ಬೆಳಗಾವಿ 12: ಪೊಲೀಸರನ್ನು ದುರುಪಯೋಗ ಪಡಿಸಿಕೊಂಡು ಸರಕಾರ ಪಂಚಮಸಾಲಿಗರ ಮೇಲೆ ಲಾಠಿ ಪ್ರಹಾರ ಮಾಡಿದೆ ಎಂದು ಬೆಳಗಾವಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಆರೋಪ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಘಟನೆಗೆ ಸಂಬಂಧಿಸಿದಂತೆ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡಲು ಆಗ್ರಹಿಸಲಾಗುತ್ತಿದೆ. ಇದರ ಬಗ್ಗೆ ಚರ್ಚೆ ಮಾಡೋಣ ಎಂದು ಸಿಎಂ ಹೇಳಿದ್ದರು. ಆದರೆ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಬಂದ ಸಮಾಜ ಬಾಂಧವರ ಮೇಲೆ ಲಾಠಿ ಚಾರ್ಜ್ ಮಾಡಿ, ಹೋರಾಟವನ್ನು ಹತ್ತಿಕ್ಕುವ ಕೆಲಸ ಮುಖ್ಯಮಂತ್ರಿಗಳ ಕುಮ್ಮಕ್ಕಿನಿಂದ ಆಗಿದೆ. ಲಾಠಿ ಪ್ರಹಾರದ ಹಿಂದೆ ಷಡ್ಯಂತ್ರವಿದೆ. ಇದು ಅಕ್ಷಮ್ಯ ಅಪರಾಧ. ಮುಖ್ಯಮಂತ್ರಿಗಳಿಗೆ ಪ್ರಜಾಪ್ರಭುತ್ವದ ಮೇಲೆ ವಿಶ್ವಾಸ ಇದೆಯೋ ಇಲ್ಲವೋ ಎಂಬ ಅನುಮಾನ ಇದೆ ಎಂದರು.
ಇದು ಕೇವಲ ಪಂಚಮಸಾಲಿ ಸಮಾಜದ ಪ್ರಶ್ನೆ ಇಲ್ಲ. ಇದು ಇಡೀ ನಾಡಿನ ಜನತೆ ಪ್ರಶ್ನೆ. ಮುಖ್ಯಮಂತ್ರಿಗಳಿಗೆ ಪ್ರಜಾಪ್ರಭುತ್ವದ ಮೇಲೆ ವಿಶ್ವಾಸವಿದ್ದರೆ ಮನವಿ ಸ್ವೀಕರಿಸಬಹುದಿತ್ತು. ಆದರೆ ಸರ್ಕಾರ ಪೊಲೀಸರನ್ನು ದುರುಪಯೋಗಪಡಿಸಿಕೊಂಡು ಲಾಠಿ ಪ್ರಹಾರ ಮಾಡಿದೆ. ಹೀಗಾಗಿ ಮುಖ್ಯಮಂತ್ರಿಗಳು ಕ್ಷಮೆ ಕೇಳಬೇಕು ಎಂದು ವಿಜಯೇಂದ್ರ ಒತ್ತಾಯಿಸಿದರು.