ಮೆಲ್ಬೋರ್ನ, ಅ 26: ಮೊಣಕೈ ಗಾಯಕ್ಕೆ ಒಳಗಾಗಿರುವ ಆಸ್ಟ್ರೇಲಿಯಾ ತಂಡದ ವೇಗಿ ಆಂಡ್ರೆ ಟೈ ಅವರು ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ-20 ಸರಣಿಯಿಂದ ಹೊರ ನಡೆದಿದ್ದಾರೆ. ಆದರೆ, ನಾಯಕ ಆರೋನ್ ಫಿಂಚ್ ಅವರು ಫಿಟ್ ಇರುವುದು ಸ್ಪಷ್ಟವಾಗಿದ್ದು, ನಾಳಿನ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕೆ ಇಳಿಯಲಿದ್ದಾರೆ. ಶುಕ್ರವಾರ ಆಸ್ಟ್ರೇಲಿಯಾ ತಡದೊಂದಿಗೆ ಅಭ್ಯಾಸ ನಡೆಸುತ್ತಿದ್ದ ವೇಳೆ ಟೈ ಅವರು ಬಲ ಮೊಣಕೈಗೆ ಗಾಯವಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಲಂಕಾ ವಿರುದ್ಧದ ಮೂರೂ ಪಂದ್ಯಗಳಿಗೂ ಅಲಭ್ಯರಾಗಿದ್ದಾರೆ. ಅವರ ಸ್ಥಾನಕ್ಕೆ ಮುಂದಿನ ದಿನಗಳ ಬೇರೆ ಆಟಗಾರನನ್ನು ಗುರುತಿಸಲಾಗುವುದು ಎಂದು ತಿಳಿದುಬಂದಿದೆ. ಮಿಚೆಲ್ ಸ್ಟಾರ್ಕ, ಪ್ಯಾಟ್ ಕಮಿನ್ಸ್, ಬಿಲ್ಲಿ ಸ್ಟಾನ್ಲೇಕ್ ಹಾಗೂ ಕೇನ್ ರಿಚಡ್ರ್ಸನ್ ಅವರನ್ನೊಳಗೊಂಡ ಆತಿಥೇಯರ ಬೌಲಿಂಗ್ ವಿಭಾಗ ಬಲಿಷ್ಟವಾಗಿದೆ. ಫಿಂಚ್ ಅವರು ಗಾಯದಿಂದ ಸಂಪೂರ್ಣ ಗುಣಮುಖರಾಗಿದ್ದು ನಾಳಿನ ಮೊದಲ ಟಿ-20 ಪಂದ್ಯದಲ್ಲಿ ವಾರ್ನರ್ ಜತೆ ಆರಂಭಿಕರಾಗಿ ಕಣಕ್ಕೆ ಇಳಿಯಲಿದ್ದಾರೆ. ಇದೇ ತಿಂಗಳ ಆರಂಭದಲ್ಲಿ ದಕ್ಷಿಣ ಆಸ್ಟ್ರೇಲಿಯಾ ವಿರುದ್ಧ ಮಾರ್ಷ್ ಶೀಲ್ಡ್ ಪಂದ್ಯದಲ್ಲಿ ಫಿಂಚ್ ಅವರು ಗಾಯಕ್ಕೆ ಒಳಗಾಗಿದ್ದರು. ಆದರೆ, ದೀಗ ಸಂಪೂರ್ಣ ಫಿಟ್ ಆಗಿದ್ದಾರೆ.