300ಕ್ಕೂ ಹೆಚ್ಚು ವಿದೇಶಿ ಉಪಗ್ರಹಗಳ ಉಡಾವಣೆ: ಇಸ್ರೋದಿಂದ ಮತ್ತೊಂದು ಮೈಲಿಗಲ್ಲು

isro

ಶ್ರೀಹರಿಕೋಟ(ಆಂಧ್ರಪ್ರದೇಶ)-ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಬುಧವಾರ 13 ವಿದೇಶಿ ಉಪಗ್ರಹಗಳನ್ನು ಉಡಾವಣೆ ಮಾಡುವುದರೊಂದಿಗೆ ಇದುವರೆಗೆ 300ಕ್ಕೂ ಹೆಚ್ಚು ವಿದೇಶಿ ಉಪಗ್ರಹಗಳನ್ನು ಉಡಾಯಿಸಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. 

ಬುಧವಾರ ಅಮೆರಿಕದ 13 ನ್ಯಾನೊ ಉಪಗ್ರಹಗಳನ್ನು ಉಡಾಯಿಸುವುದರೊಂದಿಗೆ ಇಸ್ರೋ ಇದುವರೆಗೆ 310 ವಿದೇಶಿ ಉಪಗ್ರಹಗಳನ್ನು ಉಡಾಯಿಸಿದ್ದು, ಇತರ ದೇಶಗಳಿಗೆ ಹೋಲಿಸಿದರೆ ಇದು ದೊಡ್ಡ ಸಾಧನೆಯಾಗಿದೆ. 

ಪಿಪಿಎಸ್‍ಎಲ್‍ವಿ ರಾಕೆಟ್ ಒಂದೇ ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ಉಪಗ್ರಹಗಳನ್ನು ಮೂರು ವಿವಿಧ ಕಕ್ಷೆಗಳಿಗೆ ಸೇರಿಸಿದೆ. ಈ ಮೂಲಕ ಇಸ್ರೋದ ವಿಶ್ವಾಸಾರ್ಹ ರಾಕೆಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 

ಪಿಎಸ್‍ಎಲ್‍ವಿ ಇದುವರೆಗೆ 297 ವಿದೇಶಿ ಉಪಗ್ರಹಗಳನ್ನು ಉಡಾಯಿಸಿದೆ. ಇಂದು ಪಿಎಸ್‍ಎಲ್‍ವಿ-ಸಿ 47ಯ ಯಶಸ್ವೀ ಕಾರ್ಯಕ್ರಮದೊಂದಿಗೆ ವಿದೇಶಿ ಉಪಗ್ರಹಗಳ ಉಡಾವಣೆ ಸಂಖ್ಯೆ 310ಕ್ಕೆ ಏರಿದೆ.  

ಅಮೆರಿಕದ 13 ನ್ಯಾನೋ ಉಪಗ್ರಹಗಳ ಉಡಾವಣೆ ಗುತ್ತಿಗೆಯನ್ನು ಇಸ್ರೋದ ವಾಣಿಜ್ಯ ಅಂಗಸಂಸ್ಥೆಯಾದ ನ್ಯೂಸ್ಪೇಸ್ ಇಂಡಿಯಾ ಲಿ. ಪಡೆದಿತ್ತು.