ಮುಂಬೈ, 12 ಬುಧವಾರ ಮುಕ್ತಾಯವಾದ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಆರಂಭಿಕ ಕೆ.ಎಲ್. ರಾಹುಲ್ ಅವರು ಐಸಿಸಿ ಬಿಡುಗಡೆ ಮಾಡಿರುವ ಟಿ-20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ಪ್ರಗತಿ ಸಾಧಿಸಿದ್ದಾರೆ.ವೆಸ್ಟ್ ಇಂಡೀಸ್ ವಿರುದ್ಧ ಭಾರತ 2-1 ಅಂತರದಲ್ಲಿ ಟಿ-20 ಸರಣಿಯನ್ನು ಭಾರತ ತನ್ನದಾಗಿಸಿಕೊಂಡಿತ್ತು. ಕನ್ನಡಿಗ ಕೆ.ಎಲ್ ರಾಹುಲ್(734) ಮೂರು ಸ್ಥಾನಗಳಲ್ಲಿ ಏರಿಕೆ ಕಂಡು ಆರನೇ ಶ್ರೇಯಾಂಕ ಪಡೆದಿದ್ದಾರೆ. ನಾಯಕ ವಿರಾಟ್ ಕೊಹ್ಲಿ(685) ಐದು ಸ್ಥಾನಗಳಲ್ಲಿ ಏರಿಕೆ ಕಂಡು ಅಗ್ರ 10 ರೊಳಗೆ ಪ್ರವೇಶ ಮಾಡಿದ್ದಾರೆ.ಬುಧವಾರ ನಡೆದಿದ್ದ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ರಾಹುಲ್, 56 ಎಸೆತಗಳಲ್ಲಿ 91 ರನ್ ಚಚ್ಚಿದ್ದರು. ಆ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಇವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ 67 ರನ್‌ಗಳಿಂದ ಜಯ ಸಾಧಿಸಿತ್ತು. ಮೂರು ಪಂದ್ಯಗಳಿಂದ ರಾಹುಲ್ ಒಟ್ಟು 164 ರನ್ ಗಳಿಸಿದ್ದಾರೆ. ಅದ್ಭುತ ಪ್ರದರ್ಶನ ತೋರಿದ ನಾಯಕ ವಿರಾಟ್ ಕೊಹ್ಲಿ ಮೂರೂ ಪಂದ್ಯಗಳಿಂದ 183 ರನ್ ಗಳಿಸಿದ್ದರು. ಹಾಗಾಗಿ ಅವರು ಸರಣಿ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾಗಿದ್ದರು. ಕಳೆದ ಪಂದ್ಯದಲ್ಲಿ 71 ರನ್ ಗಳಿಸಿದರೂ ಕೂಡ ಹಿಟ್‌ಮನ್ ರೋಹಿತ್ ಶರ್ಮಾ ಅವರು ಒಂದು ಸ್ಥಾನ ಕುಸಿದಿದ್ದಾರೆ. ಆ ಮೂಲಕ 9ನೇ ಸ್ಥಾನಕ್ಕೆೆ ಇಳಿದಿದ್ದಾರೆ. ರೋಹಿತ್ ಮೂರನೇ ಪಂದ್ಯದಲ್ಲಿ ಅಂತಾರಾಷ್ಟ್ರೀಯ 400 ಸಿಕ್ಸರ್‌ಗಳನ್ನು ಪೂರೈಸಿದ್ದರು. 400 ಸಿಕ್ಸರ್ ಸಾಧನೆ ಮಾಡಿದ ಭಾರತದ ಮೊದಲನೇ ಹಾಗೂ ವಿಶ್ವದ ಮೂರನೇ ಬ್ಯಾಟ್ಸ್ ಮನ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಇಬ್ಬರೂ ಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 2,633 ರನ್ ಗಳಿಸಿದ್ದಾರೆ. ಇವರಿಬ್ಬರು ಜಂಟಿಯಾಗಿ ಅಗ್ರ ಸ್ಥಾನದಲ್ಲಿದ್ದಾರೆ. ಈ ರನ್ ಗಳಿಸಲು ವಿರಾಟ್ 75 ಪಂದ್ಯಗಳನ್ನು(70 ಇನಿಂಗ್ಸ್) ತೆಗೆದುಕೊಂಡರೆ, ರೋಹಿತ್ ಶರ್ಮಾ 104 ಪಂದ್ಯಗಳನ್ನು (96 ಇನಿಂಗ್ಸ್) ತೆಗೆದುಕೊಂಡಿದ್ದಾರೆ.