾಗಿ ಆರೋಗ್ಯವನ್ನು ಹಾಳು ಮಾಡಿಕೊಳ್ಳುವದರ ಜತೆಗೆ ಆಥರ್ಿಕವಾಗಿ, ಸಾಮಾಜಿಕವಾಗಿ, ಕೌಟುಂಬಿಕವಾಗಿ ಎಲ್ಲರಿಂದಲೂ ತಿರಸ್ಕೃತಗೊಂಡು ಅನ್ಯ ಮಾರ್ಗದತ್ತ ಸಾಗುತ್ತಿರುವುದು ಖೇಧಕರ. ಯುವಕರು ದುಷ್ಚಟಗಳಿಗೆ ದಾಸರಾಗುವ ಮುಂಚೆ ಪಾಲಕರು ಸಮಾಜ ಸೇವಾ ಸಂಸ್ಥೆಗಳು, ಧಾರ್ಮಿಕ ಸಂಘ ಸಂಸ್ಥೆಗಳು, ಈ ಯುವಕರನ್ನು ಸರಿಯಾದ ಮಾರ್ಗದತ್ತ ಕರೆದುಕೊಂಡು ಹೋಗುವ ಗುರುತರವಾದ ಜವಾಬ್ದಾರಿಯನ್ನು ಹೊಂದಬೇಕಾಗಿದೆ ಎಂದು ಡಾ. ಚಂದ್ರಶೇಖರ ಹಳಿಂಗಳಿ ಹೇಳಿದರು.

ಸಭೆಯಲ್ಲಿ ಹಾಜರಿದ್ದ ಯುವಕರಿಗೆ ದುಷ್ಚಟಗಳಿಂದ ಹಾಗೂ ಮೊಬೈಲ್ಗಳಿಂದ ಆಗುವ ದುಷ್ಪರಿಣಾಮಗಳ ಕುರಿತು ಸಚಿತ್ರವಾಗಿ (ಸ್ಲೈಡ್) ವಿವರಿಸಿದರು. 

ಕಾರ್ಯಕ್ರಮದ ಅಂಗವಾಗಿ ಡಾ. ಚಂದ್ರಶೇಖರ ಹಳಿಂಗಳಿ ಫೌಂಡೇಶನ ವತಿಯಿಂದ ನಿರ್ಮಲ ವ್ಯಸನ ಮುಕ್ತಿ ಕೇಂದ್ರದ ಸಿಬ್ಬಂದಿ ವರ್ಗದವರು ವ್ಯಸನಾಧೀನ ಯುವಕರ ಕುರಿತು ಹಾಸ್ಯಮಯ ನಾಟಕವನ್ನು ಪ್ರದರ್ಶಿಸಿ ನೆರೆದ ಪ್ರೇಕ್ಷಕರನ್ನು ರಂಜಿಸಿದರು. 

ಈ ಸಮಯದಲ್ಲಿ ಕಾರ್ಯಕ್ರಮದ ಸಂಯೋಜನಾಧಿಕಾರಿ ಡಾ. ಎಂ.ಬಿ. ವಾಘಮಾರೆ, ಪ್ರಾ. ಚೈತ್ರಾ ರಾಜನ, ಪ್ರಾ. ಆರ್.ಎಂ. ಕಿರುಳಕರ ಸೇರಿದಂತೆ ಕಾಲೇಜಿನ ವಿದ್ಯಾರ್ಥಿ , ವಿದ್ಯಾರ್ಥಿನಿಯರು, ಸಿಬ್ಬಂದಿ ವರ್ಗ ಇದ್ದರು.