ಬೀಳಗಿ 07: ಬಾಗಲಕೋಟೆ ಸೇರಿ ರಾಜ್ಯದ 09 ವಿವಿಗಳನ್ನು ಆರ್ಥಿಕ ಹೊರೆ ಮೂಲಭೂತ ಸೌಕರ್ಯ ಹಾಗೂ ಬೋಧಕರ ಸಿಬ್ಬಂದಿ ಕೊರತೆ ಮತ್ತು ವಿದ್ಯಾರ್ಥಿಗಳ ದಾಖಲಾತಿ ಕೊರತೆ ಸೇರಿ ಅನೇಕ ಕಾರಣಗಳನ್ನು ನೀಡಿ ವಿ.ವಿ.ಗಳನ್ನ ಸರ್ಕಾರ ಮುಚ್ಚುವ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕು ಎಂದು ಸದನದಲ್ಲಿ ವಿ.ಪ. ಸದಸ್ಯ ಹನಮಂತ ನಿರಾಣಿ ಒತ್ತಾಯಿಸಿದ್ದಾರೆ.
ವಿ.ವಿಗಳನ್ನು ಮುಚ್ಚವುದರಿಂದ ಬಡ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಲ್ಲದೇ ಪ್ರಾದೇಶಿಕವಾಗಿಯೂ ಸಹ ಆಯಾ ಜಿಲ್ಲೆಗಳ ಸರ್ವಾಂಗೀಣ ಅಭಿವೃದ್ಧಿಗೆ ಮಾರಕವಾಗುವುದರ ಜೊತೆಗೆ ರೈತಾಪಿ ಹಿಂದುಳಿದ ವರ್ಗದ ಮಕ್ಕಳ ಉನ್ನತ ಶಿಕ್ಷಣ ಪಡೆಯುವ ಕನಸು ಗಗನಕುಸುಮವಾಗಲಿದೆ ಹಾಗೂ ಬಡ ಹಿಂದುಳಿದ ವಿದ್ಯಾರ್ಥಿಗಳ ಶೈಕ್ಷಣಿಕ ಹಕ್ಕನ್ನು ರಾಜ್ಯ ಸರ್ಕಾರವೇ ಕಸಿದುಕೊಂಡಂತಾಗುತ್ತದೆ. ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಾರೆ. 2021-22ರಲ್ಲಿ ಈ ಹಿಂದೆ ಬಿಜೆಪಿ ಸರ್ಕಾರ ವಿವಿಗಳ ಅವಶ್ಯಕತೆಗೆ ಹಾಗೂ ಅದರ ಬಗ್ಗೆ, ಚರ್ಚಿಸಿದ ನಂತರ ಅಂದಿನ ಉನ್ನತ ಶಿಕ್ಷಣ ಸಚಿವರು ಹಾಗೂ ಮುಖ್ಯಮಂತ್ರಿಗಳು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದ್ದಾರೆ.
ವಿವಿಗಳ ಅಭಿವೃದ್ಧಿಗಾಗಿ ಆಯವ್ಯಯದಲ್ಲಿ ಕೂಡ ಅನುದಾನ ಹಂಚಿಕೆ ಮಾಡಲಾಗಿತ್ತು. ಇಲ್ಲಿವರೆಗೂ ಯಾವುದೇ ಅನುದಾನ ಮಂಜೂರಾಗದೇ ಇರುವುದು ದುರದೃಷ್ಟಕರ ಸಂಗತಿಯಾಗಿದೆ. ರಾಜ್ಯ ಸರ್ಕಾರವು ವಿ.ವಿ ಮುಚ್ಚುವ ನಿರ್ಧಾರವನ್ನು ಕೈ ಬಿಟ್ಟು, ವಿವಿಗಳ ಶ್ರೇಯೋಭಿವೃದ್ಧಿಗೆ ರಾಜಕೀಯ ಮಾಡದೇ ಮುಂಬರುವ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ನೀಡಿ ಶಿಕ್ಷಣ ಕ್ಷೇತ್ರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರವು ಮುಂದಾಗಬೇಕು. ಪ್ರತಿ ಜಿಲ್ಲೆಗೊಂದು ವಿವಿ ಆಗಬೇಕೆನ್ನುವುದು ಹೊಸ ಶಿಕ್ಷಣ ನೀತಿಯ ಆಶಯವಾಗಿದೆ ಎಂದು ಉನ್ನತ ಶಿಕ್ಷಣ ಸಚಿವರನ್ನು ಶೂನ್ಯ ವೇಳೆಯಲ್ಲಿ ಸರ್ಕಾರವನ್ನು ಒತ್ತಾಯಿಸಿದರು.