ಲೋಕದರ್ಶನ ವರದಿ
ಕಳೆದ ರಾತ್ರಿ ಸುರಿದ ಜಿಟಿಜಿಟಿ ಮಳೆಗೆ ನೆಲಕಚ್ಚಿದ ಭತ್ತ : ಆತಂಕದಲ್ಲಿ ಅನ್ನದಾತ
ಕಂಪ್ಲಿ 03: ಕಳೆದ ರಾತ್ರಿ ಸುರಿದ ಜಿಟಿ ಜಿಟಿ ಮಳೆ ಸಹಿತ ಗಾಳಿಗೆ ಭತ್ತ, ಬಾಳೆ ಬೆಳೆಗಳು ನೆಲಕಚ್ಚಿದ್ದು, ಅನ್ನದಾತರು ಕಂಗಾಲಾಗಿದ್ದಾರೆ. ಕಂಪ್ಲಿ ಪಟ್ಟಣ, ರಾಮಸಾಗರ, ನಂ.10 ಮುದ್ದಾಪುರ, ಸಣಾಪುರ, ದೇವಸಮುದ್ರ, ನೆಲ್ಲುಡಿ, ಇಟಗಿ ಸೇರಿದಂತೆ ನಾನಾ ಭಾಗದಲ್ಲಿ ಪೂರ್ವ ಮುಂಗಾರು ಮಳೆಯಿಂದಾಗಿ ರೈತರ ಬದುಕಿಗೆ ತಣ್ಣೀರು ಎರಚುವಂತಾಗಿದೆ.
ಕಳೆದ ರಾತ್ರಿ ಒಂದು ಗಂಟೆ ಸುಮಾರಿಗೆ ಗುಡುಗು, ಸಿಡಿಲು ಸಹಿತ ಮಳೆಗೆ ರೈತರು ಬೆಳೆದ ಬೆಳೆಗಳು ಭೂಮಿ ಪಾಲಾಗುವಂತಾಗಿದ್ದು, ಕೈಯಿಗೆ ಬಂದ ಕುತ್ತು ಬಾಯಿಗೆ ಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸುಮಾರು 4.2 ಮಿ.ಮೀಟರ್ ಮಳೆಯಾಗಿದ್ದು, ದೊಡ್ಡ ಮಳೆ ಅಲ್ಲದಿದ್ದರೂ ಜಿಟಿ ಜಿಟಿಗೆ ಮಳೆಗೆ ಅಲ್ಲಲ್ಲಿ ಭತ್ತದ ಗದ್ದೆಗಳು ನೆಲಕ್ಕುರುಳಿರುವುದು ಕಂಡು ಬಂತು. ಕಂಪ್ಲಿ ತಾಲೂಕು ವ್ಯಾಪ್ತಿಯಲ್ಲಿ ಕೆಲ ರೈತರ ಭತ್ತದ ಬೆಳೆಗಳು ನೆಲಕ್ಕೆ ಬಿದ್ದಿದ್ದು, ತೆನೆ ಉಳಿಸಿಕೊಳ್ಳಲು ಹರಸಾಹಸಪಡುವಂತಾಗಿದೆ. ಮತ್ತು ಬಾಳೆ ಕಂಬಗಳು ಬಾಗಿದ್ದು, ಬಂಬುಗಳಿಂದ ರಕ್ಷಿಸಿಕೊಳ್ಳುವ ಪರಿಸ್ಥಿತಿ ರೈತರದ್ದಾಗಿದೆ.
ಈಗಾಗಲೇ ಕೆಲ ರೈತರ ಹೊಲಗಳಲ್ಲಿ ಬೆಳೆದ ಭತ್ತದ ಫಸಲು ಬಂದಿದ್ದು, ಇನ್ನೇನು ಒಂದೆರಡು ವಾರದಲ್ಲಿ ಕಟಾವು ಮಾಡಲಿದ್ದಾರೆ. ಆದರೆ, ಈಗಿನ ಮಳೆಗೆ ರೈತರಿಗೆ ದಿಕ್ಕು ದೋಚದಂತಾಗಿದ್ದು, ಮತ್ತಷ್ಟು ಮಳೆ ಬಂದರೆ, ಬೆಳೆಗಳು ಸಂಪೂರ್ಣವಾಗಿ ಹಾಳಾಗುವ ಆತಂಕ ಮನೆ ಮಾಡಿದ್ದು, ಫಸಲು ಕಟಾವು ಆಗುವತನಕ ಮಳೆ ಬಾರದಂತೆ ದೇವರ ಮೊರೆ ಹೋಗುವಂತಾಗಿದೆ.