ಲೋಕದರ್ಶನ ವರದಿ
ಬೆಳಗಾವಿ 01: ಕರಾಟೆ ಕೇವಲ ಕ್ರೀಡೆಯಲ್ಲ ಅದು ಆತ್ಮರಕ್ಷಣೆಯ ಒಂದು ತಂತ್ರ. ಇದನ್ನು ಪ್ರತಿಯೊಬ್ಬರು ಕಲಿಯಬೇಕು. ಅದರಲ್ಲು ಹೆಣ್ಣುಮಕ್ಕಳು ಈ ವಿದ್ಯೆಯನ್ನು ಕಲಿತರೆ ಯಾವುದೇ ಆತಂಕವಿಲ್ಲದೇ ನಿರ್ಭತಿಯಿಂದ ಸಮಾಜದಲ್ಲಿ ಓಡಾಡಬಹುದು ಎಂದು ನಾಗರೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ಇಲ್ಲಿನ ಶಿವಬಸವನಗರದ ಎಸ್. ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಪ್ರಭುದೇವ ಸಭಾಭವನದಲ್ಲಿ ಭಾನುವಾರ 01 ರಂದು ಆನಂದ ಅಕಾಡೆಮಿ ವತಿಯಿಂದ ಆಯೋಜಿಸಿದ್ದ, ಕರಾಟೆ ಪಟುಗಳ ನೂತನ ಬೆಲ್ಟ ಹಾಗೂ ಅಭಿನಂದನಾ ಪತ್ರ ವಿತರಣಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿ.
ಕರಾಟೆ ಕಲಿಯುವುದರಿಂದ ದೇಹವು ವ್ಯಾಯಾಮ ಕೊಳಪಟ್ಟು ಆ ಮೂಲಕ ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದರು.
ನಗರ ವಲಯದ ಕ್ಷೇತ್ರ ಸಮನ್ವಯ ಅಧಿಕಾರಿ ಡಾ.ರಾಜಶೇಖರ ಚಳಗೇರಿ ಮಾತನಾಡಿ, ಬಾಲ್ಯದಿಂದಲೇ ವಿದ್ಯಾರ್ಥಿಗಳಿಗೆ ಕರಾಟೆ ತರಬೇತಿ ನೀಡಿ ಅವರನ್ನು ಭವಿಷ್ಯದ ಸದೃಡ ನಾಗರಿಕರನ್ನಾಗಿ ಮಾಡುವ ಉದ್ದೇಶದಿಂದ ಸರ್ಕಾರ ಈಗ ಶಾಲಾ ಹಂತದಲ್ಲಿ ಕರಾಟೆಯನ್ನು ಪ್ರಾರಂಭಿಸಿದೆ. ಪಾಲಕರು ತಮ್ಮ ಮಕ್ಕಳು ಕರಾಟೆ ಕಲಿಯುವಂತೆ ಪ್ರೇರೇಪಿಸಬೇಕು ಎಂದರು.
ಮಾಳಮಾರುತಿ ಪೊಲೀಸ ಠಾಣೆ ಪಿಎಸ್ಐ ಹೊಣ್ಣಪ್ಪ ತಳವಾರ ಮಾತನಾಡಿ, ತೆಲಂಗಾಣದಲ್ಲಿ ಜರುಗಿದ ವೈದ್ಯ ವಿದ್ಯಾರ್ಥಿಣಿಯ ಹತ್ಯೆಯಂತ ಹೇಯ ಪ್ರಕರಣಗಳು ಸಮಾಜದಲ್ಲಿ ಜರುಗುತ್ತಿರುವುದು ಆತಂಕಕಾರಿ ಬೆಳವಣಿಯಾಗಿದೆ. ಹೆಣ್ಣುಮಕ್ಕಳು ಬಾಲ್ಯದಲ್ಲಿ ಕರಾಟೆ ಕಲಿತು ಸದೃಡರಾಗಿ ಬೆಳೆದರೆ ಇಂತಹ ಪ್ರಕರಣಗಳನ್ನು ಮೆಟ್ಟಿ ನಿಲ್ಲಬೇಕು ಎಂದರು.
ಎಸ್ಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪ್ರಾಚಾರ್ಯ ಪ್ರೇಮಾನಂದ ಜಾಧವ ಮಾತನಾಡಿ, ಕರಾಟೆ ಪಟುಗಳು ತಮ್ಮ ಆತ್ಮ ರಕ್ಷಣೆಯ ಜತೆ ಈ ಕಲೆಯನ್ನು ಸಮಾಜದಲ್ಲಿನ ದುಷ್ಟ ಶಕ್ತಿಗಳ ಮಟ್ಟಹಾಕಲು ಹಾಗೂ ದೇಶ ಸಂರಕ್ಷಣೆಗಾಗಿ ಉಪಯೋಗಿಸಿಕೊಳ್ಳಬೇಕು ಎಂದರು.
ಸೈನಿಕ ಕರಾಟೆ ಕೋಚ್ ಪ್ರಸಾದ ರಾಯ್, ಆನಂದ ಅಕಾಡಿಮಿ ಕಾರ್ಯದರ್ಶಿ ಆನಂದ ಪೂಜಾರಿ ಹಾಗೂ ವಿದ್ಯಾರ್ಥಿಗಳು, ಪಾಲಕರು ಇತರರು ಇದ್ದರು. 92 ವಿದ್ಯಾರ್ಥಿಗಳಿಗೆ ಅವರ ಅರ್ಹತೆ ಆಧಾರದ ಮೇಲೆ ವಿವಿಧ ಬೆಲ್ಟಗಳನ್ನು ವಿತರಿಸಲಾಯಿತು. ಮಹಾಂತೇಶ ಲೋಟೆ ಸ್ವಾಗತಿಸಿದರು. ರಾಜಶೇಖರ ಪಾಟೀಲ ನಿರೂಪಿಸಿ ವಂದಿಸಿದರು.