ಲೋಕದರ್ಶನವರದಿ
ರಾಣೇಬೆನ್ನೂರು೨೦: ತಾಲೂಕಿನ ವಡೇರಾಯನಹಳ್ಳಿ ಗ್ರಾಮದಲ್ಲಿ ಏಕಾಏಕಿ ಚಿರತೆ ಕಾಣಿಸಿಕೊಂಡು ಸಿದ್ದಪ್ಪ ಬಣಕಾರ ಎಂಬುವವರ ರೇಷ್ಮೆ ಸಾಕಾಣಿಕೆ ಮನೆಯಲ್ಲಿ ಕಟ್ಟಿದ್ದ ಆಕಳು ಕರುವಿನ ಕೊರಳಿಗೆ ಬಾಯಿ ಹಾಕಿದ ಕ್ಷಣ ಮಾತ್ರದಲ್ಲೇ ಸಿದ್ದಪ್ಪ ಅವರ ಚಾಣಾಕ್ಷತನದಿಂದ ಚಿರತೆ ಗೃಹ ಬಂಧನಕ್ಕೊಳಗಾದ ಘಟನೆ ಶನಿವಾರ ನಡೆದಿದೆ.
ಕರುವು ಕೂಗಿದ ಶಬ್ಧ ಕೇಳಿ ಬಂದ ಸಿದ್ದಪ್ಪ ಬಣಕಾರ ಜೀವದ ಹಂಗು ತೊರೆದು ಕರುವಿನ ಕಾಲು ಹಿಡಿದೆಳೆಯುವ ಮೂಲಕ ಚಿರತೆ ಬಾಯಿಯಿಂದ ಎಳೆ ಕರುವನ್ನು ರಕ್ಷಿಸಿ ತಕ್ಷಣವೇ ರೇಷ್ಮೆ ಮನೆಯ ಬಾಗಿಲು ಮುಚ್ಚಿ ಚಿರತೆಯನ್ನು ಬಂಧಿಸಿದ್ದಾನೆ. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದ್ದಾನೆ.
ಸ್ಥಳಕ್ಕೆ ಪ್ರಾದೇಶಿಕ ಮತ್ತು ವಲಯ ಅರಣ್ಯಾಧಿಕಾರಿಗಳ ತಂಡ ಸಕಲ ಸಿದ್ಧತೆಯೊಂದಿಗೆ ಧಾವಿಸಿತು. ಆ ವೇಳೆಗಾಗಲೇ ಸುದ್ದಿ ತಿಳಿದ ಸುತ್ತಮುತ್ತಲ ಊರುಗಳ ಜನರು ರೇಷ್ಮೆ ಸಾಕಾಣಿಕೆ ಮನೆಯಲ್ಲಿದ್ದ ಚಿರತೆಯನ್ನು ನೋಡಲು ದಂಡು ದಂಡಾಗಿ ಜಮಾಯಿಸಿದ್ದರು. ಕುತೂಹಲದಲ್ಲಿದ್ದ ಜನರನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಹರಸಾಹಸ ಪಡಬೇಕಾಯಿತು.
ಅಟ್ಟ ಏರಿ ಅವಿತಿದ್ದ ಚಿರತೆ ಬಂಧಿಸಲು 9ಗಂಟೆಗಳ ಕಾಯರ್ಾಚರಣೆ ನಡೆಸಿದ ಸಿಬ್ಬಂದಿ, ಬೋನು ಇಟ್ಟು, ಸುತ್ತಲೂ ಬಲೆ ಹೆಣೆಯಲಾಯಿತು. ಬೋನಿನಲ್ಲಿ ನಾಯಿ ಮರಿ ಕಟ್ಟಿ ನಡೆಸಿದ ಮೊದಲ ಪ್ರಯತ್ನ ವಿಫಲವಾದ ಬಳಿಕ ಎರಡನೇ ಪ್ರಯತ್ನದಲ್ಲಿ ಚಿರತೆಯನ್ನು ಖೆಡ್ಡಾಕ್ಕೆ ಬೀಳಿಸುವಲ್ಲಿ ಯಶಸ್ವಿಯಾದರು. ಬಳಿಕ ಅದನ್ನು ಮೆಡ್ಲೇರಿ ವಲಯ ಅರಣ್ಯ ಪ್ರದೇಶಕ್ಕೆ ಸಾಗಿಸಲಾಯಿತು.
ತಡರಾತ್ರಿವರೆಗೂ ಕಾದಿದ್ದ ಜನರು ನಿಟ್ಟುಸಿರು ಬಿಡುವಂತಾಯಿತು.ಕಾಯರ್ಾಚರಣೆ ವೇಳೆ ಉಪ ವಲಯ ಅರಣ್ಯಾಧಿಕಾರಿ ರಾಜು ಪೂಜಾರ, ಪ್ರಾದೇಶಿಕ ಅರಣ್ಯ ವಲಯಾಧಿಕಾರಿ ಪವನ್, ಕುಮಾರಪಟ್ಟಣ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಅಣ್ಣಯ್ಯ, ಎಎಸ್ಐ ಸಿ.ಡಿ ನಡುವಿನಮನಿ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಅಧಿಕಾರಿಗಳು, ಪೋಲೀಸ್ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು